×
Ad

ಮಣಿವಣ್ಣನ್ ವರ್ಗಾವಣೆ ವಿರುದ್ಧ ರಾಜ್ಯದಲ್ಲಿ ಹೆಚ್ಚಿದ ಆಕ್ರೋಶ: ಟ್ವಿಟರ್ ನಲ್ಲಿ #BringBackManivannan ಟ್ರೆಂಡಿಂಗ್

Update: 2020-05-12 17:41 IST

ಬೆಂಗಳೂರು: ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿದ್ದ ಕಾರ್ಮಿಕರ ಪರ ನಿಂತಿದ್ದ ಹಿರಿಯ ಐಎಎಸ್ ಅಧಿಕಾರಿ, ಕಾರ್ಮಿಕ ಇಲಾಖೆಯ ಮುಖ್ಯ ಕಾರ್ಯದರ್ಶಿ ಪಿ.ಮಣಿವಣ್ಣನ್ ಅವರನ್ನು ಸರಕಾರವು ಇದ್ದಕ್ಕಿದ್ದಂತೆ ವರ್ಗಾವಣೆ ಮಾಡಿದ್ದು, ಭಾರೀ ಆಕ್ರೋಶವನ್ನು ಸೃಷ್ಟಿಸಿದೆ. ಮಣಿವಣ್ಣನ್ ಅವರ ಸ್ಥಾನಕ್ಕೆ ಮತ್ತೊಬ್ಬ ಐಎಎಸ್ ಅಧಿಕಾರಿ ಮಹೇಶ್ವರ್ ರಾವ್ ಅವರನ್ನು ನೇಮಿಸಲಾಗಿದೆ.

ಮಣಿವಣ್ಣನ್ ಅವರ ವರ್ಗಾವಣೆಯಿಂದ ಅವರು ಸ್ಥಾಪಿಸಿದ್ದ ಕೊರೋನ ವಾರಿಯರ್ಸ್ ತಂಡದ ಸದಸ್ಯರು ಆಘಾತಕ್ಕೊಳಗಾಗಿದ್ದಾರೆ. ‘ನಾವು ತಕ್ಷಣದಿಂದ ಎಲ್ಲಾ ಕೆಲಸಗಳನ್ನು ನಿಲ್ಲಿಸುತ್ತಿದ್ದೇವೆ’ ಎಂದವರು ಹೇಳಿದ್ದಾರೆ. ಟ್ವಿಟರ್ ನಲ್ಲೂ ಈ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದು, #BringBackManivannan ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗಿದೆ.

ಕೈಗಾರಿಕಾ ಕಂಪೆನಿಗಳ ಒತ್ತಡದಿಂದಾಗಿ ಮಣಿವಣ್ಣನ್ ಅವರನ್ನು ವರ್ಗಾವಣೆಗೊಳಿಸಲಾಗಿದೆ ಎಂದು ಆರೋಪಿಸಲಾಗುತ್ತಿದೆ. ಎಪ್ರಿಲ್ ತಿಂಗಳಲ್ಲಿ ಕಾರ್ಮಿಕರಿಗೆ ಹಣ ಬಾಕಿಯಿಟ್ಟ ಮಾಲಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮಣಿವಣ್ಣನ್ ಎಚ್ಚರಿಕೆ ನೀಡಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ.

