ದ.ಕ. ಜಿಲ್ಲೆಯ ಇಬ್ಬರು ಸೇರಿ ರಾಜ್ಯದಲ್ಲಿ ಇಂದು 42 ಮಂದಿಗೆ ಕೊರೋನ ಸೋಂಕು ದೃಢ
ಬೆಂಗಳೂರು : ರಾಜ್ಯದಲ್ಲಿ ಕೊರೋನ ವೈರಸ್ ಸೋಂಕು ಹರಡುವ ಪ್ರಮಾಣ ತೀವ್ರಗೊಂಡಿದ್ದು, ಸೋಮವಾರ ಸಂಜೆ 5ರಿಂದ ಇಂದು ಬೆಳಗ್ಗೆ 12 ವರೆಗಿನ ಅವಧಿಯಲ್ಲಿ ಒಟ್ಟು 42 ಮಂದಿಯಲ್ಲಿ ಹೊಸದಾಗಿ ಕೊರೋನ ಸೋಂಕು ದೃಢಪಟ್ಟಿವೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆಗೊಳಿಸಿರುವ ಬುಲೆಟಿನ್ ನಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ರಾಜ್ಯದಲ್ಲಿ ಒಟ್ಟು ಕೊರೋನ ಸೋಂಕಿತರ ಸಂಖ್ಯೆ 904ಕ್ಕೆ ಏರಿಕೆಯಾಗಿದೆ.
ದ.ಕ.ಜಿಲ್ಲೆಯ ಇಬ್ಬರು, ಬಳ್ಳಾರಿಯ ಓರ್ವ, ಚಿಕ್ಕಬಳ್ಳಾಪುರದ ಓರ್ವ, ಬಾಗಲಕೋಟೆಯ 15 ಮಂದಿ, ಕಲಬುರಗಿಯ ಓರ್ವ, ಯಾದಗಿರಿಯ ಇಬ್ಬರು , ಮಂಡ್ಯದ ಓರ್ವ, ಧಾರವಾಡದ 9 ಮಂದಿ, ಬೆಂಗಳೂರು ನಗರದ ಮೂರು ಮಂದಿ, ಬೀದರ್ ನ ಇಬ್ಬರು, ಹಾಸನ ಜಿಲ್ಲೆಯ 5 ಮಂದಿ ಸೇರಿ ಒಟ್ಟು 42 ಮಂದಿಯಲ್ಲಿ ಕೊರೋನ ಸೋಂಕು ದೃಢವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಿವಾಸಿಗಳಾದ 50 ವರ್ಷದ ಮಹಿಳೆ ಮತ್ತು ಅವರ 26 ವರ್ಷದ ಪುತ್ರನಲ್ಲಿ ಕೊರೋನ ಸೋಂಕು ದೃಢವಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.