ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಕೇಂದ್ರ ಸರಕಾರ ನೆರವು ಘೋಷಿಸಿಲ್ಲ: ಈಶ್ವರ್ ಖಂಡ್ರೆ
ಬೆಂಗಳೂರು, ಮೇ 14: ಕೊರೋನ ಲಾಕ್‍ಡೌನ್ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ರೈತರು, ಕೂಲಿ ಕಾರ್ಮಿಕರಿಗೆ ಯಾವುದೇ ಆರ್ಥಿಕ ನೆರವು ಘೋಷಿಸಿಲ್ಲ. ಬದಲಿಗೆ ಉದ್ಯಮಿಗಳಿಗೆ ಆರ್ಥಿಕ ನೆರವು ಪ್ರಕಟಿಸಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಟೀಕಿಸಿದ್ದಾರೆ.
ಗುರುವಾರ ನಗರದಲ್ಲಿ ಮಾಧ್ಯಮ ಗೋಷ್ಟಿಯಲ್ಲಿ ಮಾತನಾಡಿದ ಅವರು, ಸಂಕಷ್ಟದ ಪರಿಸ್ಥಿತಿಯಲ್ಲಿ ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕಿತ್ತು. ವಲಸೆ ಕಾರ್ಮಿಕರೂ ಇನ್ನೂ ತಮ್ಮ ಊರುಗಳಿಗೆ ತಲುಪಲು ಕಾಲ್ನಡಿಗೆಯಲ್ಲಿದ್ದಾರೆ. ಗರ್ಭಿಣಿ ಮಹಿಳೆಯರು ರಸ್ತೆಯಲ್ಲಿ ನರಳುತ್ತಿದ್ದಾರೆ. ಬಡವರಿಗೆ ಪ್ರಧಾನಿ ಮೋದಿ ಯಾವುದೇ ರೀತಿಯ ಸಹಾಯ ಹಸ್ತ ಚಾಚಿಲ್ಲ ಎಂದು ದೂರಿದರು.
ಲಾಕ್‍ಡೌನ್ ಘೋಷಿಸಿದ 52 ದಿನಗಳು ಕಳೆದಿವೆ. ಕೋಟ್ಯಂತರ ಜನರು ತಮ್ಮ ದುಡಿಮೆ ಕಳೆದುಕೊಂಡಿದ್ದಾರೆ. ಪರಿಹಾರದ ನಿರೀಕ್ಷೆಯಲ್ಲಿ ಕೇಂದ್ರದತ್ತ ದೃಷ್ಟಿ ನೆಟ್ಟಿದ್ದರು. ಪ್ರಧಾನಿ 20 ಲಕ್ಷ ಕೋಟಿ ರೂ. ನೆರವು ಪ್ರಕಟಿಸಿದ್ದು, ಅದಕ್ಕೆ ಎಷ್ಟು ಸೊನ್ನೆ ಎಂಬುದೇ ಗೊತ್ತಾಗುತ್ತಿಲ್ಲ. ಮೂರು ಲಕ್ಷ ಕೋಟಿ ರೂ. ಎಂಎಸ್‍ಎಂಇ ನೆರವು ಎಂದು ಹೇಳುತ್ತಿದ್ದರೂ, ಇದರಿಂದ ಯಾವುದೇ ಅನುಕೂಲ ಆಗದು ಎಂದು ವಾಗ್ದಾಳಿ ನಡೆಸಿದರು.
ರಾಜ್ಯ ಸರಕಾರ ತರಾತುರಿಯಲ್ಲಿ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡಿ ಸುಗ್ರೀವಾಜ್ಞೆ ಜಾರಿಗೆ ಮುಂದಾಗಿದ್ದು, ಬಹುರಾಷ್ಟ್ರೀಯ ಕಂಪೆನಿಗಳ ಹಿತಕ್ಕೆ ಕಾಯ್ದೆ ತರುವ ಮೂಲಕ ರೈತರನ್ನು ಮತ್ತಷ್ಟು ಬಿಕರಿ ಮಾಡಲು ಹೊರಟಿದೆ. ಸಂಕಷ್ಟದ ಸಂದರ್ಭದಲ್ಲಿ ಅಧಿವೇಶನದಲ್ಲಿ ಚರ್ಚೆ ಇಲ್ಲದೆ ಸುಗ್ರೀವಾಜ್ಞೆ ಜಾರಿ ಸರಿಯಲ್ಲ ಎಂದು ಅವರು ಆಕ್ಷೇಪಿಸಿದರು.
ಉತ್ತರ ಕರ್ನಾಟಕದಲ್ಲಿ ಕಾರ್ಮಿಕರಿಗೆ ಸಂಕಷ್ಟ ಎದುರಾಗಿದೆ. ಹೊರ ರಾಜ್ಯಗಳಿಂದ ಆಗಮಿಸಿದವರಿಗೆ ಶಾಲೆಗಳಲ್ಲಿ ಕ್ವಾರಂಟೈನ್ ವ್ಯವಸ್ಥೆ ಮಾಡಿದ್ದು, ಅಲ್ಲಿ ಸರಿಯಾಗಿ ಮೂಲಭೂತ ಸೌಲಭ್ಯಗಳಿಲ್ಲ. ಶೌಚಾಲಯ, ಉಪಹಾರವಿಲ್ಲದೆ ಕೂಲಿ ಕಾರ್ಮಿಕರು ಕ್ವಾರಂಟೈನ್ ಮಾಡಿದರೆ ಹೇಗೆ ಎಂದು ಈಶ್ವರ್ ಖಂಡ್ರೆ ಪ್ರಶ್ನಿಸಿದರು.
ಪ್ರಯೋಗಾಲಯ ಆರಂಭಿಸಿ: ಬೀದರ್ ಜಿಲ್ಲೆಯಲ್ಲಿ ಕೂಡಲೇ ಕೊರೋನ ಸೋಂಕು ಪರೀಕ್ಷೆಗೆ ಪ್ರಯೋಗಾಲಯ ಆರಂಭಿಸಬೇಕು. ಜಿಲ್ಲೆಯಲ್ಲಿ 2 ಸಾವಿರಕ್ಕೂ ಸ್ವ್ಯಾಬ್ ಫಲಿತಾಂಶ ಬರಬೇಕಿದೆ. ಪರೀಕ್ಷೆ ವಿಳಂಬದ ಕಾರಣಕ್ಕೆ ಜಿಲ್ಲೆಯಲ್ಲಿ ಸೋಂಕಿನ ಪ್ರಕರಣಗಳು ಹೆಚ್ಚುತ್ತಿವೆ. ಹೀಗಾಗಿ ಸಿಎಂ, ಆರೋಗ್ಯ ಸಚಿವರು ಇತ್ತ ಗಮನಹರಿಸಬೇಕು ಎಂದು ಖಂಡ್ರೆ ಇದೇ ವೇಳೆ ಆಗ್ರಹಿಸಿದರು.