ಹೆಚ್ಚಿಸಿರುವ ವಿದ್ಯುತ್ ಶುಲ್ಕವನ್ನು ಯಥಾಸ್ಥಿತಿಗೆ ತರದಿದ್ದರೆ ಬೀದಿಗಿಳಿದು ಹೋರಾಟ: ಸಿದ್ದರಾಮಯ್ಯ ಎಚ್ಚರಿಕೆ

Update: 2020-05-14 11:29 GMT

ಬೆಂಗಳೂರು, ಮೇ 14: ಹೆಚ್ಚಳ ಮಾಡಿರುವ ವಿದ್ಯುತ್ ಶುಲ್ಕವನ್ನು ಯಥಾಸ್ಥಿತಿಗೆ ತರದಿದ್ದರೆ ರಾಜ್ಯ ಸರಕಾರದ ವಿರುದ್ಧ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

ಗುರುವಾರ ಜಯನಗರ ವಿಧಾನಸಭೆ ಕ್ಷೇತ್ರದಲ್ಲಿ ಬಡವರಿಗೆ ದಿನಸಿ ಹಾಗೂ ತರಕಾರಿ ಕಿಟ್‍ಗಳನ್ನು ವಿತರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್-19 ನಿಯಂತ್ರಣದಲ್ಲಿ ಸರಕಾರಕ್ಕೆ ಬೆಂಬಲ ಕೊಡುತ್ತೇವೆಂದು ತಿಳಿಸಿದ್ದೆವು. ಆದರೆ, ರಾಜ್ಯ ಸರಕಾರ ಕೊರೋನ ಸೋಂಕಿನ ಸಂದರ್ಭದಲ್ಲೂ ಜನವಿರೋಧಿ ನೀತಿ ಅನುಸರಿಸುತ್ತಿದೆ. ಇದರ ವಿರುದ್ಧ ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದು ಹೇಳಿದರು.

ರಾಜ್ಯದ ಜನತೆ ಕೊರೋನ ಸೋಂಕಿನ ಪರಿಣಾಮವಾಗಿ ಅಗತ್ಯ ವಸ್ತುಗಳಿಗಾಗಿ ಪರದಾಡುತ್ತಿದ್ದಾರೆ. ಇಂತಹ ಹೊತ್ತಿನಲ್ಲಿ ರಾಜ್ಯ ಸರಕಾರ ವಿದ್ಯುತ್ ಬಿಲ್ ದರವನ್ನು ಮೂರರಿಂದ ನಾಲ್ಕು ಪಟ್ಟು ಹೆಚ್ಚಳ ಮಾಡಿರುವುದು ಜನತೆಗೆ ಗಾಯದ ಮೇಲೆ ಬರೆ ಎಳೆದಂತೆ. ಕೂಡಲೇ ವಿದ್ಯುತ್ ದರದಲ್ಲಿ ಒಂದು ಪೈಸೆಯೂ ಹೆಚ್ಚಳವಾಗದಂತೆ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಸಿರು ಶಾಲು ಹಾಕಿಕೊಂಡು ನಾನು ರೈತ ಪರವೆಂದು ಬಾಯಿ ಮಾತಲ್ಲಿ ಹೇಳಿದರೆ ಸಾಲದು, ಅದನ್ನು ಕಾರ್ಯರೂಪಕ್ಕೆ ತರಬೇಕು. ಹೇಳುವುದೊಂದು ಮಾಡುವುದೊಂದು ಆಗಬಾರದೆಂದು ಅವರು ಟೀಕಿಸಿದರು.

ಈ ಸಂದರ್ಭದಲ್ಲಿ ಶಾಸಕ ರಾಮಲಿಂಗಾರೆಡ್ಡಿ, ಸೌಮ್ಯಾರೆಡ್ಡಿ, ಪರಿಷತ್ ಸದಸ್ಯರಾದ ಯು.ಬಿ.ವೆಂಕಟೇಶ್, ಎಂ.ಸಿ.ವೇಣುಗೋಪಾಲ್ ಮತ್ತಿತರರಿದ್ದರು.

ಕೇಂದ್ರ ಸರಕಾರ ಸಣ್ಣ ಕೈಗಾರಿಕೆಗಳಿಗೆ(ಎಂಎಸ್‍ಎಂಇ) ವಿಶೇಷ ಪ್ಯಾಕೇಜ್ ಘೋಷಿಸಿದೆ. ಅದನ್ನು ನಾನು ಸ್ವಾಗತಿಸುತ್ತೇನೆ. ಆದರೆ, ಅದು ಹೇಗೆ ಕಾರ್ಯರೂಪಕ್ಕೆ ಬರುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಕೊರೋನ ಲಾಕ್‍ಡೌನ್‍ನಿಂದಾಗಿ ಕಂಗೆಟ್ಟಿರುವ ಬೀದಿ ವ್ಯಾಪಾರಿಗಳು, ವಲಸೆ ಕಾರ್ಮಿಕರು, ಬಡವರಿಗೆ ಏನು ಕೊಟ್ಟಿಲ್ಲ. ಅವರಿಗೂ ವಿಶೇಷ ಪ್ಯಾಕೇಜ್ ಘೋಷಿಸಬೇಕೆಂದು ಒತ್ತಾಯಿಸುತ್ತೇನೆ.

-ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News