‘ಮುಸ್ಲಿಮರ ಓಲೈಕೆ’ ಎಂದು ಮೋದಿಯನ್ನೇ ಟಾರ್ಗೆಟ್ ಮಾಡಿದ ಕೇಸರಿ ಟ್ರೋಲ್ ಪಡೆಗಳು !

Update: 2020-05-11 16:33 GMT

ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೋವಿಡ್-19 ಸಾಂಕ್ರಾಮಿಕದಲ್ಲಿ ಧರ್ಮವನ್ನು ಕಾಣುವುದು ಬೇಡ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವುದು ಕೇಸರಿ ಟ್ರೋಲ್ ಗಳ ಕೆಂಗಣ್ಣಿಗೆ ಗುರಿಯಾಗಿದೆ. ತಮ್ಮದೇ ವ್ಯಕ್ತಿ ಅಥವಾ ಸಂಸ್ಥೆಗಳೂ ನಿಯಂತ್ರಿಸದ ಮಟ್ಟಕ್ಕೆ ಕೇಸರಿ ಟ್ರೋಲ್ ಗಳ ಪ್ರಾಜೆಕ್ಟ್ ಬೆಳೆದಿರುವುದು ಇದರಿಂದ ಸ್ಪಷ್ಟವಾಗುತ್ತದೆ.

ಎಪ್ರಿಲ್ 24ರಂದು ನರೇಂದ್ರ ಮೋದಿ ಮಾಡಿದ “ರಮಝಾನ್ ಮುಬಾರಕ್!” ಟ್ವೀಟ್‍ಗೆ ಅವರು ಫಾಲೋ ಮಾಡುವ ಹ್ಯಾಂಡಲ್‍ ನಿಂದಲೇ ಬಂದ ಪ್ರತಿಕ್ರಿಯೆ ಹೀಗಿತ್ತು.

“ಮೋದಿಜಿ ನಾವು ತೆರಿಗೆ ಪಾವತಿಸುತ್ತೇವೆ. ಪಿಎಂ ಕೇರ್ಸ್‍ಗೆ ದೇಣಿಗೆ ನೀಡುತ್ತೇವೆ, ಲಾಕ್‍ಡೌನ್ ನಿಯಮ ಪಾಲಿಸುತ್ತೇವೆ; ಆದರೆ ಸರ್ಕಾರ ನಿಯಮ ಪಾಲಿಸದವರ, ಸರ್ಕಾರಿ ವೆಚ್ಚದಲ್ಲಿ ಚಿಕಿತ್ಸೆ ಪಡೆಯುತ್ತಿರುವವರ, ವೈದ್ಯರನ್ನು ಹೊಡೆಯುವವರ ಮತ್ತು ಬಳಿಕ ಪರಿಹಾರ ಪಡೆಯುವವರ ಪರ ತುತ್ತೂರಿ ಊದುತ್ತಿದೆ. ಇನ್ನೂ ಇದು ಎಷ್ಟು ದಿನ?” ಎಂದು ಪ್ರಶ್ನಿಸಲಾಗಿತ್ತು.

30 ನಿಮಿಷಗಳಲ್ಲಿ ಪ್ರಧಾನಿಯ ಈ ಟ್ವೀಟ್ 5000 ಬಾರಿ ಮರು ಟ್ವೀಟ್ ಆಗಿದೆ. ಇದರಲ್ಲಿ ಮೋದಿಯವರನ್ನು ಟೀಕಿಸುವ ಪ್ರತಿಕ್ರಿಯೆಗಳು 1000 ಬಾರಿ ಟ್ವೀಟ್ ಆಗಿತ್ತು. ಇದೇ ಪ್ರವೃತ್ತಿ ಹಲವು ದಿನಗಳ ಕಾಲ ಮುಂದುವರಿದಿತ್ತು. ಈ ಟ್ವಿಟರ್ ಬಳಕೆದಾರರಿಗೆ ಹೋಲಿಸಿದರೆ ಮೋದಿ 2000 ಪಟ್ಟು ಅನುಯಾಯಿಗಳನ್ನು ಹೊಂದಿದ್ದರೂ, ಮೋದಿಯವರ ಪೋಸ್ಟ್ ನ ಪ್ರತಿ ಐದು ಮರು ಟ್ವೀಟ್‍ಗಳಿಗೆ ಪ್ರತಿಯಾಗಿ ವಿರುದ್ಧವಾದ ಒಂದು ಟ್ವೀಟ್ ಬರುತ್ತಿತ್ತು.

