ಕೊರೋನ ಹೆಸರಲ್ಲಿ ದ್ವೇಷ ಹರಡಿದ ಆರೋಪ: ಸಂಸದೆ ಶೋಭಾ ಕರಂದ್ಲಾಜೆ ಬಂಧನಕ್ಕೆ ಹೆಚ್ಚಿದ ಆಗ್ರಹ

Update: 2020-05-11 13:48 GMT

ಮಂಗಳೂರು: ಕೊರೋನ ಹೆಸರನ್ನು ಬಳಸಿಕೊಂಡು ಧರ್ಮಗಳ ಮಧ್ಯೆ ಒಡಕು ಮೂಡಿಸಲು, ದ್ವೇಷ ಹರಡಲು ಸಂಸದೆ ಶೋಭಾ ಕರಂದ್ಲಾಜೆ ಯತ್ನಿಸುತ್ತಿದ್ದಾರೆ ಎಂದ ಆರೋಪಿಸಿ ಟ್ವಿಟರ್ ನಲ್ಲಿ  #ArrestShobhaKarandlaje ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗುತ್ತಿದೆ. ಅವರನ್ನು ಬಂಧಿಸಬೇಕು ಎನ್ನುವ ಒತ್ತಾಯ ಕೇಳಿಬರುತ್ತಿದೆ.

ಶಿವಮೊಗ್ಗಕ್ಕೆ ಗುಜರಾತ್ ನ ಅಹಮದಾಬಾದ್ ನಿಂದ ಹಿಂದಿರುಗಿದ್ದ 8 ಮಂದಿಯಲ್ಲಿ ಕೊರೋನ ವೈರಸ್ ಇರುವುದು ದೃಢಪಟ್ಟಿತ್ತು. ಈ ಬಗ್ಗೆ ಟ್ವೀಟ್ ಮಾಡಿದ ಶೋಭಾ ಕರಂದ್ಲಾಜೆ, “ತಬ್ಲೀಗಿಗಳು ಇಡೀ ದೇಶಕ್ಕೆ ದುಸ್ವಪ್ನ. ಅವರು ನಮ್ಮ ಆರೋಗ್ಯ ಕಾರ್ಯಕರ್ತರ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ. ತಲೆಮರೆಸಿಕೊಂಡು ದೇಶದ ದಾರಿ ತಪ್ಪಿಸಿದ್ದಾರೆ. ಈ ಬೇಜಬ್ದಾರಿಯುತ ಜಿಹಾದಿಗಳಿಂದ ಗ್ರೀನ್ ಶಿವಮೊಗ್ಗ ರೆಡ್ ಶಿವಮೊಗ್ಗ ಆಗಿದೆ. ಈ ವರ್ತನೆಯ ಹಿಂದಿನ ನೈಜ ಉದ್ದೇಶದ ಬಗ್ಗೆ ತನಿಖೆ ನಡೆಬೇಕು” ಎಂದಿದ್ದರು. ಈ ಟ್ವೀಟ್ ಜೊತೆ ‘ತಬ್ಲೀಗ್ ಜಮಾತ್ ಗೆ ಹೋಗಿದ್ದ 9 ಜನ ಗ್ರೀನ್ ಝೋನ್ ಶಿವಮೊಗ್ಗಕ್ಕೆ ವಾಪಸ್’ ಎಂದು ಬರೆಯಲಾಗಿದ್ದ ಸುದ್ದಿಯೊಂದರ ಸ್ಕ್ರೀನ್ ಶಾಟ್ ಹಾಕಿದ್ದರು.

ಸಂಸದೆಯ ಈ ಟ್ವೀಟ್ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದು, ಕೋಮುದ್ವೇಷವನ್ನು ಹರಡಿದ್ದಕ್ಕಾಗಿ ಅವರನ್ನು ಬಂಧಿಸಬೇಕು ಎನ್ನುವ ಆಗ್ರಹ ಕೇಳಿ ಬರುತ್ತಿದೆ.

“ಸುಳ್ಳು ಮತ್ತು ದ್ವೇಷ ಹರಡುವ ಬದಲು ತನ್ನ ಕ್ಷೇತ್ರದ ಬಗ್ಗೆ ಗಮನಹರಿಸುವುದು ಸಂಸದೆಯಾಗಿ ಅವರ ಕರ್ತವ್ಯವಾಗಿದೆ”, “ಶೋಭಾ ಕರಂದ್ಲಾಜೆ ವಿರುದ್ಧ ಐಪಿಸಿ ಸೆಕ್ಷನ್ 153ಎ ಅಡಿ ಪ್ರಕರಣ ದಾಖಲಿಸಿ”, “ಇದು ಮೊದಲ ಪ್ರಕರಣವಲ್ಲ, ಅವರು ಯಾವತ್ತೂ ದ್ವೇಷ ಹರಡಲು ಸುಳ್ಳನ್ನು ಟ್ವೀಟ್ ಮಾಡುವವರು”, “ಶೋಭಾ ಕರಂದ್ಲಾಜೆಯಂತಹ ರಾಜಕಾರಣಿಗಳಿಂದ ಇಂತಹ ಟ್ವೀಟ್ ಗಳು ನಿರೀಕ್ಷಿತ. ಕೋಮುವಾದ ಅವರ ಶಕ್ತಿ. ಸಮಾಜದಲ್ಲಿ ಇಂತಹ ದ್ವೇಷ ನೆಲೆಸುವವರೆಗೆ ಅವರು ಜನರಿಗಾಗಿ ಕೆಲಸ ಮಾಡುವುದಿಲ್ಲ” ಎಂದು ಟ್ವಿಟರಿಗರು ಟ್ವೀಟ್ ಮಾಡಿದ್ದು, ಶೋಭಾ ಕರಂದ್ಲಾಜೆಯವರನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News