ಕಾರ್ಮಿಕರ ಕೆಲಸ ಅವಧಿಯನ್ನು 8 ಗಂಟೆಯಿಂದ 12 ಗಂಟೆಗೆ ಹೆಚ್ಚಳ ಮಾಡುವ ಸಂಬಂಧದ ಕಾರ್ಮಿಕ ಕಾಯ್ದೆ ತಿದ್ದುಪಡಿ ಮಾಡಿ ಸುಗೀವಾಜ್ಞೆ ಹೊರಡಿಸಲು ಮುಂದಾಗಿದ್ದ ಸರಕಾರದ ಕ್ರಮಕ್ಕೆ ಮಣಿವಣ್ಣನ್ ಆಕ್ಷೇಪ ವ್ಯಕ್ತಪಡಿಸಿದ್ದು, ಕಾರ್ಮಿಕ ಮುಖಂಡರೊಂದಿಗೆ ಸಮಾಲೋಚನೆ ನಡೆಸದೆ ಕಾಯ್ದೆಗೆ ತಿದ್ದುಪಡಿ ಸರಿಯಲ್ಲ ಎಂದಿದ್ದರು. ಹೀಗಾಗಿ ಅವರ ಎತ್ತಂಗಡಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಮಣಿವಣ್ಣನ್ ಅವರ ಏಕಾಏಕಿ ವರ್ಗಾವಣೆಯನ್ನು ತೀವ್ರವಾಗಿ ಖಂಡಿಸಿರುವ ವಿವಿಧ ಕಾರ್ಮಿಕ ಸಂಘಟನೆಗಳು, ಕೂಡಲೇ ಅವರ ವರ್ಗಾವಣೆಯನ್ನು ರದ್ದುಪಡಿಸಬೇಕು. ಇಲ್ಲವಾದರೆ ಬೀದಿಗಿಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿವೆ. ಈ ಮಧ್ಯೆ ಕ್ಯಾಪ್ಟನ್ ಮಣಿವಣ್ಣನ್ ಅವರನ್ನು ವಾಪಸ್ ಕರೆತನ್ನಿ ಎಂದು ಟ್ವಿಟ್ಟರ್ ಅಭಿಯಾನವೂ ಆರಂಭವಾಗಿದ್ದು, ರಾಜ್ಯ ಸರಕಾರದ ಕ್ರಮಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ಕೊರೋನ ವೈರಸ್ ಸೋಂಕಿನಿಂದ ಆಗಿರುವ ಲಾಕ್​ಡೌನ್ ಸಂದರ್ಭದಲ್ಲಿ ವಲಸೆ ಕಾರ್ಮಿಕರ ಸಮಸ್ಯೆಗಳ ಪರಿಹಾರ ಹಾಗೂ ಕಾರ್ಮಿಕರಿಗೆ ಆಹಾರದ ಕಿಟ್ ವಿತರಣೆ ಸಂಬಂಧಿಸಿದಂತೆ ಅವರ ವಿರುದ್ಧ ಬಂದ ದೂರುಗಳನ್ನು ಆಧರಿಸಿ ವರ್ಗಾವಣೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಆಡಳಿತಾರೂಢ ಪಕ್ಷದ ಶಾಸಕರಿಗೆ ಕ್ಯಾಪ್ಟನ್ ಮಣಿವಣ್ಣನ್, ಪಡಿತರ ಧಾನ್ಯಗಳ ಕಿಟ್ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದೇ, ವರ್ಗಾವಣೆಗೆ ಮೂಲ ಕಾರಣ ಎಂಬ ಮಾತುಗಳು ಕೇಳಿಬರುತ್ತಿವೆ.

ಮಾಲಕರ ಲಾಬಿಗೆ ಮಣಿದ ಸರಕಾರ: ಕೊರೋನ ಸೋಂಕಿನ ಸಂದರ್ಭದಲ್ಲಿ ಕಾರ್ಮಿಕರ ಹಿತ ಕಾಪಾಡಲು ಕಾರ್ಮಿಕ ಇಲಾಖೆ ಇತ್ತೀಚೆಗೆ ಕೈಗೊಂಡ ಕ್ರಮಗಳ ವಿರುದ್ಧ ಮಾಲಕರ ಒತ್ತಡಕ್ಕೆ ಮಣಿದ ರಾಜ್ಯ ಸರಕಾರ, ಹಿರಿಯ ಐಎಎಸ್ ಅಧಿಕಾರಿ ಕ್ಯಾಪ್ಟನ್ ಮಣಿವಣ್ಣನ್ ಅವರನ್ನು ವರ್ಗಾವಣೆ ಮಾಡಿದೆ ಎಂದು ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಎಂ.ಡಿ.ಹರಿಗೋವಿಂದ್ ಆರೋಪಿಸಿದ್ದಾರೆ.

