ಎಸ್ಸಿಪಿ-ಟಿಎಸ್ಪಿ: ಮೇ 20ರೊಳಗೆ ಕ್ರಿಯಾ ಯೋಜನೆ ಸಲ್ಲಿಸಲು ಡಿಸಿಎಂ ಕಾರಜೋಳ ಸೂಚನೆ
ಬೆಂಗಳೂರು, ಮೇ 12: ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭಿವೃದ್ಧಿ ದೃಷ್ಟಿಯಿಂದ 2020-21ನೆ ಸಾಲಿನ ಎಸ್ಸಿಪಿ-ಟಿಎಸ್ಪಿ ಯೋಜನೆಯಡಿ ಎಲ್ಲ ಇಲಾಖೆಗಳು ಕ್ರಿಯಾ ಯೋಜನೆ ಸಿದ್ಧಪಡಿಸಿ ಮೇ 20ರೊಳಗೆ ಸಮಾಜ ಕಲ್ಯಾಣ ಇಲಾಖೆಗೆ ಸಲ್ಲಿಸಬೇಕು ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮಂಗಳವಾರ ವಿಕಾಸಸೌಧದಲ್ಲಿ ಪ್ರಸಕ್ತ ಸಾಲಿನ ಎಸ್ಸಿಪಿ-ಟಿಎಸ್ಪಿ ಕ್ರಿಯಾ ಯೋಜನೆ ಸಂಬಂಧ ನೋಡಲ್ ಏಜೆನ್ಸಿ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಎಸ್ಸಿ-ಎಸ್ಟಿ, ಗಿರಿಜನ ಉಪಯೋಜನೆ ಸಂಬಂಧ ರಾಜ್ಯ ಪರಿಷತ್ ಸಭೆಯಲ್ಲಿ ಈ ಕ್ರಿಯಾ ಯೋಜನೆ ಮಂಡಿಸಿ ಅನುಮೋದನೆ ಪಡೆಯಬೇಕಿದೆ.
ಶಿಕ್ಷಣ, ಸ್ವಯಂ ಉದ್ಯೋಗ, ಕೌಶಲ್ಯಾಭಿವೃದ್ಧಿ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಶೋಷಿತ ವರ್ಗದ ಜನರಿಗೆ ಆಸ್ತಿ ಸೃಜನೆ ಮಾಡುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಬೇಕು. ಆರೋಗ್ಯ ಇಲಾಖೆ ಆಯುಷ್ಮಾನ್ ಭಾರತ್ ಯೋಜನೆಯಡಿ 200 ಕೋಟಿ ರೂ.ಖರ್ಚು ಮಾಡಲಾಗುತ್ತಿದೆ. ಆದರೆ, ಈ ಯೋಜನೆ ಎಸ್ಸಿ-ಎಸ್ಟಿ ವರ್ಗದ ಜನರಿಗೆ ತಲುಪುತ್ತಿದೆಯೇ ಎಂಬ ಬಗ್ಗೆ ಪರಿಶೀಲಿಸಿ, ಆ ವರ್ಗದ ಜನರಿಗೆ ಸಮರ್ಪಕವಾಗಿ ತಲುಪಿಸಬೇಕು ಎಂದು ಅವರು ಸೂಚಿಸಿದರು.
ಈ ಯೋಜನೆಯಡಿ ನಿರ್ಮಿಸುವ ಆಸ್ಪತ್ರೆ ಕಟ್ಟಡಗಳು ಎಸ್ಸಿ-ಎಸ್ಟಿ ವರ್ಗದ ಜನರು ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರದೇಶಗಳಲ್ಲಿ ನಿರ್ಮಿಸಬೇಕು. ಮೀಸಲಿಟ್ಟ ಅನುದಾನುವನ್ನು ಪರಿಶಿಷ್ಟರ ಕಲ್ಯಾಣಕ್ಕಾಗಿ ಮಾತ್ರವೇ ಬಳಕೆ ಮಾಡಬೇಕು. ಯಾವುದೇ ಕಾರಣಕ್ಕೂ ಅನ್ಯ ಉದ್ದೇಶಕ್ಕೆ ಬಳಕೆ ಮಾಡಬಾರದು ಎಂದು ಅವರು ನಿರ್ದೇಶನ ನೀಡಿದರು.