ಟ್ರೋಲಿಗರ ಆಕ್ರೋಶಕ್ಕೆ ಗುರಿಯಾದ ಮೋದಿಯವರ ಸಂದೇಶ ಹೀಗಿತ್ತು.

“ನಾನು ಪ್ರತಿಯೊಬ್ಬರ ಸುರಕ್ಷೆ, ಯೋಗಕ್ಷೇಮ ಹಾಗೂ ಸಮೃದ್ಧಿಯನ್ನು ಪ್ರಾರ್ಥಿಸುತ್ತೇನೆ. ಈ ಪವಿತ್ರ ಮಾಸವು ದಯಾಪರತೆ, ಸಾಮರಸ್ಯ ಮತ್ತು ಅನುಕಂಪವನ್ನು ತರಲಿ. ಕೋವಿಡ್-19 ವಿರುದ್ಧದ ಹೋರಾಟದಲ್ಲಿ ನಿರ್ಣಾಯಕ ಗೆಲುವು ಸಾಧಿಸುವಂತಾಗಲಿ ಹಾಗೂ ಆರೋಗ್ಯಕರ ಜಗತ್ತನ್ನು ಸೃಷ್ಟಿಸುವಂತಾಗಲಿ”

‘ವರ್ಚುವಲ್ ಹಿಂದುತ್ವ ಜಗತ್ತು’ ಕೇವಲ ಐದೇ ದಿನಗಳಲ್ಲಿ ಮೋದಿಯವರ ವಿರುದ್ಧ ಸಿಡಿದು ಬಿದ್ದಿರುವುದು ಇದು ಎರಡನೇ ಬಾರಿ. ಯುಎಇಯಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬರ ಮುಸ್ಲಿಂ ವಿರೋಧಿ ಟ್ವೀಟ್ ಬಗ್ಗೆ ಅರಬ್ ಜಗತ್ತು ಆಕ್ರೋಶಗೊಂಡಿತ್ತು. ಇದರಿಂದಾಗಿ ಸ್ವತಃ ಪ್ರಧಾನಿಯವರೇ ಟ್ವೀಟ್ ಮಾಡಿ, “ಕೋವಿಡ್-19 ಯಾವುದೇ ಜಾತಿ, ಮತ, ಧರ್ಮ, ಜನಾಂಗ, ಭಾಷೆ ಅಥವಾ ಗಡಿಯನ್ನು ನೋಡಿ ದಾಳಿ ಮಾಡುವುದಿಲ್ಲ.. ಈ ವಿಚಾರದಲ್ಲಿ ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ”ಎಂದು ಟ್ವೀಟ್ ಮಾಡಿದ್ದರು. ಇದನ್ನು ಯಾರಾದರೂ ಒಪ್ಪದಿರಲು ಸಾಧ್ಯವೇ? ಆದರೆ ಹಲವರು ಇದಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಮೋದಿ ಸೇರಿ ಸುಮಾರು ಐದು ಲಕ್ಷ ಅನುಯಾಯಿಗಳನ್ನು ಹೊಂದಿರುವ ಹಿಂದುತ್ವ ಕ್ಯಾಂಪ್‍ನ ಐಕಾನ್ ಒಬ್ಬರು ಹೀಗೆ ಘೋಷಿಸಿದ್ದರು: “ನರೇಂದ್ರಮೋದಿ ಸರ್.. ಒಗ್ಗಟ್ಟಿನ ಪರವಾಗಿಲ್ಲ. ಪೊಲೀಸರತ್ತ ಉಗಿಯುವವರು ನಾವಲ್ಲ.. ಮಸೀದಿಗಳಲ್ಲಿ ವಿದೇಶಿಯರನ್ನು ಹುದುಗಿಸಿಟ್ಟವರಲ್ಲಿ ನಾವಲ್ಲ.. ವೈದ್ಯರತ್ತ ಕಲ್ಲು ಎಸೆಯುವವರು ನಾವಲ್ಲ.. ಪ್ರವಾಸ ಇತಿಹಾಸವನ್ನು ಮುಚ್ಚಿಡುವವರು ನಾವಲ್ಲ.. ಅದು ಅವರು. ಅವರಿಗೆ ಒಂದು ಹೆಸರಿದೆ..” ಎಂದು ಟ್ವೀಟ್ ಮಾಡಿದ್ದರು.

