ಮನೋರೋಗಾಲಯ ಆಗುತ್ತಿದೆ ಮನೆ

Update: 2020-05-13 17:16 GMT

ಕನ್ನಡ ಸುದ್ದಿ ಚಾನೆಲ್‌ಗಳಲ್ಲಿ ಸುದ್ದಿ ಓದುವ ಶೈಲಿ ಮತ್ತು ಅವರು ತಮ್ಮ ಧ್ವನಿ ಬದಲಾಯಿಸಿಕೊಂಡು ಸುದ್ದಿ ಓದುವ ರೀತಿ ನೋಡುವ ಮಕ್ಕಳೇನೂ ದೊಡ್ಡವರೂ ಕೂಡ ಭೀತಿಗೆ ಒಳಗಾಗುತ್ತಿದ್ದಾರೆ. ಇನ್ನು ಈ ಕೊರೋನದಿಂದ ನಮ್ಮ ಸುತ್ತಲೂ ನಡೆಯುತ್ತಿರುವ ಘಟನೆಗಳಂತೂ ಎಂತಹವರನ್ನೂ ಖಿನ್ನತೆಗೆ ದೂಡುತ್ತಿವೆ. ಮನೆಮಠ ಇಲ್ಲದೆ ಅನ್ನ ನೀರಿಗೆ ಹಾಹಾಕಾರ ಮಾಡುತ್ತಿರುವ ನಿರ್ಗತಿಕರು. ನೂರಾರು ಕಿ.ಮೀ.ಗಳು ದೂರ ನಡೆದು ದಾರಿಯಲ್ಲೇ ಸತ್ತವರು. ತಮ್ಮ ಸ್ವಂತ ಊರುಗಳಿಗೆ ಸೇರಿಸದೆ ಬೇಲಿ ಹಾಕಿಕೊಂಡ ಹಳ್ಳಿಗಳು. ಹೆಣಗಳನ್ನು ಹೂಳಲು ಬಿಡದ ಜನರು. ವೈದ್ಯಕೀಯ ಸೌಲಭ್ಯಗಳು ದೊರಕದೇ ಮನೆಗಳಲ್ಲೇ ಹೈರಾಣವಾಗುತ್ತಿರುವ ರೋಗಿಗಳು ಹೀಗೆ. ಮನುಷ್ಯರೇ ಮನುಷ್ಯರನ್ನು ನಡೆಸಿಕೊಳ್ಳುತ್ತಿರುವ ರೀತಿ ಜನರನ್ನು ಖಿನ್ನತೆಗೆ ದೂಡುತ್ತಿದೆ. 