ಲಾಕ್​ಡೌನ್ ಹಿನ್ನೆಲೆಯಲ್ಲಿ ಎಲ್ಲ ಕಾರ್ಮಿಕರಿಗೆ ಪೂರ್ಣ ವೇತನ ನೀಡಬೇಕು ಎಂದು ಅಧಿಸೂಚನೆ ಹೊರಡಿಸಿ ಎ.15ಕ್ಕೆ ಮಾಲಕರ ಒತ್ತಡಕ್ಕೆ ಮಣಿದು ಈ ಅಧಿಸೂಚನೆಯನ್ನು ಸರಕಾರ ಹಿಂಪಡೆಯಿತು. ವೇತನದ ಬಗ್ಗೆ ದೂರುಗಳನ್ನು ನೋಂದಾಯಿಸಲು 'ಆನ್ಲೈನ್ ಪೋರ್ಟಲ್' ತೆರದ ಕ್ರಮವನ್ನು ಮಾಲಕರು ವಿರೋಧಿಸಿದರು. ಈ ಮಧ್ಯೆ ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ಮುಂದಾಗಿರುವುದನ್ನು ಆಕ್ಷೇಪಿಸಿದ್ದು ಸರಕಾರಕ್ಕೆ ಅಪಥ್ಯವಾಗಿದೆ. ಹೀಗಾಗಿ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಯನ್ನು ಏಕಾಏಕಿ ಎತ್ತಂಗಡಿ ಮಾಡಿದ್ದು, ಕೊಡಲೇ ಅವರ ವರ್ಗಾವಣೆ ಆದೇಶ ರದ್ದುಪಡಿಸಿ ಅದೇ ಹುದ್ದೆಯಲ್ಲಿ ಮುಂದುವರಿಸಬೇಕು ಎಂದು ಹರಿಗೋವಿಂದ್ ಆಗ್ರಹಿಸಿದರು.

ಕೋವಿಡ್ ಪರಿಹಾರ ಕಾರ್ಯ ಕೈಗೊಳ್ಳುವಲ್ಲಿ ರಾಜ್ಯ ಸರಕಾರದ ವಿವಿಧ ಇಲಾಖೆಗಳಲ್ಲಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಿದ್ದ ಕಾರ್ಮಿಕ ಇಲಾಖೆ ಪ್ರಧಾನ ಕಾರ್ಯದರ್ಶಿ ಕ್ಯಾಪ್ಟನ್ ಮಣಿವಣ್ಣನ್ ಅವರನ್ನು ರಾಜ್ಯ ಸರಕಾರ ಏಕಾಏಕಿ ವರ್ಗಾವಣೆ ಮಾಡಿದ ಕ್ರಮ ಸರಿಯಲ್ಲ. ಬಂಡವಾಳಿಗರಿಗೆ ವಿನಾಯಿತಿ ನೀಡುವ ಉತ್ತರ ಪ್ರದೇಶದ ಮಾದರಿ ಸುಗ್ರೀವಾಜ್ಞೆ ಹೊರಡಿಸುವ ಸರಕಾರದ ಕೈಂಕರ್ಯಕ್ಕೆ ಅನುವುಗೊಳಿಸಲು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಮಹೇಶ್ವರ ರಾವ್ ಗೆ ಕಾರ್ಮಿಕ ಇಲಾಖೆ ಹೊಣೆ ನೀಡಲಾಗಿದೆ. ಮಣಿವಣ್ಣನ್ ಅವರನ್ನು ಕಾರ್ಮಿಕ ಇಲಾಖೆ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲೆ ಮುಂದುವರಿಸಬೇಕು'

-ಯು.ಬಸವರಾಜು, ಸಿಪಿಎಂ ರಾಜ್ಯ ಕಾರ್ಯದರ್ಶಿ

ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಕಾರ್ಮಿಕ ಇಲಾಖೆ ಹೊಣೆಯನ್ನು ನೀಡುವ ಮೂಲಕ ಕೈಗಾರಿಕೋದ್ಯಮಿಗಳಿಗೆ ರಾಜ್ಯ ಸರಕಾರ ಮಾಲಕರಿಗೆ ಅನುಕೂಲ ಮಾಡಲು ಹೊರಟಿರುವುದು ಸ್ಪಷ್ಟ. ಕೈಗಾರಿಕೆ ಮತ್ತು ಕಾರ್ಮಿಕ ಇಲಾಖೆ ಎರಡು ಭಿನ್ನ. ಆದರೆ, ಉದ್ಯಮಿಗಳ ಹಿತ ರಕ್ಷಣೆ ದೃಷ್ಟಿಯಿಂದಲೇ ದಕ್ಷ ಅಧಿಕಾರಿ ಮಣಿವಣ್ಣನ್ ಅವರ ವರ್ಗಾವಣೆ ಮಾಡಿದ್ದು, ಕೂಡಲೇ ಅವರನ್ನು ಅದೇ ಹುದ್ದೆಯಲ್ಲಿ ಮುಂದುವರಿಸದಿದ್ದರೆ ಹೋರಾಟಕ್ಕೆ ಇಳಿಯಬೇಕಾಗುತ್ತದೆ
-ಎಂ.ಡಿ.ಹರಿಗೋವಿಂದ್, ಎಐಟಿಯುಸಿ ಬೆಂಗಳೂರು ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ

