×
Ad

ಕೇಂದ್ರದಿಂದ ಸೂಕ್ತ ನೆರವು ಬಾರದ ಹೊರತು ಕೊರೋನ ನಿಯಂತ್ರಣ ಕಷ್ಟ: ಕುಮಾರಸ್ವಾಮಿ

Update: 2020-05-11 19:45 IST

ಬೆಂಗಳೂರು, ಮೇ 11: `ಕೊರೋನ ಲಾಕ್‍ಡೌನ್‍ನಿಂದಾಗಿ ರಾಜ್ಯ ಹಣಕಾಸಿನ ತೊಂದರೆ ಅನುಭವಿಸುತ್ತಿದೆ. ಈ ಹೊತ್ತಲ್ಲಿ ಕೇಂದ್ರದಿಂದ ಸೂಕ್ತ ನೆರವು ಬಾರದ ಹೊರತು ಕೋವಿಡ್-19 ನಿಯಂತ್ರಣ ಕಷ್ಟವಾಗಲಿದೆ' ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಸೋಮವಾರ ಸರಣಿ ಟ್ವೀಟ್ ಮಾಡಿರುವ ಅವರು, 'ಕೋವಿಡ್ ಪ್ಯಾಕೇಜ್ ಜೊತೆಗೆ ಜಿಎಸ್ಟಿ ಬಾಕಿ, ನೆರೆ-ಬರ ಪರಿಹಾರ ಸೇರಿದಂತೆ ಕೇಂದ್ರದಿಂದ ಬರಬೇಕಾದ ಇತರ ಬಾಕಿ ಹಣದ ಬಗ್ಗೆಯೂ ಮುಖ್ಯಮಂತ್ರಿ ಯಡಿಯೂರಪ್ಪ, ಪ್ರಧಾನಿ ಮೋದಿ ಜೊತೆಗಿನ ಸಭೆಯಲ್ಲಿ ಮನವಿ ಮಾಡಬೇಕು' ಎಂದು ಸಲಹೆ ಮಾಡಿದ್ದಾರೆ.

ಕೊರೋನ ವೈರಸ್ ಸೋಂಕು ನಿಯಂತ್ರಣ, ಲಾಕ್‍ಡೌನ್ ಕುರಿತಂತೆ ಇಂದು ಪ್ರಧಾನಿ ಮೋದಿ ಅವರು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸಲಿದ್ದಾರೆ. ಇದರಲ್ಲಿ ರಾಜ್ಯದ ಸಿಎಂ ಬಿಎಸ್‍ವೈ ಅವರೂ ಇರಲಿದ್ದಾರೆ. ಈ ಸಭೆಯಲ್ಲಿ ಬಿಎಸ್‍ವೈ ಅವರು ರಾಜ್ಯಕ್ಕೆ ಕೋವಿಡ್ ಪ್ಯಾಕೇಜ್ ನೀಡುವಂತೆ ಮೋದಿ ಅವರನ್ನು ಆಗ್ರಹಿಸಬೇಕು' ಎಂದು ಕುಮಾರಸ್ವಾಮಿ ಒತ್ತಾಯ ಮಾಡಿದ್ದಾರೆ.

'ಕೊರೋನ ವಿರುದ್ಧದ ಹೋರಾಟಕ್ಕಾಗಿ ಕೇಂದ್ರ ಸರಕಾರ, ಪಿಎಂ ಕೇರ್ಸ್ ನಿಧಿ ಸ್ಥಾಪಿಸಿದೆ. ಇದಕ್ಕೆ ಸಂಸದರಾದಿಯಾಗಿ, ಉದ್ಯಮಿಗಳ, ನಾಗರಿಕರು ಉದಾರ ದೇಣಿಗೆ ನೀಡಿದ್ದಾರೆ. ಹೀಗಿದ್ದರೂ ಕೇಂದ್ರದಿಂದ ರಾಜ್ಯಕ್ಕೆ ಈವರೆಗೆ ಕೋವಿಡ್ ಎದುರಿಸಲು ಸೂಕ್ತ ಆರ್ಥಿಕ ನೆರವು ಬಂದಿಲ್ಲ ಎಂಬುದನ್ನು ಮೋದಿ ಅವರಿಗೆ ಬಿಎಸ್‍ವೈ ಮನನ ಮಾಡಬೇಕು' ಎಂದು ಕುಮಾರಸ್ವಾಮಿ ಸೂಚಿಸಿದ್ದಾರೆ.

'ಮೂರು ದಿನಗಳ ಅಂಕಿ-ಅಂಶ ಗಮನಿಸಿದರೆ ರಾಜ್ಯದಲ್ಲಿ ಕೋವಿಡ್ ಹೆಚ್ಚುತ್ತಿರುವಂತೆ ಕಾಣುತ್ತಿದೆ. ಹೀಗಾಗಿ ವೈದ್ಯಕೀಯ ಕ್ರಮಗಳನ್ನು ಬಿಗಿಗೊಳಿಸಬೇಕಿದೆ. ಜೊತೆಗೆ ಲಾಕ್‍ಡೌನ್‍ನಿಂದ ನಷ್ಟಕ್ಕೊಳಗಾಗಿರುವ ಜನರಿಗೆ ಆರ್ಥಿಕ ಪರಿಹಾರ ನೀಡಬೇಕಿದೆ. ದೊಡ್ಡಮಟ್ಟದಲ್ಲಿ ತೆರಿಗೆ ಸಂಗ್ರಹಿಸಿ ಕೇಂದ್ರಕ್ಕೆ ಕೊಡುವ ಕರ್ನಾಟಕದಂತಹ ದೊಡ್ಡ ರಾಜ್ಯಕ್ಕೆ ಸೂಕ್ತ ಪ್ಯಾಕೇಜ್ ಅತ್ಯಗತ್ಯ' ಎಂದು ಅವರು ಪ್ರತಿಪಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News