ಕೊರೋನ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಬೇರೆ ಊರುಗಳಿಗೆ ಉದ್ಯೋಗಕ್ಕಾಗಿ ಹೋದವರು ಹೆಚ್ಚಾಗಿ ಅವರ ಗ್ರಾಮಗಳಲ್ಲಿದ್ದು, ಅವರೆಲ್ಲರಿಗೂ ಉದ್ಯೋಗ ಖಾತರಿ ಯೋಜನೆಯಡಿ ಎಸ್ಸಿ-ಎಸ್ಟಿ ಸಮುದಾಯದ ಕೂಲಿ ಕಾರ್ಮಿಕರಿಗೆ ಕಡ್ಡಾಯವಾಗಿ ಉದ್ಯೋಗ ಕಾರ್ಡ್ ನೀಡಬೇಕು. ಕೃಷಿ ಇಲಾಖೆ ಈ ಸಮುದಾಯದ ರೈತರ ಮಾಹಿತಿ ಸಂಗ್ರಹಿಸಿ, ಸೌಲಭ್ಯಗಳನ್ನು ಸಮರ್ಪಕವಾಗಿ ವಿತರಣೆ ಮಾಡಬೇಕು ಎಂದು ಹೇಳಿದರು.
ಗಂಗಾ ಕಲ್ಯಾಣ ಯೋಜನೆ ಉತ್ತಮ ಕಾರ್ಯಕ್ರಮ. ಕೊಳವೆ ಬಾವಿಗಳಿಗೆ ಕೂಡಲೇ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಈ ಯೋಜನೆ ಫಲಾನುಭವಿಗಳ ಸಂಖ್ಯೆ ಹೆಚ್ಚಿಸಬೇಕು. ವಸತಿ ಶಾಲೆಗಳಲ್ಲಿ ಮಳೆ ನೀರು ಕೊಯ್ಲು ಯೋಜನೆ ಅನುಷ್ಠಾನಗೊಳಿಸಬೇಕು. ಎಲ್ಲ ಇಲಾಖೆಗಳು ಎಸ್ಸಿ-ಎಸ್ಟಿ ವರ್ಗದ ಜನಸಂಖ್ಯೆಯ ಮಾಹಿತಿ ಸಂಗ್ರಹಿಸಬೇಕು. ಜತೆಗೆ ಯೋಜನೆ ಫಲಾನುಭವಿಗಳ ಮಾಹಿತಿಯನ್ನು ಆ್ಯಪ್‍ಗೆ ಅಪ್‍ಲೋಡ್ ಮಾಡಬೇಕು ಎಂದರು.
ಬಡತನದಲ್ಲಿರುವ ಎಸ್ಸಿ-ಎಸ್ಟಿ ವರ್ಗದವರಿಗೆ ಅನುಕೂಲ ಆಗುವಂತಹ ಮತ್ತು ದೀರ್ಘಾವದಿ ಪ್ರಯೋಜನ ಆಗುವಂತಹ ಯೋಜನೆಗಳನ್ನು ರೂಪಿಸಬೇಕು. ಅಲ್ಲದೆ, ರೂಪಿಸಿದ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಆ ಮೂಲಕ ಸಮುದಾಯದ ಏಳ್ಗೆಗಾಗಿ ಶ್ರಮಿಸಬೇಕು ಎಂದು ಕಾರಜೋಳ ತಿಳಿಸಿದರು.
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಜಿ.ಕುಮಾರ್ ನಾಯಕ್, ಎಸ್ಸಿಪಿ-ಟಿಎಸ್ಪಿ ಯೋಜನೆ ಸಲಹೆಗಾರ ಇ.ವೆಂಕಟಯ್ಯ ಸೇರಿದಂತೆ ವಿವಿಧ ಇಲಾಖೆ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.