×
Ad

ಕೊರೋನ ವಿರುದ್ಧದ ಹೋರಾಟಕ್ಕೆ ಸಲಹೆ: ಕೇರಳ ಆರೋಗ್ಯ ಸಚಿವೆ ಶೈಲಜಾ ಜೊತೆ ಕೆ. ಸುಧಾಕರ್ ವೀಡಿಯೊ ಕಾನ್ಫರೆನ್ಸ್

Update: 2020-05-12 12:45 IST

  ಬೆಂಗಳೂರು, ಮೇ 12: ಕೇರಳ ರಾಜ್ಯದಲ್ಲಿ ಕೊರೋನ ವೈರಸ್ ಸೋಂಕು ನಿಯಂತ್ರಣ ವಿಚಾರದಲ್ಲಿ ಭಾರಿ ಪ್ರಶಂಸೆಗೆ ಒಳಗಾಗಿರುವ ಆರೋಗ್ಯ ಸಚಿವೆ ಕೆ. ಕೆ. ಶೈಲಜಾರನ್ನು ಕರ್ನಾಟಕ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಸೋಮವಾರ ಆನ್‌ಲೈನ್ ಮುಖಾಂತರ ಭೇಟಿಯಾಗಿದ್ದಾರೆ.

" ಕೋವಿಡ್-19 ಕಾಯಿಲೆೆಗೆ ಸಂಬಂಧಿಸಿ ಮರಣ ದರ ನಿಭಾಯಿಸುವ ವಿಷಯದಲ್ಲಿ ಕೇರಳ ಎಲ್ಲರಿಗೂ ಮಾದರಿಯಾಗಿದೆ ಎನ್ನುವುದು ನಮಗೆಲ್ಲರಿಗೂ ಗೊತ್ತಿರುವ ವಿಚಾರ. ಕೇರಳ ಸರಕಾರದ ಕಾರ್ಯವೈಖರಿ ನನ್ನ ಮೇಲೆ ಪ್ರಭಾವ ಬೀರಿದೆ. ಹೀಗಾಗಿ ವೀಡಿಯೊ ಮೀಟಿಂಗ್‌ಗಾಗಿ ಕೇರಳ ಆರೋಗ್ಯ ಸಚಿವರನ್ನು ನಾನು ಕೋರಿದ್ದೆ. ಅವರ ಉತ್ತಮ ಚಟುವಟಿಕೆಗಳನ್ನು ಅರ್ಥ ಮಾಡಿಕೊಳ್ಳಲು ಬಯಸಿದ್ದೆ. ಅವರು ನನ್ನ ಕೋರಿಕೆಯನ್ನು ಒಪ್ಪಿಕೊಂಡರು. ನಮ್ಮಿಬ್ಬರ ಭೇಟಿ ತುಂಬಾ ಫಲಪ್ರದವಾಗಿದೆ. ಕೇರಳ ರಾಜ್ಯ ಈಗಾಗಲೇ ನಿಫಾ ವೈರಸ್‌ನ್ನು ಯಶಸ್ವಿಯಾಗಿ ನಿಭಾಯಿಸಿತ್ತು. ತಮ್ಮ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಸದೃಢವಾಗಿದೆ ಎಂಬ ವಿಚಾರವನ್ನು ಪರಸ್ಪರ ವಿನಿಮಯ ಮಾಡಿಕೊಂಡಿದ್ದೇವೆ'' ಎಂದು ಡಾ.ಸುಧಾಕರ್ ಹೇಳಿದ್ದಾರೆ.

"ಕೋವಿಡ್-19ಗೆ ಕೇರಳದ ಪ್ರತಿಕ್ರಿಯೆ ಸಂಬಂಧಿಸಿ ಕರ್ನಾಟಕದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್‌ರೊಂದಿಗೆ ವೀಡಿಯೊ ಕಾನ್ಫರೆನ್ಸ್ ನಡೆಸಿದ್ದೆ. ನಾವು ಟೆಸ್ಟಿಂಗ್, ಟ್ರೈನಿಂಗ್, ಸುರಕ್ಷತಾ ಮುನ್ನೆಚ್ಚರಿಕೆ, ಹೋಮ್ ಕ್ವಾರಂಟೈನ್, ಐಸೊಲೇಶನ್ ವಾರ್ಡ್ ಸಹಿತ ಹಲವು ಅಂಶಗಳ ಕುರಿತು ನಾವು ಚರ್ಚಿಸಿದ್ದೇವೆ'' ಎಂದು ಕೆ. ಕೆ. ಶೈಲಜಾ  ತಿಳಿಸಿದರು.

"ಕೇರಳದ ರೋಗಿಗಳು ಆರಂಭದಲ್ಲಿ ಜಾಗೃತರಾಗಿ ಸ್ವಯಂ ಪ್ರೇರಣೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ದುರದೃಷ್ಟವಶಾತ್ ನಮ್ಮ ರಾಜ್ಯದಲ್ಲಿ ಸಾವುಗಳು ಸಂಭವಿಸುತ್ತಿದ್ದರೂ ಜನರು ಕೊನೆಯ ಕ್ಷಣದಲ್ಲಿ ಆಸ್ಪತ್ರೆಗೆ ಧಾವಿಸುತ್ತಾರೆ. ಇಂತಹ ಸಂದರ್ಭದಲ್ಲಿ ಯಾವುದೆ ವ್ಯವಸ್ಥೆಗೂ ಕೂಡ ಜೀವವನ್ನು ಉಳಿಸುವುದು ತುಂಬಾ ಕಷ್ಟಕರ'' ಎಂದು ಡಾ.ಸುಧಾಕರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News