ಬೆಂಗಳೂರು: ಖಾಸಗಿ ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷಕ್ಕೆ ಮಹಿಳೆ ಸಾವು ಆರೋಪ; ಶವವಿಟ್ಟು ಕುಟುಂಬಸ್ಥರ ಪ್ರತಿಭಟನೆ

Update: 2020-05-11 14:38 GMT

ಬೆಂಗಳೂರು, ಮೇ 11: ಜಯನಗರದ ಖಾಸಗಿ ಆಸ್ಪತ್ರೆಯ ಸಿಬ್ಬಂದಿಯ ನಿರ್ಲಕ್ಷ್ಯಕ್ಕೆ ಮಹಿಳೆ ಮೃತಪಟ್ಟಿದ್ದಾರೆ ಎಂದು ಆರೋಪಿಸಿ, ಆಸ್ಪತ್ರೆಯ ಮುಂದೆ ಮಹಿಳೆಯ ಶವವಿಟ್ಟು ಕುಟುಂಬಸ್ಥರು ಪ್ರತಿಭಟನೆ ನಡೆಸಿದ ಘಟನೆ ನಡೆಯಿತು.

ಮೇ 9ರ ಶನಿವಾರ ಸಂಜೆ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಸತ್ಯವತಿ ಎಂಬುವವರನ್ನು ಜಯನಗರದ ರಾಮಕೃಷ್ಣ ಸೇವಾಶ್ರಮ ಆಸ್ಪತ್ರೆಗೆ ದಾಖಲಿಸಿದ್ದರು. ಒಂದು ದಿನ ಚಿಕಿತ್ಸೆ ನೀಡಿ ನಂತರ ಬೇರೆ ಆಸ್ಪತ್ರೆಗೆ ತೆಗೆದುಕೊಂಡು ಹೋಗಲು ವೈದ್ಯರು ಸಲಹೆ ನೀಡಿದ್ದರು. ಹೀಗಾಗಿ ಪಕ್ಕದಲ್ಲೇ ಇರುವ ಖಾಸಗಿ ಆಸ್ಪತ್ರೆಗೆ ಸತ್ಯವತಿ ಅವರನ್ನು ಕರೆದುಕೊಂಡು ಕುಟುಂಬಸ್ಥರು ಬಂದಿದ್ದಾರೆ. ಆದರೆ, ಆಸ್ಪತ್ರೆ ಸಿಬ್ಬಂದಿ ರೋಗಿಯನ್ನು ಸುಮಾರು 45 ನಿಮಿಷಗಳ ಕಾಲ ಆಸ್ಪತ್ರೆಯ ಮುಂದೆ ನಿಲ್ಲಿಸಿದ್ದಾರೆ ಎನ್ನಲಾಗಿದ್ದು, ರೋಗಿ ಸತ್ಯವತಿ ತೀವ್ರ ಉಸಿರಾಟದಿಂದ ಆ್ಯಂಬುಲೆನ್ಸ್ ನಲ್ಲೇ ಪರದಾಡಿದ್ದಾರೆ. ಬಳಿಕ ಸತ್ಯವತಿ ಕುಟುಂಬಸ್ಥರು ಗಲಾಟೆ ಮಾಡಿದ ಹಿನ್ನೆಲೆಯಲ್ಲಿ ಸಿಬ್ಬಂದಿ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಬಳಿಕ ಸತ್ಯವತಿ ಮೃತಪಟ್ಟಿರುವ ಬಗ್ಗೆ ಆಸ್ಪತ್ರೆಯ ವೈದ್ಯರು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಸತ್ಯವತಿ ಮೃತಪಟ್ಟಿದ್ದಾರೆ ಎಂದು ಆರೋಪಿಸಿ ಕುಟುಂಬಸ್ಥರು ಮೃತದೇಹವನ್ನು ಪಡೆಯುವುದಿಲ್ಲ ಎಂದು ಆಸ್ಪತ್ರೆಯ ಮುಂದೆ ಪ್ರತಿಭಟನೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News