ಮೋದಿಯವರ ಈ ಟ್ವೀಟ್ ಬಗ್ಗೆ ಮತ್ತೊಂದು ಹ್ಯಾಂಡಲ್‍, ‘ಅವರ ಟ್ವೀಟ್ ಓದಿದ ಬಳಿಕವೂ ಮೋದಿ, ಮೋದಿ ಎಂದು ಜಪಿಸುವವರು ಸಾರ್ವತ್ರಿಕ ಅವಾಚ್ಯ ಪದಬಳಕೆಗೆ ಯೋಗ್ಯರು’ ಎನ್ನುವ ಅರ್ಥದ ಟ್ವೀಟ್ ಮಾಡಿತ್ತು. ಕೋವಿಡ್ ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ತಾರತಮ್ಯ ರಹಿತ ದೃಷ್ಟಿಕೋನಕ್ಕೆ ಕರೆ ನೀಡಿದ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ವಿರುದ್ಧವೂ ಇಂಥದ್ದೇ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

ಮುಸ್ಲಿಮರನ್ನು ಓಲೈಸುವವರು ಎಂದು ಒಬ್ಬರನ್ನು ಕರೆಯುವುದು ಈ ಕೇಸರಿ ಟ್ರೋಲ್ ಗಳ ಬೈಗುಳದ ಪರಮಾವಧಿ. ಮೋದಿ ಕೂಡಾ ಸ್ವತಃ ಈ ಅಪವಾದಕ್ಕೆ ಒಳಗಾಗಿರುವುದು ಇದೇ ಮೊದಲಲ್ಲ. 2007ರಲ್ಲಿ ವಿಎಚ್‍ಪಿ ಮುಖಂಡ ಪ್ರವೀಣ್ ತೊಗಾಡಿಯಾ ಅವರಿಂದ ಕುಮ್ಮಕ್ಕು ಪಡೆದ ಗುಜರಾತ್ ಬಿಜೆಪಿ ಬಂಡಾಯ ನಾಯಕರು ಮೋದಿಯವರನ್ನು “ಲಾಲ್ ಮುಹಮ್ಮದ್ ಅಡ್ವಾಣಿಯವರ ರಕ್ಷಣೆಯಲ್ಲಿರುವ ನೂರ್ ಮೊಹ್ಮದ್ ಮೋದಿ” ಎಂದು ಕರೆದಿದ್ದರು.

ಆರೆಸ್ಸೆಸ್ ಹಾಗೂ ಮೋದಿ ಅರೂಪಕ್ಕೊಮ್ಮೆ ಮುಸ್ಲಿಮರನ್ನು ತಲುಪುವ ಪ್ರಯತ್ನ ಮಾಡಿದಾಗಲೆಲ್ಲ ಇಂತಹ ಕಟ್ಟಾ ಮೂಲಭೂತವಾದಿಗಳು ಮುನ್ನಲೆಗೆ ಬರುತ್ತಾರೆ. ಮಾಜಿ ಆರೆಸ್ಸೆಸ್  ಮುಖ್ಯಸ್ಥ ಕೆ.ಎಸ್.ಸುದರ್ಶನ್ ಮುಸ್ಲಿಂ ರಾಷ್ಟ್ರೀಯ ಮಂಚ್ ಸ್ಥಾಪಿಸಿದ್ದರು. ಅಂತೆಯೇ ಮೋದಿಯವರು ರಾಷ್ಟ್ರೀಯ ನಾಯಕರಾಗಿ ಬಿಂಬಿಸಿಕೊಳ್ಳುವ ಪ್ರಯತ್ನದಲ್ಲಿ ಸದ್ಭಾವನಾ ಸಮ್ಮೇಳನಗಳನ್ನು ಗುಜರಾತ್‍ನಲ್ಲಿ 2011ರಲ್ಲಿ ನಡೆಸಿದ್ದರು. ಇದರಲ್ಲಿ ಮುಸ್ಲಿಮರ ಜತೆ ಸಾಮರಸ್ಯ ಬಯಸಿದ್ದರು. 2018ರಲ್ಲಿ ಭಾಗವತ್ ಮೂರು ಭಾಗದ ಉಪನ್ಯಾಸ ನೀಡಿ, ಅವರ ಪೂರ್ವಜರಲ್ಲಿ ಒಬ್ಬರಾದ ಎಂ.ಎಸ್.ಗೋಲ್ವಾಳ್ಕರ್ ಅವರ ಮುಸ್ಲಿಂ ವಿರೋಧಿ ನಿಲುವಿಗೆ ಔಪಚಾರಿಕವಾಗಿ ತಿಲಾಂಜಲಿ ನೀಡಿದ್ದರು. “ಮುಸ್ಲಿಮರನ್ನು ನಾವು ಬಯಸುವುದಿಲ್ಲ ಎಂದು ಹೇಳುವ ದಿನವೇ ಹಿಂದುತ್ವದ ಅಸ್ತಿತ್ವ ಕೊನೆಯಾಗುತ್ತದೆ” ಎಂದು ಆರೆಸ್ಸೆಸ್ ಮುಖ್ಯಸ್ಥರಾಗಿರುವ ಅವರು ಸ್ಪಷ್ಟಪಡಿಸಿದ್ದರು.

