ವಿದೇಶದಿಂದ ಬೆಂಗಳೂರಿಗೆ ಆಗಮಿಸಿದ 323 ಕನ್ನಡಿಗರು
ಬೆಂಗಳೂರು, ಮೇ 11: ಕೊರೋನ ಲಾಕ್‍ಡೌನ್ ಸಂದರ್ಭದಲ್ಲಿಯೂ ಸರಕಾರ ವಿದೇಶದಿಂದ ಕನ್ನಡಿಗರನ್ನು ಕರೆತರಲು ಮುಂದಾಗಿದ್ದು, ಈ ಪೈಕಿ ಸೋಮವಾರ ಬೆಳಗ್ಗೆ ಏರ್ ಇಂಡಿಯಾ ವಿಮಾನದಲ್ಲಿ ಲಂಡನ್‍ನಿಂದ ಬೆಂಗಳೂರಿಗೆ 323 ಕನ್ನಡಿಗರು ಆಗಮಿಸಿದ್ದಾರೆ.
ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 323 ಕನ್ನಡಿಗರು ಆಗಮಿಸಿದ್ದು, ಕೆಐಎಎಲ್‍ನಲ್ಲಿ ಮೂರು ವೈದ್ಯರ ತಂಡದಿಂದ ಪ್ರಯಾಣಿಕರ ತಪಾಸಣೆ ಮಾಡಲಾಗುತ್ತಿದೆ. ವೈದ್ಯಕೀಯ ತಪಾಸಣೆ ಮುಗಿದ ನಂತರ ಎ, ಬಿ, ಸಿ ಎಂದು ವಿಂಗಡನೆ ಮಾಡಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.
ಕೊರೋನ ವೈರಸ್ ಸೋಂಕು ಲಕ್ಷಣ ಕಂಡು ಬಂದವರನ್ನು ಕೆಐಎಎಲ್‍ನಿಂದ ನೇರವಾಗಿ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗುತ್ತಿದೆ. ಉಳಿದವರಿಗೆ ಹೊಟೇಲ್‍ಗಳಲ್ಲಿ ಕ್ವಾರಂಟೈನ್ ಮಾಡಲು ಮಾಡಲು ವ್ಯವಸ್ಥೆ ಮಾಡಲಾಗಿದೆ.
ಕೆಐಎಎಲ್‍ನಿಂದ ಬಿಎಂಟಿಸಿ ಬಸ್‍ಗಳಲ್ಲಿ ವಿದೇಶದಿಂದ ಬಂದವರನ್ನು ಸ್ಥಳಾಂತರ ಮಾಡಲು ನಿರ್ಧರಿಸಲಾಗಿದ್ದು, ಒಂದು ಬಸ್‍ನಲ್ಲಿ 20 ಜನರಂತೆ ಸ್ಥಳಾಂತರಿಸಲು ವ್ಯವಸ್ಥೆ ಮಾಡಲಾಗಿದ್ದು, ಪ್ರಯಾಣದ ವೆಚ್ಚವನ್ನು ಅವರೇ ಭರಿಸಬೇಕಾಗಿದೆ.
ಮುಂಜಾಗ್ರತ ಕ್ರಮವಾಗಿ ಕೆಐಎಎಲ್ ಬಳಿ ಹಾಗೂ ಕೆಐಎಎಲ್‍ನಿಂದ ಬೆಂಗಳೂರಿಗೆ ಬರುವ ಮಾರ್ಗದಲ್ಲಿಯೂ ಭದ್ರತೆಗೆ ಪೊಲೀಸ್ ನಿಯೋಜನೆ ಮಾಡಲಾಗಿದೆ. ವಿದೇಶದಿಂದ ಬಂದವರನ್ನು ಬೆಂಗಳೂರಿನ ತಾಜ್ ವಿವಾಂತ, ಲೆಮನ್‍ಟ್ರೀ ಹೊಟೇಲ್, ಫೈವ್ ಸ್ಟಾರ್, ತ್ರೀ ಸ್ಟಾರ್ ಹೊಟೇಲ್‍ಗಳಲ್ಲಿ ಕ್ವಾರಂಟೈನ್ ಮಾಡಲು ವ್ಯವಸ್ಥೆ ಮಾಡಲಾಗಿದೆ.