ಅಕ್ರಮ ಪಡಿತರ ಮಾರಾಟ ಮಾಡಿದರೆ ಕಾನೂನು ಕ್ರಮ: ಸಚಿವ ಗೋಪಾಲಯ್ಯ

Update: 2020-05-11 17:03 GMT

ಬೆಂಗಳೂರು, ಮೇ 11: ಕೇಂದ್ರ ಹಾಗೂ ಸರಕಾರಗಳು ಪಡಿತರ ವಿತರಿಸುತ್ತಿರುವ ಆಹಾರ ಧಾನ್ಯಗಳನ್ನು ಅಕ್ರಮವಾಗಿ ಮಾರಾಟ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಆಹಾರ ಸಚಿವ ಗೋಪಾಲಯ್ಯ ಎಚ್ಚರಿಕೆ ನೀಡಿದ್ದಾರೆ.

ಬಡವರಿಗೆ ನೀಡುತ್ತಿರುವ ಪಡಿತರ ವಿತರಣೆಯನ್ನು ಕೆಲವರು ದುರ್ಬಳಕೆ ಮಾಡಿಕೊಳ್ಳುತ್ತಿರುವ ದೂರುಗಳು ಬಂದಿವೆ. ಸರಕಾರ ಉಚಿತವಾಗಿ ವಿತರಿಸುತ್ತಿರುವ ಅಕ್ಕಿಯನ್ನು ಕೆಜಿಗೆ 12 ರಿಂದ 15 ರೂ.ಗಳಿಗೆ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಇಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬಡವರಿಗೆ ಕೋಟ್ಯಂತರ ರೂ. ವ್ಯಯ ಮಾಡಿ ಸರಕಾರ ಪಡಿತರ ಒದಗಿಸುತ್ತಿದೆ. ಇದನ್ನು ದುರ್ಬಳಕೆ ಮಾಡಿಕೊಳ್ಳುವುದು ತಪ್ಪು. ದುರ್ಬಳಕೆ ತಡೆಯಲು ಕಾನೂನು ಜಾರಿ ಮಾಡುವ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಅವರು ಹೇಳಿದರು.

ಪಡಿತರ ಬೇಡ ಎಂದಾದರೆ ಅದನ್ನು ಅಂಗಡಿಯಲ್ಲೇ ಬಿಟ್ಟುಬಿಡಿ. ಅದರಿಂದ ಬಡವರಿಗೆ ಅನುಕೂಲವಾಗುತ್ತದೆ. ಅದು ಬಿಟ್ಟು ಉಚಿತವಾಗಿ ಪಡಿತರ ಪಡೆದು ಅದನ್ನು ಮಾರಾಟ ಮಾಡುವುದು ಸರಿಯಲ್ಲ. ಇಂತಹವರ ಪಡಿತರ ಚೀಟಿಯನ್ನು ರದ್ದು ಮಾಡುವುದಾಗಿಯೂ ಅವರು ಎಚ್ಚರಿಕೆ ನೀಡಿದರು.

ನೋಟಿಸ್ ಜಾರಿ ಪಡಿತರ ದುರ್ಬಳಕ ಮಾಡಿಕೊಂಡಿರುವ 499 ಅಂಗಡಿಗಳಿಗೆ ನೋಟಿಸ್ ನೀಡಲಾಗಿದೆ. 33 ಅಂಗಡಿಗಳ ಲೈಸೆನ್ಸ್ ರದ್ದು ಮಾಡಿದ್ದೇವೆ ಎಂದು ಅವರು ಹೇಳಿದರು. ಗುಲ್ಬರ್ಗ, ಮೈಸೂರು, ದಾವಣಗೆರೆಗಳಲ್ಲಿ ಖಾಸಗಿ ಗೋದಾಮುಗಳ ಮೇಲೆ ದಾಳಿ ನಡೆಸಲಾಗಿದೆ. ಸಾವಿರಾರು ಕ್ವಿಂಟಾಲ್ ಅಕ್ಕಿ ವಶಕ್ಕೆ ಪಡೆಯಲಾಗಿದೆ. ಇದು ಸರಕಾರದ ಅಕ್ಕಿಯೋ ಅಥವಾ ಬೇರೆ ರಾಜ್ಯದ ಅಕ್ಕಿಯೋ ಎಂದು ತನಿಖೆ ನಡೆಸಲು ವರದಿ ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ತಪ್ಪಿತಸ್ಥರು ಎಷ್ಟೇ ಪ್ರಭಾವಿಗಳಾಗಿದ್ದರೂ ಚಿಂತಿಸುವುದಿಲ್ಲ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಅವರು ಎಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News