ಸಂಘರ್ಷದಿಂದ ಗಮನವನ್ನು ಬೇರೆಡೆಗೆ ಸೆಳೆಯಲು ರೂಪಿಸಿದ ತಂತ್ರ ಎಂದು ಈ ಬಗ್ಗೆ ಸಿನಿಕತನದ ಅಭಿಪ್ರಾಯ ವ್ಯಕ್ತಪಡಿಸಬಹುದು ಅಥವಾ ಮೂಲ ಕಾರ್ಯಸೂಚಿಯನ್ನು ಮುಂದುವರಿಸಲು ತಂತ್ರಗಾರಿಕೆ ಎಂಬ ಅಭಿಪ್ರಾಯಕ್ಕೆ ಬರಬಹುದು. ಸಂಘ ಪರಿವಾರದ ಮಾತು ಮತ್ತು ಕೃತಿಯ ನಡುವಿನ ಅಂತರದ ಹಿನ್ನೆಲೆಯಲ್ಲಿ ಇದು ತಾರ್ಕಿಕ ಎನಿಸುತ್ತದೆ. ದಿನೇಶ್ ನಾರಾಯಣ್ ಅವರ ಇತ್ತೀಚಿನ ಕೃತಿ “ದ ಆರೆಸ್ಸೆಸ್ ಆ್ಯಂಡ್ ದ ಮೇಕಿಂಗ್ ಆಫ್ ದ ಡೀಪ್ ನೇಷನ್’ನಲ್ಲಿ ಅಭಿಪ್ರಾಯಪಡುವಂತೆ ಮುಸ್ಲಿಮರಿಗೆ ಸಂಬಂಧಿಸಿದ ಪರಸ್ಪರ ವೈರುದ್ಧ್ಯದ ಅಭಿಪ್ರಾಯಗಳ ಪ್ರತಿಬಿಂಬವೂ ಆಗಿರಬಹುದು.

‘ಹಿಂದುತ್ವ ಎನ್ನುವುದು ಅವಕಾಶವಾದವೇ?’ ದಿವಂಗತ ಅರುಣ್ ಜೇಟ್ಲಿವರು ಅಮೆರಿಕದ ರಾಜತಾಂತ್ರಿಕರೊಬ್ಬರ ಬಳಿ ಒಮ್ಮೆ ಹೀಗೆ ಹೇಳಿದ್ದರು ಎಂದು ವಿಕಿಲೀಕ್ಸ್ ಬಿಡುಗಡೆ ಮಾಡಿದ ಡಿಪ್ಲೊಮ್ಯಾಟಿಕ್ ಕೇಬಲ್ಸ್‍ನಲ್ಲಿ ಉಲ್ಲೇಖಿಸಲಾಗಿದೆ. ಗೋಸಂರಕ್ಷಣೆ ಬಗೆಗಿನ ಭಾವನೆಗಳ ಬಗ್ಗೆ ಒಮ್ಮೆ ಗೋಲ್ವಾಳ್ಕರ್, “ನಾನು ಶೀತಲ ರಕ್ತದವನು”ಎಂದು ಹೇಳಿ ಗೋರಕ್ಷಣೆ ಅಬ್ಬರದ ಕೂಗಲ್ಲದೇ ಮತ್ತೇನೂ ಅಲ್ಲ ಎಂದು ಸ್ಪಷ್ಟಪಡಿಸಿದ್ದರು.

