ಬೆಂಗಳೂರು: ದರೋಡೆಗೆ ಸಂಚು ಆರೋಪ; ಮೂವರು ರೌಡಿಶೀಟರ್ ಗಳು ಸೇರಿ ಐವರ ಬಂಧನ
ಬೆಂಗಳೂರು, ಮೇ 14: ದರೋಡೆಗೆ ಸಂಚು ರೂಪಿಸುತ್ತಿದ್ದ ಆರೋಪದಡಿ ಮೂವರು ರೌಡಿಶೀಟರ್ ಗಳ ಸಹಿತ ಐದು ಮಂದಿಯನ್ನು ಕೇಂದ್ರ ಅಪರಾಧ ದಳ(ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.
ನಗರದ ಬಾಗಲಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿಶೀಟರ್ ಆರ್.ರಘು(27), ಬಸವೇಶ್ವರ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿಶೀಟರ್ ಎಂ. ಗಣೇಶ್(27), ಪೀಣ್ಯ ಪೊಲೀಸ್ ಠಾಣೆ ರೌಡಿ ಶೀಟರ್ ಎನ್.ರಂಜನ್(29), ಲಗ್ಗೆರೆಯ ಸುನೀಲ್ ಕುಮಾರ್(31) ಮತ್ತು ಜಾಲಹಳ್ಳಿ ಕ್ರಾಸ್ ಬಳಿಯ ವಿವೇಕಾನಂದ ನಗರದ ನಿವಾಸಿ ರಾಜಶೇಖರ್(27) ಬಂಧಿತರು ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಬಂಧಿತರ ಪೈಕಿ ರಘು ವಿರುದ್ಧ ಬಾಗಲಗುಂಟೆ, ಪೀಣ್ಯ ಮತ್ತು ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯಲ್ಲಿ ಎರಡು ಕೊಲೆ, ಎರಡು ಕೊಲೆಯತ್ನ ಸೇರಿ ನಾಲ್ಕು ಪ್ರಕರಣಗಳು ದಾಖಲಾಗಿವೆ. ಗಣೇಶ್ ವಿರುದ್ಧ ಬಸವೇಶ್ವರ ನಗರ, ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಎರಡು ಕೊಲೆ, ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಒಂದು ಕೊಲೆ ಯತ್ನ, ಬಸವೇಶ್ವರ ನಗರ ಠಾಣೆಯಲ್ಲಿ ಒಂದು ದರೋಡೆ ಪ್ರಕರಣ ಸೇರಿ ಒಟ್ಟು ನಾಲ್ಕು ಪ್ರಕರಣಗಳು ದಾಖಲಾಗಿವೆ ಎಂದು ಅವರು ಮಾಹಿತಿ ನೀಡಿದರು.
ರಂಜನ್ ವಿರುದ್ಧ ಪೀಣ್ಯ ಮತ್ತು ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯಲ್ಲಿ ತಲಾ ಒದೊಂದು ಕೊಲೆ ಯತ್ನ ಪ್ರಕರಣ ದಾಖಲಾಗಿದೆ. ಸುನೀಲ್ ವಿರುದ್ಧ ಮೂರು ವರ್ಷಗಳ ಹಿಂದೆ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದ್ದು, ಬಂಧಿತರಿಂದ ಮಾರಕಾಸ್ತ್ರಗಳನ್ನು ಜಪ್ತಿ ಮಾಡಲಾಗಿದ್ದು, ಇಲ್ಲಿನ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಸಿಸಿಬಿ ತಿಳಿಸಿದೆ.