ಲಾಕ್‍ಡೌನ್ ಸಡಿಲಿಕೆ ಬಳಿಕ ಸೋಂಕಿನ ಪ್ರಕರಣ ಅಧಿಕ: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿದ ಆತಂಕ

Update: 2020-05-10 17:55 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ 10: ಲಾಕ್‍ಡೌನ್ ಸಡಿಲಿಕೆ ಮಾಡಿದ ಬೆನ್ನಲ್ಲೇ ಕೊರೋನ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಲಿರುವುದು ಆತಂಕ ಮೂಡಿಸಿದೆ. ಅದರ ಬೆನ್ನಲ್ಲೇ ಹೆಣ್ಣೂರಿನಲ್ಲಿ ಕೊರೋನ ಸೋಂಕಿತ ಮಹಿಳೆಯೊಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇದರಿಂದಾಗಿ ಹೆಣ್ಣೂರು ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಸಿಲಿಕಾನ್ ವ್ಯಾಲಿ ಬೆಂಗಳೂರಿಗೆ ಕೊರೋನ ಹಾಟ್ ಸ್ಪಾಟ್ ಎನ್ನುವ ಕುಖ್ಯಾತಿ ಬಂದೊದಗಿದೆ. ಇದಕ್ಕೆ ಕಾರಣ ಹತೋಟಿಗೆ ಬಾರದ ಕೊರೋನ ಪ್ರಕರಣ. ಪಾದರಾಯನಪುರ ಹಾಗೂ ಹೊಂಗಸಂದ್ರಕ್ಕೆ ಸೀಮಿತವಾಗಿದ್ದ ಈ ಆತಂಕ ಇದೀಗ ಬಿಬಿಎಂಪಿಯ ಹಗದೂರು ವಾರ್ಡ್‍ಗೆ ಶಿಫ್ಟ್ ಆದಂತಿದೆ. ಇಲ್ಲಿ ಸಂಭವಿಸಿರುವ 56ರ ಆಸುಪಾಸಿನ ಮಹಿಳೆಯ ಸಾವು ಆತಂಕವನ್ನು ಇಮ್ಮಡಿಗೊಳಿಸಿದೆ.

ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಆಕೆಗೆ ಕೊರೋನ ಸೋಂಕಿರುವುದು ದೃಢಪಟ್ಟಿದೆ. ಹೀಗಾಗಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಆರೋಗ್ಯ ಸ್ಥಿತಿ ಸುಧಾರಿಸದ ಹಿನ್ನೆಲೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಮಹಿಳೆಯ ಸ್ವಾಬ್ ಟೆಸ್ಟ್ ಅನ್ನು ಹೈದರಾಬಾದ್‍ನ ಲ್ಯಾಬ್‍ಗೆ ಕಳುಹಿಸಲಾಗಿತ್ತು. ಆಗ ವರದಿಯಲ್ಲಿ ಕೊರೋನ ಪಾಸಿಟಿವ್ ದೃಢಫಟ್ಟಿತ್ತು. ಈ ಹಿನ್ನೆಲೆಯಲ್ಲಿ ಮೇ 6 ರಂದು ಬೆಂಗಳೂರು ನಾರ್ಥ್ ಆಸ್ಪತ್ರೆಗೆ ಅಡ್ಮಿಟ್ ಮಾಡಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಮಹಿಳೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಇದರಿಂದಾಗಿ ಈಕೆಗೆ ಚಿಕಿತ್ಸೆ ನೀಡಿದ್ದ ಆಸ್ಪತ್ರೆಯ 7 ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದ್ದು ಜಿಲ್ಲಾಧಿಕಾರಿ ಶಿವಮೂರ್ತಿ ಅವರ ಆದೆಶದ ಮೇರೆಗೆ  15 ದಿನಗಳ ಕಾಲ ಆಸ್ಪತ್ರೆ ಬಂದ್ ಮಾಡಲಾಗಿದೆ. ಮಹಿಳೆಯ ಮೃತದೇಹವನ್ನು ಸಿ.ವಿ.ರಾಮನ್ ನಗರದ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ಕುಟುಂಬಸ್ಥರಿಗೆ ಮೃತದೇಹ ರವಾನೆ ಮಾಡಿಲ್ಲ.

ಮಹಿಳೆಯ ಸಾವಿನಿಂದ ಆಕೆಯ ಜೊತೆ ವಾರ್ಡ್‍ನಲ್ಲಿದ್ದ ಏಳು ರೋಗಿಗಳಿಗೆ ಆತಂಕ ಶುರುವಾಗಿದೆ. ಹಾಗೆಯೇ ಆಕೆಯ ಜತೆಗಿದ್ದ ಸಂಬಂಧಿಗಳಿಗೂ ಹೆದರಿಕೆ ಶುರುವಾಗಿದೆ. 25 ಜನರ ಪ್ರಥಮ ಸಂಪರ್ಕಿತರ ಪಟ್ಟಿ ಸಿದ್ಧ ಮಾಡಲಾಗಿದ್ದು, ಹೆಣ್ಣೂರು ವಾರ್ಡ್‍ನಲ್ಲಿ ಭೀತಿ ಶುರುವಾಗಿದೆ.

ಆಸ್ಪತ್ರೆಯ ಸುತ್ತಮುತ್ತಲ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದೆ. ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಹಾಗೂ ಜಿಲ್ಲಾಧಿಕಾರಿ ಶಿವಮೂರ್ತಿ ಅವರು ಈ ಬಗ್ಗೆ ಮಾತುಕತೆ ನಡೆಸಿದ್ದಾರೆನ್ನಲಾಗಿದ್ದು ಮುಂದೆ ಏನು ಕ್ರಮ ಕೈಗೊಳ್ಳಬೇಕೆನ್ನುವ ಚಿಂತೆಯಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News