ಸಂಘ ಪರಿವಾರ ಸುಧಾರಣೆಗೆ ಅಸಮರ್ಥ ಹಾಗೂ ಕೇವಲ ಸಿದ್ಧಾಂತವನ್ನಷ್ಟೇ ಪಾಲಿಸುತ್ತದೆ ಎಂಬ ನಿರ್ಧಾರಕ್ಕೆ ಬರಬಹುದು; ಪಕ್ಷಗಳು, ಸಿದ್ಧಾಂತಗಳು ಮತ್ತು ಧಾರ್ಮಿಕ ಸಂಪ್ರದಾಯಗಳು ಕೂಡಾ ಕಾಲಕ್ಕೆ ತಕ್ಕಂತೆ ಬದಲಾಗಿವೆ. ಕ್ಯಾಥೋಲಿಕ್ ಚರ್ಚ್ ಹಾಗೂ ಚೀನಾದ ಕಮ್ಯುನಿಸ್ಟ್ ಪಾರ್ಟಿ ಇದಕ್ಕೆ ಜೀವಂತ ಉದಾಹರಣೆ. ದೇಶದ ದುರದೃಷ್ಟವೆಂದರೆ, ಮಂದಗಾಮಿ ನಡೆಯ ಯಾವುದೇ ಸುಳಿವುಗಳು ಕುಟುಂಬದ ಒಳಗೆಯೇ ತೀಕ್ಷ್ಣ ಪ್ರತಿಕ್ರಿಯೆ ಎದುರಿಸುತ್ತವೆ. ಪ್ರಮುಖ ಪಾತ್ರಧಾರಿಗಳು ತಮ್ಮ ಜನಪ್ರಿಯ ಕಠೋರತೆಗೆ ಅಂಟಿಕೊಳ್ಳಬೇಕಾಗುತ್ತದೆ ಅಥವಾ ಎಲ್.ಕೆ.ಅಡ್ವಾಣಿಯವರಂತೆ ಮರೆಯಾಗಬೇಕಾಗುತ್ತದೆ. ಸತತ ಎರಡನೇ ಲೋಕಸಭಾ ಸೋಲಿನ ಬಳಿಕ 2009ರಲ್ಲಿ ಅಡ್ವಾಣಿಯವರು ಆರೆಸ್ಸೆಸ್‍ನ ಮಾಜಿ ಮುಖ್ಯಸ್ಥ ದೇವರಸ್ ಅವರ ಹೇಳಿಕೆಯನ್ನು ಉಲ್ಲೇಖಿಸಿದ್ದರು: ಸಂಘ ಪರಿವಾರ ನಿರಂತರವಾಗಿ ಸ್ವೀಕರಿಸುತ್ತಾ ಹೋಗಬೇಕು ಎಂದು ಹೇಳಿ ಹಿಂದುತ್ವವನ್ನು ಮುಸ್ಲಿಂ ವಿರೋಧಿ ಎಂದು ವಿಶ್ಲೇಷಿಸುವುದರ ವಿರುದ್ಧ ಎಚ್ಚರಿಕೆ ನೀಡಿದ್ದರು. ಜೇಟ್ಲಿ ಇದನ್ನು ‘ಮಂದಗಾಮಿಗಳ ಪ್ರಾಬಲ್ಯ’ ಎಂದು ಬಣ್ಣಿಸಿದ್ದರು. ಐದು ವರ್ಷಗಳಲ್ಲಿ ಪಕ್ಷವು ಹಿಂದೂ ಪ್ರಾಬಲ್ಯವಾದದ ಸನ್ನಿಯನ್ನು ಬೆಳೆಸಿದೆ.

