ಪಾವತಿ ಕ್ವಾರಂಟೈನ್ ಗೆ ಒಳಪಡಿ ಅಥವಾ ಹಿಂದಿರುಗಿ: ಹೊರ ರಾಜ್ಯಗಳಿಂದ ಬರುವ ಕನ್ನಡಿಗರಿಗೆ ಸರಕಾರ ಸೂಚನೆ
ಬೆಂಗಳೂರು, ಮೇ 13: ಕ್ವಾರಂಟೈನ್ ಗಾಗಿ ಹೋಟೆಲ್ ರೂಂಗಳಿಗೆ ವೆಚ್ಚ ಮಾಡುವ ಬದಲು ಮನೆಯಲ್ಲೇ ಕ್ವಾರಂಟೈನ್‌ನಲ್ಲಿರಲು ಅನುಮತಿ ಕೋರಿದ ಕಾರಣಕ್ಕಾಗಿ ವಿವಿಧ ರಾಜ್ಯಗಳಿಂದ ತವರು ರಾಜ್ಯಕ್ಕೆ ತಮ್ಮ ವಾಹನಗಳಲ್ಲಿ ಆಗಮಿಸಿರುವ ಕನ್ನಡಿಗರಿಗೆ ಮಂಗಳವಾರ ಕರ್ನಾಟಕ ಪ್ರವೇಶಿಸಲು ಅಧಿಕಾರಿಗಳು ಅನುಮತಿ ನಿರಾಕರಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಇತರ ರಾಜ್ಯಗಳಿಂದ ಆಗಮಿಸುವ ಎಲ್ಲ ಕನ್ನಡಿಗರಿಗೆ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯಪಡಿಸಿ ಸೋಮವಾರ ಮಧ್ಯರಾತ್ರಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ಕಾರ ಆದೇಶ ಹೊರಡಿಸಿತ್ತು. ದೊಡ್ಡ ಸಂಖ್ಯೆಯಲ್ಲಿ ಕನ್ನಡಿಗರು ವಾಪಸ್ಸಾಗುವುದನ್ನು ತಡೆಯಲು ಪಾವತಿ ಕ್ವಾರಂಟೈನ್ ವ್ಯವಸ್ಥೆ ಕಡ್ಡಾಯಪಡಿಸುವುದು ಉತ್ತಮ ಮಾರ್ಗ ಎನ್ನುವುದು ಅಧಿಕಾರಿಗಳ ಸಲಹೆ.
ಹೊರ ರಾಜ್ಯಗಳಿಂದ ಪುಟ್ಟ ಮಕ್ಕಳೊಂದಿಗೆ ಆಗಮಿಸಿದ ಹಲವು ಮಂದಿಗೆ ಈ ನಿಯಮ ಗೊತ್ತಿಲ್ಲದ ಹಿನ್ನೆಲೆಯಲ್ಲಿ ಗಡಿ ಚೆಕ್‌ಪೋಸ್ಟ್‌ಗಳಲ್ಲಿ ಅವರನ್ನು ತಡೆದ ಪೊಲೀಸ್ ಅಧಿಕಾರಿಗಳು, ನಿಮಗೆ ಇರುವುದು ಕೇವಲ ಎರಡೇ ಆಯ್ಕೆಗಳು; ಒಂದು ಹೋಟೆಲ್‌ಗಳಲ್ಲಿ ವಾಸ್ತವ್ಯ ಇರುವುದು ಅಥವಾ ವಾಪಸ್ ಹೋಗುವುದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಲಾಕ್‌ಡೌನ್ ಅವಧಿಯಲ್ಲಿ ಹೊರಗೆ ಸಿಕ್ಕಿಹಾಕಿಕೊಂಡು ದೂರದ ರಾಜ್ಯಗಳಿಂದ ಅಂತರ ರಾಜ್ಯ ಪಾಸ್ ಪಡೆದು ಆಗಮಿಸಿರುವ ಸಾವಿರಾರು ಮಂದಿಯ ಸ್ಥಿತಿ ಅತಂತ್ರವಾಗಿದೆ. 1.25 ಲಕ್ಷ ಮಂದಿ ಕರ್ನಾಟಕಕ್ಕೆ ಮರಳಲು ಅನುಮತಿಗೆ ಅರ್ಜಿ ಸಲ್ಲಿಸಿದ್ದಾರೆ.