ಮಾನ್ಯ ಪ್ರಧಾನಮಂತ್ರಿ ನೋಟ್ ಬ್ಯಾನ್ ಮಾಡಿದ ರೀತಿಯಲ್ಲೇ ರಾತ್ರೋರಾತ್ರಿ ಕೊರೋನ ರೋಗ ತಪ್ಪಿಸಲು ಇಡೀ ದೇಶವನ್ನು ಲಾಕ್‌ಡೌನ್ ಮಾಡಿದ ಕಾರಣ ಮನೆ ಒಳಗೆ ಸಿಕ್ಕಿಕೊಂಡವರಲ್ಲಿ ನಾನೂ ಒಬ್ಬ. ಇನ್ನೂ ಅಪಾಯ ಎಂದರೆ 60 ದಾಟಿದ ನನ್ನಂತಹವರು ಮನೆಯನ್ನು ಬಿಡಲೇಬಾರದು ಎನ್ನುವ ಎಚ್ಚರಿಕೆ ಬೇರೆ ಕೊಟ್ಟರು. ಆದರೆ ನಾನು ಬದುಕಬೇಕಾದರೆ ಏನಾದರೂ ತಿನ್ನಲೇಬೇಕಲ್ಲವೇ? ಹತ್ತಿರ ಇರುವ ತರಕಾರಿ, ದಿನಸಿ ಆಂಗಡಿಗಳಿಗಾದರೂ ಹೋಗಲೇಬೇಕು. ನನಗೆ ಒಂದೆರಡು ಕಾಯಿಲೆಗಳಿದ್ದು ಮಾತ್ರೆಗಳನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡಿದಾಗ, ಕೆಲವರು ಸ್ಟಾಕ್ ಇಲ್ಲ ಎಂದರೆ ಕೆಲವರು ಮನೆಗೆ ತಂದುಕೊಡುವುದಿಲ್ಲ ಎಂದರು. ಕೊನೆಗೆ ನಾನೇ ಕಾರ್ ತೆಗೆದುಕೊಂಡು ನಾಲ್ಕಾರು ಕಡೆ ಸುತ್ತಿ ಒಂದು ತಿಂಗಳಿಗಾಗುವಷ್ಟು ಮಾತ್ರೆಗಳನ್ನು ತಂದುಕೊಂಡೆ. ಸದ್ಯ ನನ್ನ ಅದೃಷ್ಟಕ್ಕೆ ಪೊಲೀಸರು ನನ್ನ ಕಾರನ್ನು ಸೀಜ್ ಮಾಡಲಿಲ್ಲ. ನನ್ನ ಪತ್ನಿ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬೆಳಗ್ಗೆಯೇ ಹೊರಗೋಗಿ ತರಕಾರಿ, ದಿನಸಿ ಹೇಗೊ ತರುತ್ತಾಳೆ. ಆಕೆಯೂ 60ರ ಹತ್ತಿರ ಸಮೀಪಿಸುತ್ತಿದ್ದು, ಒಬ್ಬನೇ ಮಗ ಜೆಕ್ ಗಣರಾಜ್ಯದ ರಾಜಧಾನಿ ಪ್ರೇಗ್‌ನಲ್ಲಿ ನನ್ನಂತೆ ಮನೆಯೊಳಗೆ ಸಿಕ್ಕಿಕೊಂಡಿದ್ದಾನೆ. ಲಾಕ್‌ಡೌನ್ ಆಗಿ 6 ವಾರಗಳು ಮುಗಿಯುತ್ತಾ ಬಂದಿವೆ. ಮುಂದೆ ಹೇಗೊ ಏನೋ ಯಾರಿಗೂ ಗೊತ್ತಿಲ್ಲ.

ಮನೆಯೇ ಮಂತ್ರಾಲಯ ಎನ್ನುವ ನಮ್ಮ ಮನೆಯಲ್ಲಿ ಉಳಿದಿರುವ ಜಗತ್ತೆಂದರೆ ಪುಸ್ತಕಗಳನ್ನು ಓದುವುದು, ಏನಾದರು ಬರೆಯುವುದು ಮತ್ತು ಟಿವಿ ನೋಡುವುದು. ಪತ್ನಿಯ ಜೊತೆಗೆ ಮಾತನಾಡುವುದು ಇಲ್ಲ ಜಗಳವಾಡುವುದು. ಹ! ಇನ್ನೊಂದು ಕೆಲಸವೂ ಇದೆ. ಬೋರಾದಾಗ ಗೆಳೆಯರಿಗೆ ಫೋನ್ ಹಚ್ಚಿ ಮಾತನಾಡುವುದು. ಮೊನ್ನೆ ಪ್ರಖ್ಯಾತ ಕನ್ನಡ ಲೇಖಕರೊಬ್ಬರು ಫೋನ್ ಮಾಡಿದರು. ಒಂದಷ್ಟು ಮಾತನಾಡಿದ ಮೇಲೆ ‘‘ಸರ್ ಏನು ಬರಿಯ್ತಾ ಇದ್ದೀರಿ?’’ ಎಂದೆ. ‘‘ಅಯ್ಯೋ ವೆಂಕಟಸ್ವಾಮಿ ಬರೆಯುವುದಕ್ಕೆ ಮನಸ್ಸೇ ಬರ್ತಾ ಇಲ್ಲ. ಈ ಟಿವಿ ನ್ಯೂಸ್ ಚಾನೆಲ್ ಸುದ್ದಿಗಳನ್ನು ನೋಡಿ ನೋಡಿ ನನಗೆ ಖಿನ್ನತೆ ಬಂದುಬಿಟ್ಟಿದೆ’’ ಎಂದರು. ‘‘ಸರ್ ದಯವಿಟ್ಟು ನ್ಯೂಸ್ ನೋಡುವುದನ್ನು ಬಿಟ್ಟುಬಿಡಿ’’ ಎಂದು ಅವರಿಗೆ ಸಮಾಧಾನ ಹೇಳಿದೆ.