ಸಾಂಪ್ರದಾಯಿಕವಾಗಿ ಸಂಘ ಪರಿವಾರ ಕೇಂದ್ರೀಕೃತ ವ್ಯವಸ್ಥೆ ಎಂಬ ತಿಳುವಳಿಕೆ ಇದೆ. ಕೆಳಹಂತದಿಂದ ಬರುವಂತಹ ಇಂಥ ವ್ಯತ್ಯಯವನ್ನು ಪರಿಶೀಲಿಸಲು ಅವಕಾಶ ಇಲ್ಲ ಎಂಬ ನಂಬಿಕೆ ಇದೆ. ಆದರೆ ನಿಧಾನವಾಗಿ ಮುಖಂಡರು ನಿಯಂತ್ರಣ ಕಳೆದುಕೊಳ್ಳುತ್ತಿದ್ದಾರೆ ಅಥವಾ ಇದನ್ನು ತಂತ್ರಗಾರಿಕೆಯಾಗಿ ಬಳಸುವ ಅಥವಾ ಹತ್ತಿಕ್ಕುವ ಪ್ರಯತ್ನ ಮಾಡುತ್ತಾರೆ. ಉದಾಹರಣೆಗೆ ಕೇರಳದ ಶಬರಿಮಲೆ ಅಯ್ಯಪ್ಪ ಮಂದಿರಕ್ಕೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿ  2018ರ ಸುಪ್ರೀಂಕೋರ್ಟ್ ತೀರ್ಪನ್ನು ಸಂಘಪರಿವಾರ ಸ್ವಾಗತಿಸಿತ್ತು. ಆದರೆ ಸಾರ್ವಜನಿಕ ಅಭಿಪ್ರಾಯ ಇದಕ್ಕೆ ವಿರುದ್ಧವಾಗಿರುವುದನ್ನು ಗಮನಿಸಿ, ತಂತ್ರ ಬದಲಿಸಿತು.

ಮತ್ತೊಂದು ಇಂಥ ನಿದರ್ಶನವೆಂದರೆ ಫೆಬ್ರವರಿಯಲ್ಲಿ ನಡೆದ ದೆಹಲಿ ಗಲಭೆ. ಮೋದಿಯವರ ರಾಜಕೀಯ ವೃತ್ತಿಯ ಅತಿದೊಡ್ಡ ಪ್ರದರ್ಶನ ಎನ್ನಲಾದ ಡೊನಾಲ್ಡ್ ಟ್ರಂಪ್ ಭೇಟಿ ಸಂದರ್ಭದಲ್ಲೇ ಇದು ಭುಗಿಲೆದ್ದಿತು. ಹಿಡಿದ ಕಾರ್ಯವನ್ನು ಪೂರೈಸುವ ಛಲದ ವ್ಯಕ್ತಿ ಎಂಬ ಹೆಗ್ಗಳಿಕೆಯ ಹೊರತಾಗಿಯೂ, ಅವರ ಮುಖಭಂಗದ ಬಗ್ಗೆ ಯಾರೂ ಗಮನಹರಿಸಲಿಲ್ಲ. ಕೆಳಹಂತದ ನಾಯಕರು ಗಲಭೆಗೆ ಕುಮ್ಮಕ್ಕು ನೀಡುತ್ತಿದ್ದರು. ದೆಹಲಿ ಪೊಲೀಸರು ಕೂಡಾ ಪರಿಸ್ಥಿತಿ ನಿಯಂತ್ರಿಸಲು ವಿಫಲರಾಗಿದ್ದರು. ಪ್ರಚೋದನಕಾರಿ ಹೇಳಿಕೆಗಾಗಿ ಭೋಪಾಲ್ ಸಂಸದೆ ಪ್ರಜ್ಞಾ ಠಾಕೂರ್ ವಿರುದ್ಧ ಶಿಸ್ತು ಕ್ರಮವನ್ನು ಬಿಜೆಪಿ ಘೋಷಿಸಿತು. ಪಕ್ಷದ ಮುಖಂಡರೇ ‘ರೂಲ್ ಆಫ್ ದ ಲಾ’ ಬೆಂಬಲಿಸಿದರು. ಸಾಮಾಜಿಕ ಜಾಲತಾಣಗಳಲ್ಲಿ ಈ ಧ್ವನಿಯನ್ನು ಅಡಗಿಸಲಾಯಿತು. ಮುಸ್ಲಿಮರು ‘ಜೈ ಶ್ರೀರಾಂ’ ಹೇಳಬೇಕು ಎಂದು ಒತ್ತಾಯಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಈಗ ದೆಹಲಿಯ ಬಿಜೆಪಿ ಸಂಸದ ಗೌತಮ್ ಗಂಭೀರ್ ಆಗ್ರಹಿಸಿದ್ದರು. ಪ್ರಧಾನಿಯನ್ನು ಟ್ರೋಲ್ ಮಾಡಿದ ವ್ಯಕ್ತಿಯೇ ಇವರನ್ನೂ ಟ್ರೋಲ್ ಮಾಡಿದ್ದರು. ಚಿತ್ರತಾರೆ ಅನುಪಮ್ ಖೇರ್ ಕೂಡಾ ಹೊಸ ಸಂಸದರು ವಿವಾದದಿಂದ ದೂರ ಉಳಿಯುವಂತೆ ಸಲಹೆ ಮಾಡಿದ್ದರು.

