ಹೊರ ರಾಜ್ಯದಿಂದ ಬರುವ ಕನ್ನಡಿಗರ ರೈಲು ಪ್ರಯಾಣ ವೆಚ್ಚ ಸರಕಾರವೇ ಭರಿಸಲಿದೆ: ಸಿಎಂ ಬಿಎಸ್‌ವೈ

Update: 2020-05-10 16:29 GMT

ಬೆಂಗಳೂರು, ಮೇ 10: ದುಬೈ ಸೇರಿದಂತೆ ವಿವಿಧ ದೇಶ ಹಾಗೂ ಹೊರರಾಜ್ಯಗಳಿಂದ ಕರ್ನಾಟಕಕ್ಕೆ ವಾಪಸಾಗುವವರನ್ನು ಕಡ್ಡಾಯವಾಗಿ ಕ್ವಾರಂಟೈನ್ ಮಾಡುವುದು ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದರು.

ರವಿವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಿದ ಯಡಿಯೂರಪ್ಪ, ಕರ್ನಾಟಕ ರಾಜ್ಯಕ್ಕೆ ಆಗಮಿಸುವ ಎಲ್ಲರೂ ಕಡ್ಡಾಯವಾಗಿ ಆನ್‍ಲೈನ್ ಮೂಲಕ ನೋಂದಣಿ ಮಾಡಬೇಕು. ಬರುವವರು ಕಡ್ಡಾಯವಾಗಿ ರಾಜ್ಯದಿಂದ ಅನಿವಾರ್ಯವಾಗಿ ಹೊರಹೋಗಿ ಸಿಲುಕಿಕೊಂಡಿರುವವರಾಗಿರಬೇಕು. ಎಲ್ಲಿಗೆ ಬರುತ್ತೇವೆ ಮತ್ತು ಎಂದು ಬರುತ್ತೇವೆ ಎಂಬುದನ್ನು ನೋಂದಣಿ ಮಾಡಬೇಕು ಎಂದು ಸೂಚಿಸಿದರು.

ಹೊರಗಿನಿಂದ ಬರುವವರ ಕ್ವಾರಂಟೈನ್ ಸೌಲಭ್ಯಕ್ಕೆ ಅನುಗುಣವಾಗಿ ಅವರನ್ನು ರಾಜ್ಯಕ್ಕೆ ಕರೆಸಿಕೊಳ್ಳಲಾಗುವುದು. ಬಂದ ತಕ್ಷಣ ಯಾರೂ ಅವರ ಊರಿಗೆ ತೆರಳುವಂತಿಲ್ಲ. ಬರುವ ಎಲ್ಲರೂ ಕಡ್ಡಾಯವಾಗಿ 14 ದಿನಗಳ ಕಾಲ ಕ್ವಾರಂಟೈನ್ ಆಗಲೇಬೇಕು. ಕ್ವಾರಂಟೈನ್‍ಗೆ ಸಿದ್ಧವಿರುವವರು ಮಾತ್ರ ನೋಂದಣಿ ಮಾಡಿಕೊಳ್ಳಬೇಕು ಎಂದು ಬಿಎಸ್‍ವೈ ಸೂಚನೆ ನೀಡಿದರು.

ಸಭೆಯಲ್ಲಿ ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಡಾ.ಅಶ್ವಥ್ ನಾರಾಯಣ, ಸಚಿವರಾದ ಸುರೇಶ್ ಕುಮಾರ್, ಆರ್.ಅಶೋಕ್, ಡಾ.ಕೆ.ಸುಧಾಕರ್, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್, ಆರೋಗ್ಯ ಇಲಾಖೆ ಸೇರಿದಿಂತೆ ವಿವಿಧ ಇಲಾಖೆ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

ಪ್ರಯಾಣ ವೆಚ್ಚ ಸರಕಾರದ್ದು

ಹೊರ ರಾಜ್ಯದಿಂದ ರೈಲುಗಳಲ್ಲಿ ಬರುವ ಕನ್ನಡಿಗರ ರೈಲು ಪ್ರಯಾಣದ ವೆಚ್ಚ ರಾಜ್ಯ ಸರಕಾರವೇ ಭರಿಸಲಿದೆ. ಬೇರೆ ರಾಜ್ಯದಲ್ಲಿ ಕೊರೋನ ವೈರಸ್ ಸೋಂಕು ಪರೀಕ್ಷೆ ಮಾಡಿದ್ದರೂ ಇಲ್ಲಿಯೂ ಕಡ್ಡಾಯವಾಗಿ ಕೋವಿಡ್-19 ಪರೀಕ್ಷೆ ಮಾಡಿಸಲೇಬೇಕು.

-ಯಡಿಯೂರಪ್ಪ, ಮುಖ್ಯಮಂತ್ರಿ

ಎಲ್ಲಿ ಮೃತರಾಗುತ್ತಾರೋ ಅಲ್ಲೆ ಅಂತ್ಯಕ್ರಿಯೆ

ಇನ್ನು ಮುಂದೆ ಬೇರೆ ರಾಜ್ಯಗಳಲ್ಲಿ ಮೃತರಾದರೆ ಅವರ ಶವಗಳನ್ನು ಕರ್ನಾಟಕ ರಾಜ್ಯಕ್ಕೆ ತರುವಂತಿಲ್ಲ. ಎಲ್ಲಿ ಮೃತರಾಗುತ್ತಾರೋ ಅಲ್ಲಿಯೇ ಅಂತ್ಯ ಸಂಸ್ಕಾರ ನೆರವೇರಿಸಬೇಕು. ರಾಜ್ಯದಲ್ಲಿ ತೀರಿಕೊಂಡರೂ ತೀರಿಕೊಂಡ ಸ್ಥಳದಲ್ಲೆ ಅಂತ್ಯಕ್ರಿಯೆ ಮಾಡಬೇಕು ಎಂದು ಯಡಿಯೂರಪ್ಪ ನಿರ್ದೇಶನ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News