 ಮರುದಿನ ನಾನೇ ನನ್ನ ಆತ್ಮೀಯ ಗೆಳೆಯರಾದ ಸಿನೆಮಾ ನಿರ್ದೇಶಕರೊಬ್ಬರಿಗೆ ಫೋನ್ ಮಾಡಿದಾಗ ಅವರು, ‘‘ನಿನ್ನೆ ಸಾಯಂಕಾಲ ನನಗೆ ಟೆನ್ಶನ್ ಆಗಿ ಉಸಿರಾಡುವುದಕ್ಕೆ ತುಂಬ ತೊಂದರೆ ಆಗಿಬಿಡ್ತು. ವೈದ್ಯರ ಹತ್ತಿರ ಹೋಗಿ ಅವರು ಏನಾಯಿತು ಅಂತ ಕೇಳಿದರು. ಏನೂ ಇಲ್ಲ ಸರ್ ಮನೆಯಲ್ಲಿ ಕುಳಿತುಕೊಂಡು ಟಿವಿ ನ್ಯೂಸ್ ನೋಡ್ತಾ ಇರ್ತೀನಿ ಅಂದೆ. ಈವೊತ್ತು ನೀವು ನಾಲ್ಕನೆಯವರು ಈ ರೀತಿ ಬಂದಿರುವುದು. ನಿಮಗೆ ಏನೂ ಆಗಿಲ್ಲ. ದಯವಿಟ್ಟು ನ್ಯೂಸ್ ನೋಡುವುದನ್ನು ಬಿಟ್ಟಬಿಡಿ. ಒಳ್ಳೆ ಸಿನೆಮಾ ನೋಡಿ, ಹಾಡು ಕೇಳಿ, ಮನೆ ಹತ್ತಿರಾನೇ ಒಂದಷ್ಟು ಸುತ್ತಾಡಿ, ಊಟ ಮಾಡಿ, ವಿಶ್ರಾಂತಿ ತೆಗೆದುಕೊಳ್ಳಿ ಎಂದು ಮಾತ್ರೆ ಕೊಟ್ಟಿದ್ದಾರೆ’’ ಎಂದರು. ಆವರಿಗೂ ಸಮಾಧಾನ ಹೇಳಿದೆ. ಇನ್ನೊಬ್ಬ ಲೇಖಕರಿಗೆ ಫೋನ್ ಮಾಡಿ ‘‘ಸರ್ ಏನು ಓದ್ತಾ ಇದ್ದೀರಿ? ಏನು ಬರಿಯ್ತಾ ಇದ್ದೀರಿ’’ ಎಂದಿದ್ದಕ್ಕೆ ‘‘ಅಯ್ಯೋ ಸಾರ್ ಏನು ಬರೆಯುವುದು ಭೂಮೀನೇ ಕುಸಿಯ್ತೆ ಇರುವಾಗ’’ ಎಂದರು. ಕನ್ನಡ ಸುದ್ದಿ ಚಾನೆಲ್‌ಗಳಲ್ಲಿ ಸುದ್ದಿ ಓದುವ ಶೈಲಿ ಮತ್ತು ಅವರು ತಮ್ಮ ಧ್ವನಿ ಬದಲಾಯಿಸಿಕೊಂಡು ಸುದ್ದಿ ಓದುವ ರೀತಿ ನೋಡುವ ಮಕ್ಕಳೇನೂ ದೊಡ್ಡವರೂ ಕೂಡ ಭೀತಿಗೆ ಒಳಗಾಗುತ್ತಿದ್ದಾರೆ. ಇನ್ನು ಈ ಕೊರೋನದಿಂದ ನಮ್ಮ ಸುತ್ತಲೂ ನಡೆಯುತ್ತಿರುವ ಘಟನೆಗಳಂತೂ ಎಂತಹವರನ್ನೂ ಖಿನ್ನತೆಗೆ ದೂಡುತ್ತಿವೆ. ಮನೆಮಠ ಇಲ್ಲದೆ ಅನ್ನ ನೀರಿಗೆ ಹಾಹಾಕಾರ ಮಾಡುತ್ತಿರುವ ನಿರ್ಗತಿಕರು. ನೂರಾರು ಕಿ.ಮೀ.ಗಳು ದೂರ ನಡೆದು ದಾರಿಯಲ್ಲೇ ಸತ್ತವರು. ತಮ್ಮ ಸ್ವಂತ ಊರುಗಳಿಗೆ ಸೇರಿಸದೆ ಬೇಲಿ ಹಾಕಿಕೊಂಡ ಹಳ್ಳಿಗಳು. ಹೆಣಗಳನ್ನು ಹೂಳಲು ಬಿಡದ ಜನರು. ವೈದ್ಯಕೀಯ ಸೌಲಭ್ಯಗಳು ದೊರಕದೇ ಮನೆಗಳಲ್ಲೇ ಹೈರಾಣವಾಗುತ್ತಿರುವ ರೋಗಿಗಳು ಹೀಗೆ.