ವರ್ಗಾವಣೆಗೆ ಎಎಪಿ ಆಕ್ಷೇಪ

ಕಾರ್ಮಿಕ ಇಲಾಖೆ ಹಾಗೂ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಧಾನ ಕಾರ್ಯದರ್ಶಿ ಪಿ. ಮಣಿವಣ್ಣನ್ ಅವರನ್ನು ವರ್ಗಾವಣೆಗೊಳಿಸಿರುವ ರಾಜ್ಯ ಸರಕಾರದ ನಿರ್ಧಾರಕ್ಕೆ ಆಮ್‍ಆದ್ಮಿ ಪಕ್ಷ ಆಕ್ಷೇಪ ವ್ಯಕ್ತಪಡಿಸಿದೆ.

ಕೊಳ್ಳೆ ಹೊಡೆಯಲು ಸಚಿವರು, ಶಾಸಕರಿಗೆ ಆಸ್ಪದ ನೀಡಲಿಲ್ಲ ಎನ್ನುವ ಕಾರಣಕ್ಕೆ ವರ್ಗಾವಣೆಗೊಳಿಸಲು ಒತ್ತಡ ತಂದಿರುವುದು ನಿಜಕ್ಕೂ ಆತಂಕಕಾರಿ ನಡೆ. ಜನರ ಪರವಾಗಿ ಕೆಲಸ ಮಾಡುವ ಅಧಿಕಾರಿಗಳನ್ನು ಪದೇ, ಪದೇ ವರ್ಗಾವಣೆ ಮಾಡುತ್ತಾ ಮಾನಸಿಕ, ನೈತಿಕ ಸ್ಥೈರ್ಯ ಕುಸಿಯುವಂತೆ ಮಾಡುವ ಸರಕಾರದ ನಡೆ ಖಂಡನೀಯ. ಅಲ್ಲದೇ ಇದರಿಂದ ಇತರೆ ಅಧಿಕಾರಿಗಳ ದಕ್ಷತೆಯನ್ನೂ ಕುಗ್ಗಿಸಿದಂತೆ ಆಗುತ್ತದೆ. ಕೊರೋನವನ್ನು ನಿಭಾಯಿಸಲು ಪ್ರಯತ್ನ ನಡೆಯುತ್ತಿರುವ ಮಧ್ಯೆ ಇಂತಹ ಕೆಟ್ಟ ಕೆಲಸಕ್ಕೆ ಕೈ ಹಾಕಿರುವ ಮುಖ್ಯಮಂತ್ರಿಗಳು ರೋಗ ನಿಯಂತ್ರಣದ ಕಡೆಗೆ ಗಮನ ಹರಿಸುವುದು ಬಿಟ್ಟು ಶಾಸಕರ ಲಾಬಿಗೆ ಮಣಿಯುತ್ತಿರುವುದು ನೋಡಿದರೆ ಇಲ್ಲಿ ಯಾರ ಮೇಲೂ ಯಾರೂ ನಿಯಂತ್ರಣ ಹೊಂದಿಲ್ಲದ ಹುಚ್ಚನ ಮದುವೆಯಲ್ಲಿ ಉಂಡವನೇ ಜಾಣ ಎನ್ನುವಂತಾಗಿದೆ ಎಂದು ಎಎಪಿ ದೂರಿದೆ.

