43 ಮಂದಿ ಅರಣ್ಯ ಸಂರಕ್ಷಣಾಧಿಕಾರಿಗಳ ವರ್ಗಾವಣೆ

Update: 2020-05-12 15:03 GMT

ಬೆಂಗಳೂರು, ಮೇ 12: ಅರಣ್ಯ ಇಲಾಖೆಯಲ್ಲಿ 43 ಮಂದಿ ಅರಣ್ಯ ಸಂರಕ್ಷಣಾಧಿಕಾರಿಗಳನ್ನು ಸಚಿವ ಆನಂದಸಿಂಗ್ ವರ್ಗಾವಣೆ ಮಾಡಿದ್ದಾರೆ.

ಕೊರೋನ ಲಾಕ್‍ಡೌನ್ ಇರುವ ಸಂದರ್ಭದಲ್ಲೇ 43 ಮಂದಿ ಅರಣ್ಯ ಸಂರಕ್ಷಣಾಧಿಕಾರಿಗಳು, ಇಬ್ಬರು ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದ್ದು, ತಮಗೆ ಬೇಕಾದವರನ್ನು ಆಯಕಟ್ಟಿನ ಸ್ಥಳಕ್ಕೆ ನಿಯೋಜನೆ ಮಾಡಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಎ.27ರಿಂದ ಮೇ 8ರವರೆಗೆ ಹಂತ ಹಂತವಾಗಿ ಈ ವರ್ಗಾವಣೆ ಆದೇಶಗಳನ್ನು ಹೊರಡಿಸಲಾಗಿದೆ. ಇದಕ್ಕೆ ಅಧಿಕಾರಿಗಳ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಆರ್‍ಎಫ್‍ಒ ಒಬ್ಬರ ವರ್ಗಾವಣೆಗೆ ಕರ್ನಾಟಕ ಆಡಳಿತ ನ್ಯಾಯಮಂಡಳಿಯಿಂದ (ಕೆಎಟಿ) ತಡೆಯಾಜ್ಞೆ ಇದ್ದರೂ, ಅದನ್ನು ಉಲ್ಲಂಘಿಸಿ ಸಚಿವರ ಒತ್ತಡದ ಮೇಲೆ ಆದೇಶ ಹೊರಡಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ

ಪ್ರಸ್ತುತ ಮಾಡಲಾಗಿರುವ ವರ್ಗಾವಣೆ ಪಾರದರ್ಶಕವಾಗಿಲ್ಲ. ವರ್ಗಾವಣೆ ಮಾನದಂಡವನ್ನು ಉಲ್ಲಂಘನೆ ಮಾಡಲಾಗಿದೆ. ಅದರಲ್ಲೂ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸ್ಥಳ ನಿಯುಕ್ತಿ ಮಾಡುವ ಸಂದರ್ಭದಲ್ಲಿ ಲಾಬಿ ನಡೆದಿದೆ ಎಂದು ಅರಣ್ಯ ಇಲಾಖೆಯ ಕೆಲ ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಷಯಕ್ಕೆ ಅರಣ್ಯ ಸಚಿವ ಆನಂದ ಸಿಂಗ್ ಪ್ರತಿಕ್ರಿಯಿಸಿ, ತಾವು ಈ ವರ್ಗಾವಣೆಯನ್ನು ಮಾಡಿಲ್ಲ. ಎಲ್ಲ ವರ್ಗಾವಣೆಗಳು ಫೆಬ್ರವರಿ ತಿಂಗಳಲ್ಲೇ ಆಗಿದೆ. ಆಗ ಆದೇಶ ತಡೆಹಿಡಿಯಲಾಗಿತ್ತು. ಈಗ ಅದಕ್ಕೆ ಚಾಲನೆ ಬಂದಿದೆ. ನಿಯಮಾವಳಿ ಪ್ರಕಾರವೇ ವರ್ಗಾವಣೆ ಆಗಿದೆ. ನಿಯಮಾವಳಿಗಳನ್ನು ಮೀರಿ ಯಾವುದೇ ವರ್ಗಾವಣೆಯಾಗಿಲ್ಲ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News