×
Ad

ಸಂಚಾರಿ ಫೀವರ್ ಕ್ಲಿನಿಕ್ ಗೆ ಮುಖ್ಯಮಂತ್ರಿ ಯಡಿಯೂರಪ್ಪ ಚಾಲನೆ

Update: 2020-05-11 16:34 IST

ಬೆಂಗಳೂರು : ಕೋವಿಡ್ 19 ತಪಾಸಣೆ ಮಾಡುವ ಸಂಚಾರಿ ಫೀವರ್ ಕ್ಲಿನಿಕ್ ಗಳನ್ನು ಸಾರ್ವಜನಿಕರು  ಸದುಪಯೋಗ ಪಡಿಸಿಕೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕರೆ ನೀಡಿದರು.

ಅವರು ಇಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಹಯೋಗದಲ್ಲಿ ಹೌಸ್ ಜಾಯ್ ಸಂಸ್ಥೆ, ಆಕ್ಟ್  ಕೋವಿಡ್ ಫಂಡ್ ಹಾಗೂ ಮತ್ತಿತರ ಪಾಲುದಾರರು ಅಭಿವೃದ್ಧಿಪಡಿಸಿರುವ ಸಂಚಾರಿ ಫೀವರ್ ಕ್ಲಿನಿಕ್ ಗಳಿಗೆ ಚಾಲನೆ ನೀಡಿ ಮಾತನಾಡುತ್ತಿದ್ದರು.

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಹಳೆಯ  ಬಸ್ಸುಗಳನ್ನು  ಸಂಚಾರಿ ಕ್ಲಿನಿಕ್ ಗಳಾಗಿ ಮಾರ್ಪಡಿಸಲಾಗಿದೆ.  ಸಂಚಾರಿ ಫೀವರ್ ಕ್ಲಿನಿಕ್ ಗಳು ಸಂಪೂರ್ಣವಾಗಿ ಸುಸಜ್ಜಿತವಾದ ಸೌಲಭ್ಯ ಗಳನ್ನು ಹೊಂದಿದ್ದು, ಹಾಸಿಗೆಗಳು ಹಾಗೂ ಸಮಾಲೋಚನೆಗೆಂದು ಎರಡು ಪ್ರತ್ಯೇಕ ವಲಯಗಳನ್ನು ಹೊಂದಿದೆ. ಕೆಂಪು ವಲಯಗಳಲ್ಲಿ ಗರಿಷ್ಠ ನಿವಾಸಿಗಳ ತಪಾಸಣೆ ಮಾಡಲಿದೆ.  ಸಂಚಾರಿ ಫೀವರ್ ಕ್ಲಿನಿಕ್ ನಲ್ಲಿ ಒಬ್ಬ ವೈದ್ಯರು, ಮೂವರು ದಾದಿಯರು  ಹಾಗೂ ಒಬ್ಬ ಲಾಬ್ ಟೆಕ್ನಿಷಿಯನ್ ಹಾಗೂ ಸ್ವಯಂ ಸೇವಾ ಕಾರ್ಯಕರ್ತರು ಇರುತ್ತಾರೆ. ಈ ರೀತಿಯ ತಂಡವನ್ನು ಹೊಂದಿದ  4 ಸಂಚಾರಿ ಫೀವರ್ ಕ್ಲಿನಿಕ್ ಗಳು ನಿಯಂತ್ರಣಾ ವಲಯ ಗಳನ್ನು ಒಳಗೊಂಡಂತೆ ಬೆಂಗಳೂರು ನಗರದಾದ್ಯಂತ ಕಾರ್ಯನಿರ್ವಹಿಸಲಿದೆ ಎಂದು ಸಿಎಂ ವಿವರಿಸಿದರು.

ತಪಾಸಣೆಯಲ್ಲಿ ಕೊರೋನ ಧೃಢಪಟ್ಟವರ ಮಾಹಿತಿಯನ್ನು ಸರ್ಕಾರದೊಂದಿಗೆ ಹಂಚಿಕೊಳ್ಳಲಾಗುವುದು ಎಂದ ಅವರು ಆಸ್ಪತ್ರೆಗೆ ಭೇಟಿ ನೀಡಲು ಸಾಧ್ಯವಾಗದ ನಾಗರಿಕರು, ಈ  ಸಂಚಾರಿ ಫೀವರ್ ಕ್ಲಿನಿಕ್ ಗಳಲ್ಲಿಯೇ ಪರೀಕ್ಷೆಗೊಳಪಡಬಹುದು. ಗಂಟಲು ದ್ರವ ಮಾದರಿ ಸಂಗ್ರಹಕ್ಕೂ ಸಂಚಾರಿ ಫೀವರ್ ಕ್ಲಿನಿಕ್ ಗಳಲ್ಲಿ ಅವಕಾಶ ಕಲ್ಪಿಸಲಾಗಿದೆ. ಕೊರೋನ ಸೋಂಕು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಅತ್ಯಧಿಕ ತಪಾಸಣೆಗಳ ಅಗತ್ಯವಿದೆ.  ಇದಕ್ಕಾಗಿ ಮೊಬೈಲ್‌ ಬೂತ್‌ಗಳನ್ನು ರಾಜ್ಯ ಸರ್ಕಾರ ಆರಂಭಿಸಿದೆ ಎಂದು ತಿಳಿಸಿದರು.

ಕೋವಿಡ್ 19 ನಿಯಂತ್ರಣಕ್ಕೆ ಸರ್ಕಾರದೊಂದಿಗೆ ಖಾಸಗಿ ಸಂಸ್ಥೆಗಳು ಕೈಜೋಡಿಸಿರುವುದು ಸ್ವಾಗತಾರ್ಹ.  ಈ ನಿಟ್ಟಿನಲ್ಲಿ ಹೌಸ್ ಜಾಯ್ ಸಂಸ್ಥೆಯ ಸಂಚಿತ್ ಗೌರವ್ ಮತ್ತು ಎಸ್.ಆರ್.ಎಲ್ ಡೈಗನೊಸ್ಟಿಕ್ಸ್ ನ ಮುಹಮ್ಮದ್ ನಿಯಮತುಲ್ಲಾ ಮತ್ತು ಡಾ. ಕುನಾಲ್ ಶರ್ಮಾ, ಸಂಸದ ತೇಜಸ್ವಿ ಸೂರ್ಯ ಹಾಗೂ ಎಲ್ಲ ಪಾಲುದಾರರ ಪ್ರಯತ್ನ ಶ್ಲಾಘನೀಯ ಎಂದರು.

ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ, ಕಂದಾಯ ಸಚಿವ ಆರ್.ಅಶೋಕ್,  ಸಂಸದ ತೇಜಸ್ವಿ ಸೂರ್ಯ, ಹೌಸ್ ಜಾಯ್ ಸಂಸ್ಥೆಯ ಸಂಚಿತ್ ಗೌರವ್ ಮತ್ತು ಎಸ್.ಆರ್.ಎಲ್ ಡೈಗನೊಸ್ಟಿಕ್ಸ್ ನ ಮೊಹಮದ್ ನಿಯಮತುಲ್ಲಾ, ಡಾ. ಕುನಾಲ್ ಶರ್ಮಾ,  ಹಾಗೂ ACT ಕೋವಿಡ್ ಫಂಡ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News