ಮನುಷ್ಯರೇ ಮನುಷ್ಯರನ್ನು ನಡೆಸಿಕೊಳ್ಳುತ್ತಿರುವ ರೀತಿ ಜನರನ್ನು ಖಿನ್ನತೆಗೆ ದೂಡುತ್ತಿದೆ. ಇದು ಅನೇಕ ಮನೋರೋಗಗಳಿಗೂ ದಾರಿಯಾಗುತ್ತಿದೆ. ಮದ್ಯದ ಅಂಗಡಿಗಳನ್ನು ತೆಗೆಯುವುದೇ ಇಲ್ಲ ಎಂದು ಹಠ ಮಾಡುತ್ತಿದ್ದ ಕೇಂದ್ರ ಸರಕಾರ ಕೊನೆಗೆ ಕುಡುಕರ ಹಣಕ್ಕಾಗಿ ವಿಧಿ ಇಲ್ಲದೆ ದೇಶದಾದ್ಯಂತ ದಿಢೀರನೆ ಮದ್ಯದ ಅಂಗಡಿಗಳನ್ನು ತೆರೆದುಬಿಟ್ಟಿತು. ಈಗ ಇಡೀ ದೇಶಕ್ಕೆ ಕುಡುಕರು ಎಷ್ಟು ಮಂದಿ ಇದ್ದಾರೆ ಎನ್ನುವುದು ಅರ್ಥವಾಯಿತು. ಕುಡುಕರಿಂದ ಮಹಿಳೆಯರ ಸಮಸ್ಯೆಗಳು ಮತ್ತೆ ಪ್ರಾರಂಭವಾಗಿಬಿಟ್ಟಿವೆ. ಅದೇ ರೀತಿ ಲಾಕ್‌ಡೌನ್ ಘೋಷಿಸಿದ ಮೇಲೆ ದೇಶದಲ್ಲಿ ಎಷ್ಟು ಜನ ಬಡವರು, ನಿರ್ಗತಿಕರು ಮತ್ತು ವಲಸಿಗ ಕಾರ್ಮಿಕರು ಇದ್ದಾರೆ ಎಂಬುದೂ ಕೂಡ ಜನರ ಅರಿವಿಗೆ ಬಂದಿತು. ಅಂದರೆ ನಮ್ಮ ದೇಶ ಎಷ್ಟು ಅಭಿವೃದ್ಧಿ ಹೊಂದಿದೆ ಎನ್ನುವುದು ಈಗ ಕಣ್ಣುಗಳ ಮುಂದೆ ಕಾಣಿಸುತ್ತಿದೆ. ಕೊರೋನ ಜಗತ್ತನ್ನು ಸಂಪೂರ್ಣವಾಗಿ ಆವರಿಸಿಕೊಂಡು ಜಗತ್ತೆಲ್ಲ ಸ್ತಬ್ಧವಾಗಿಬಿಟ್ಟಿದೆ. ಜಗತ್ತಿನ ಜನರೆಲ್ಲ ತಮಗೆ ತಾವೇ ಲಾಕ್‌ಡೌನ್ ಮಾಡಿಕೊಂಡು ಮನೆಗಳ ಒಳಗೆ ಬದುಕಲು ಪ್ರಾರಂಭಿಸಿ ನಾಲ್ಕಾರು ವಾರಗಳೇ ಆಗಿವೆ. ಆದರೆ ಕೊರೋನಆರ್ಭಟ ಮಾತ್ರ ಹೆಚ್ಚುತ್ತಲೇ ಹೋಗುತ್ತಿದೆ. ಜನರು ಮನೆಗಳ ಒಳಗೆ ನಿರಂತರವಾಗಿ ಕಾಲ ಕಳೆಯುವುದೆಂದರೆ ಅದೊಂದು ಭಯಂಕರ ಶಿಕ್ಷೆ. ಜೊತೆಗೆ ಜನರು ಮನೆಗಳ ಒಳಗೆ ಕೆಲಸಗಳಿಲ್ಲದೆ ನಿರಂತರವಾಗಿ ಸುದ್ದಿ ಚಾನೆಲ್‌ಗಳನ್ನು ನೋಡುವ ಚಟ ಹತ್ತಿಸಿಕೊಂಡುಬಿಟ್ಟಿದ್ದಾರೆ. ಇದು ಕೊರೋನಗಿಂತ ಹೆಚ್ಚು ಅಪಾಯಕಾರಿಯಾಗಿ ಪರಿಣಮಿಸಿ ಜನರು ಮಾನಸಿಕ ರೋಗಗಳಿಗೆ ಈಡಾಗುತ್ತಿದ್ದಾರೆ. ಯಾವುದೇ ಹವ್ಯಾಸಗಳಿಲ್ಲದ ಜನರಿಗಂತೂ ಇದು ದೊಡ್ಡ ಶಿಕ್ಷೆಯಾಗಿ ಪರಿವರ್ತನೆಯಾಗಿದೆ.