ಇದೀಗ ಮಹತ್ವಾಕಾಂಕ್ಷಿ ನಾಯಕರು ಇದೀಗ ಇಂತಹ ಕೊಳ್ಳಿ ಇಡುವ ಹೇಳಿಕೆಗಳು ತಮ್ಮನ್ನು ಹೊಸ ಎತ್ತರಕ್ಕೆ ಒಯ್ಯುವ ಮೆಟ್ಟಿಲುಗಳು ಎಂದು ಭಾವಿಸಿದಂತಿದೆ. ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಕ್ವಿ ಮತ್ತು ಉತ್ತರ ಪ್ರದೇಶದ ಇಬ್ಬರು ಶಾಸಕರು, “ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ”ಎಂಬ ಮೋದಿ ಹೇಳಿಕೆಯ ಕೆಲವೇ ದಿನಗಳಲ್ಲಿ ಕೆಲ ಪಂಗಡಗಳನ್ನು ಅಥವಾ ಸಮುದಾಯವನ್ನು ಅವಮಾನಿಸುವ ಹೇಳಿಕೆ ನೀಡಿದರು. ಮೋದಿ ವಿರೋಧಿ ಡಿಜಿಟಲ್ ಗುಂಪು ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರನ್ನು ನಿಜವಾದ ನಿರೀಕ್ಷೆ ಎಂಬ ಭಾವನೆ ಬಿತ್ತಲು ಹೊರಟಂತಿದೆ. ಮೋದಿಯವರು ಅವರ ಪಾಲಿಗೆ ಒಪ್ಪಿಕೊಳ್ಳಲು ಸಾಧ್ಯವಿಲ್ಲದ ‘ಜಾತ್ಯತೀತ’ ನಾಯಕ ಎನಿಸಿದ್ದಾರೆ.

ಇಂತಹ ‘ಗುಂಪು’ ನಾಯಕರ ನಿರ್ದೇಶನಗಳನ್ನು ಪಾಲಿಸುವುದಿಲ್ಲ. ಇಂಥ ಗುಂಪಿನ ನಾಯಕರಾಗಲು ಈ ಗುಂಪನ್ನು ಅನುಸರಿಸುವುದು ಅಗತ್ಯವಾಗುತ್ತದೆ. ಇಂತಹ ಗುಂಪನ್ನು ಹೊಂದಿದವನು ಒಂದು ದಿನ ನಾಯಕನಾಗುತ್ತಾನೆ. ಟ್ರಂಪ್ ಭೇಟಿಯ ವೇಳೆ ಗುಂಪಿಗೆ ಪ್ರಚೋದನೆ ನೀಡಿದ ವ್ಯಕ್ತಿ, ಭವಿಷ್ಯದಲ್ಲಿ ಉನ್ನತ ಸ್ಥಾನಕ್ಕೆ ಏರಬಹುದು. ಐತಿಹಾಸಿಕವಾಗಿ ಕೂಡಾ ಇಂಥ ಹಲವು ನಿದರ್ಶನಗಳಿವೆ.

Writer - ವರ್ಗೀಸ್ ಕೆ. ಜಾರ್ಜ್, thehindu.com

contributor

Editor - ವರ್ಗೀಸ್ ಕೆ. ಜಾರ್ಜ್, thehindu.com

contributor

Similar News