ಹೊಸೂರು ರಸ್ತೆಯ ಅತ್ತಿಬೆಲೆ ಚೆಕ್‌ಪೋಸ್ಟ್ ಬಳಿ ತಾಯಂದಿರು, ವಿದ್ಯಾರ್ಥಿಗಳು ಹಾಗೂ ಅಂಗವಿಕಲರು ಸುಡು ಬಿಸಿಲ ನಡುವೆಯೇ, ಮನೆಗೆ ತೆರಳಲು ಅವಕಾಶ ನೀಡುವಂತೆ ಅಧಿಕಾರಿಗಳನ್ನು ದೈನ್ಯವಾಗಿ ಬೇಡುತ್ತಿರುವ ದೃಶ್ಯಗಳು ಮಂಗಳವಾರ ಕಂಡುಬಂದವು. ''ಸರ್ ನಮಗೆ ಹೋಂ ಕ್ವಾರಂಟೈನ್‌ಗೆ ಅವಕಾಶ ನೀಡಿ. ವಿದೇಶಗಳಿಂದ ಆಗಮಿಸಿದ ವ್ಯಕ್ತಿಗಳನ್ನು ಟ್ರ್ಯಾಕ್ ಮಾಡುವಂತೆ ತಂತ್ರಜ್ಞಾನ ನೆರವಿನಿಂದ ನಮ್ಮನ್ನು ಟ್ರ್ಯಾಕ್ ಮಾಡಿ'' ಎಂದು ತಂದೆಯೊಬ್ಬರು ಮನವಿ ಮಾಡುತ್ತಿರುವುದು ಕಂಡುಬಂತು. ಹೋಟೆಲ್‌ನಲ್ಲಿ ತಂಗಲು ಹಣ ಇಲ್ಲ ಹಾಗೂ ಕಲ್ಯಾಣ ಮಂಟಪ ಅಥವಾ ಶಾಲೆಗಳಲ್ಲಿ ವಾಸ್ತವ್ಯ ಇರಲು ಸಿದ್ಧರಿಲ್ಲ ಎಂದು ಅವರು ಅಧಿಕಾರಿಗಳ ಬಳಿ ವಾಗ್ವಾದ ನಡೆಸುತ್ತಿರುವುದು ಕಂಡುಬಂತು.
ರಾಜ್ಯವನ್ನು ಪ್ರವೇಶಿಸುತ್ತಿರುವ ವಲಸೆಯವರು ಪಾವತಿಸುವ ಸಾಮರ್ಥ್ಯ ಇರುವವರು. ಹಣವಿಲ್ಲದೇ ವಲಸೆಯವರು ಯಾರೂ ಕರ್ನಾಟಕಕ್ಕೆ ವಾಪಸ್ಸಾಗುವುದಿಲ್ಲ ಎನ್ನುವುದು ತಮಿಳುನಾಡು- ಕರ್ನಾಟಕ ಗಡಿಯ ನೋಡೆಲ್ ಅಧಿಕಾರಿ ವಿ.ಪೊನ್ನುರಾಜ್ ಅವರ ಅಭಿಮತ. ವಿದ್ಯಾರ್ಥಿಗಳಲ್ಲಿ 15 ದಿನಗಳ ಕಾಲ ಹೋಟೆಲ್‌ನಲ್ಲಿ ಉಳಿಯುವ ಸಾಮರ್ಥ್ಯ ಇಲ್ಲ ಎನ್ನುವುದನ್ನು ಗಮನಕ್ಕೆ ತಂದಾಗ, ಲಾಕ್‌ಡೌನ್ ಇನ್ನಷ್ಟು ಸಡಿಲವಾಗುವವರೆಗೂ ಈಗ ಎಲ್ಲಿದ್ದಾರೋ ವಿದ್ಯಾರ್ಥಿಗಳು ಅಲ್ಲೇ ಇರಲಿ ಎಂದು ಅವರು ಪ್ರತಿಕ್ರಿಯಿಸಿದರು.