ಜಗವೇ ಒಂದು ನಾಟಕರಂಗ ಎಂಬಂತೆ ಈಗ ಕೊರೋನದಿಂದ ಮನೆಮನೆಯೂ ನಾಟಕರಂಗವಾಗಿ ಪರಿಣಮಿಸಿದೆ. ಬಡವರು ಅನ್ನ ನೀರಿಗೆ ಹಾಹಾಕಾರ ಮಾಡುತ್ತಿದ್ದರೆ, ಹಣವಂತರು ಖರ್ಚು ಮಾಡಲಾಗದೆ ಒದ್ದಾಡುತ್ತಿದ್ದಾರೆ. ಜಗತ್ತು ಒಂದು ಸಣ್ಣ ಜಾಗತಿಕ ಹಳ್ಳಿ ಎನ್ನುತ್ತಿದ್ದವರಿಗೆ ಈಗ ಪ್ರತಿ ಮನೆಯೂ ಒಂದು ಜಗತ್ತಾಗಿ ಪರಿಣಮಿಸಿದೆ. ದೇಶಗಳನ್ನು ಬಿಟ್ಟು ದೇಶಾಂತರ ಹೋದವರ ಅಪ್ಪಅಮ್ಮ ಒಂದು ಕಡೆ, ಮಗ ಮಗಳು ಒಂದು ಕಡೆ, ಪತಿಪತ್ನಿ ಇನ್ನೊಂದು ಕಡೆ ಚದುರಿಹೋಗಿದ್ದಾರೆ. ಕಾರ್ಖಾನೆ ಬಿಟ್ಟಿದ್ದೇ ಒಂದು ದಿನವೂ ವಿಶ್ರಾಂತಿ ಇಲ್ಲದೆ ಆಕಾಶವೆಲ್ಲ ಹಾರಾಡುತ್ತಿದ್ದ ಲೋಹದ ಹಕ್ಕಿಗಳು ಎಲ್ಲಿವೆ? ಏನು ಮಾಡುತ್ತಿವೆ? ಎನ್ನುವುದು ಯಾರಿಗೂ ತಿಳಿಯುತ್ತಿಲ್ಲ. ಭಾರತದಿಂದ ವಿದೇಶಗಳಿಗೆ ವಲಸೆಹೋದ ಲಕ್ಷಾಂತರ ಕಾರ್ಮಿಕರು ಕೆಲಸ ಕಳೆದುಕೊಂಡು ಈಗ ‘ಜಗತ್ತಿನ ದೊಡ್ಡ ಏರ್ ಲಿಫ್ಟ್’ ಎನ್ನುವ ಹೆಸರಿನಲ್ಲಿ ಹಿಂದಿರುಗುತ್ತಿದ್ದಾರೆ.