ಮಣಿವಣ್ಣನ್ ಏಕಾಏಕಿ ವರ್ಗಾವಣೆಗೆ ಸಿಪಿಎಂ ಖಂಡನೆ

ಕೋವಿಡ್ ಪರಿಹಾರ ಕಾರ್ಯ ಕೈಗೊಳ್ಳುವಲ್ಲಿ ರಾಜ್ಯ ಸರಕಾರದ ವಿವಿಧ ಇಲಾಖೆಗಳಲ್ಲೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದ್ದ ಕಾರ್ಮಿಕ ಇಲಾಖೆಯ ಪ್ರಧಾನ ಕಾಯದರ್ಶಿಯಾದ ಮಣಿವಣ್ಣನ್‍ರನ್ನು ರಾಜ್ಯ ಸರಕಾರವು ಏಕಾಏಕಿ ವರ್ಗಾವಣೆ ಮಾಡಿರುವುದು ಸರಿಯಾದ ಕ್ರಮವಲ್ಲ ಎಂದು ಭಾರತ ಕಮ್ಯುನಿಸ್ಟ್ ಪಕ್ಷ(ಮಾರ್ಕ್ಸ್ ವಾದಿ) ಆಕ್ಷೇಪ ವ್ಯಕ್ತಪಡಿಸಿದೆ.

ಉತ್ತರ ಪ್ರದೇಶ, ಗುಜರಾತ್, ಮಧ್ಯ ಪ್ರದೇಶ ರಾಜ್ಯಗಳಲ್ಲಿ ತಂದಿರುವ ಕಾರ್ಮಿಕ ಕಾನೂನುಗಳಿಂದ ಬಂಡವಾಳಗಾರರಿಗೆ ವಿನಾಯಿತಿ ನೀಡುವ ಕ್ರಮಗಳನ್ನು ಸುಗ್ರೀವಾಜ್ಞೆ ಹೊರಡಿಸುವ ಸರಕಾರದ ಕೈಂಕರ್ಯಕ್ಕೆ ಅನುವುಗೊಳಿಸಲು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಹೇಶ್ವರರಾವ್‍ರಿಗೆ ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹೊಣೆಯನ್ನು ವಹಿಸಿದೆ. ರಾಜ್ಯದ ಕಾರ್ಮಿಕರ ಹಿತಕ್ಕಿಂತ ಕಾರ್ಪೋರೇಟ್ ಬಂಡವಾಳದ ಹಿತವೇ ರಾಜ್ಯ ಸರಕಾರಕ್ಕೆ ಮುಖ್ಯವಾಗಿದೆ ಎಂಬುದನ್ನು ಇದು ಮತ್ತೆ ಸಾಬೀತು ಮಾಡಿದಂತಾಗಿದೆ. ಏನಾದರು ಮಾಡಿ ಕಾರ್ಮಿಕ ಕಾನೂನುಗಳಿಂದ ಬಂಡವಾಳಗಾರರಿಗೆ ವಿನಾಯಿತಿ ನೀಡಲು ಕೋವಿಡ್ ಪರಿಹಾರವನ್ನು ಸಹ ಬಲಿ ಕೊಡಲು ಸರಕಾರ ಹಿಂಜರಿಯದು ಎಂಬುದನ್ನು ಇದು ತೋರುತ್ತದೆ.

ಒಬ್ಬ ದಕ್ಷ ಮತ್ತು ಕೋವಿಡ್ ಪರಿಹಾರ ಕಾರ್ಯವನ್ನು ಪರಿಣಾಮಕಾರಿಯಾಗಿ ಕೈಗೊಳ್ಳುವಲ್ಲಿ ಯಶಸ್ಸು ಕಾಣುತ್ತಿದ್ದ ಅಧಿಕಾರಿಯನ್ನು ಬೆಂಬಲಿಸಿ ಪ್ರೋತ್ಸಾಹಿಸುವ ಬದಲು ಈ ವರ್ಗಾವಣೆಯು ಶಿಕ್ಷಿಸಿದಂತಾಗಿದೆ. ಲಾಕ್‍ಡೌನ್ ಸಂತ್ರಸ್ತರಿಗೆ ಪರಿಹಾರವನ್ನು ಪರಿಣಾಮಕಾರಿಯಾಗಿ ಮುಂದುವರಿಸಲು ಮಣಿವಣ್ಣನ್ ವರ್ಗಾವಣೆಯನ್ನು ಕೂಡಲೇ ರದ್ದುಪಡಿಸಿ, ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ಅವರನ್ನೇ ಮುಂದುವರಿಸಬೇಕೆಂದು ಸಿಪಿಎಂ ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News