ಅಂತೂ ಕಣ್ಣಿಗೆ ಕಾಣದ ಈ ಸೂಕ್ಷ್ಮಾತಿಸೂಕ್ಷ್ಮ ಕೊರೋನ ವೈರಾಣು ನಾನೇ ಬುದ್ಧಿವಂತ ಪ್ರಾಣಿ, ನಾನೇ ಎಲ್ಲವೂ ಎಂದು ಬೀಗುತ್ತಿದ್ದ ಮನುಷ್ಯನನ್ನು ಮಂಡಿಯೂರಿ ಕೂರಿಸುವಂತೆ ಮಾಡಿದೆ. ಜಗತ್ತನ್ನೇ ನಡುಗಿಸುತ್ತಿರುವ ಈ ಕೊರೋನ ವೈರಾಣು ಅಂತಿಂಥ ವೈರಾಣುವಲ್ಲ. ಕುವೆಂಪು ಅವರ ಕಲ್ಕಿಯೆ ಇರಬೇಕು! ಈಗ ಕೇಂದ್ರ ಸರಕಾರ ದಿಢೀರನೆ ಇನ್ನೊಂದು ಮಹಾ ನಿರ್ಧಾರ ತೆಗೆದುಕೊಂಡುಬಿಟ್ಟಿದೆ. ಹಸಿರು ಮತ್ತು ಕಿತ್ತಳೆ ವಲಯಗಳಲ್ಲಿ ಎಲ್ಲಾ ಚಟುವಟಿಕೆಗಳನ್ನು ತೆರೆದುಬಿಟ್ಟದೆ. ಈ ಕೊರೋನ ನಮ್ಮನ್ನೆಲ್ಲ ಈ ಹುಲುಮಾನವ ಹಾಳಾಗಿ ಹೋಗಲಿ ಎಂದು ಬಿಟ್ಟುಬಿಡುತ್ತದೊ ಇಲ್ಲ ಮಣ್ಣಿನಲ್ಲಿ ಹಾಕಿ ತುಳಿದುಬಿಡುತ್ತದೊ ನೋಡಬೇಕಿದೆ? 

Writer - ಡಾ.ಎಂ.ವೆಂಕಟಸ್ವಾಮಿ

contributor

Editor - ಡಾ.ಎಂ.ವೆಂಕಟಸ್ವಾಮಿ

contributor

Similar News