ಇಸ್ಕಾನ್ ಬಳಿಯ ಪಾದಚಾರಿ ಮೇಲ್ಸೇತುವೆ ಲೋಕಾರ್ಪಣೆ
ಬೆಂಗಳೂರು, ಮೇ 14: ನಗರದ ನಾಗರಪುರ ವಾರ್ಡ್ ವ್ಯಾಪ್ತಿಯ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ರಸ್ತೆ ಇಸ್ಕಾನ್ ದೇವಸ್ಥಾನ ಬಳಿ ಖಾಸಗಿ ಸಾರ್ವಜನಿಕ ಖಾಸಗಿ(ಪಿಪಿಪಿ) ಮಾದರಿಯಲ್ಲಿ ನಿರ್ಮಿಸಿರುವ ಪಾದಚಾರಿ ಮೇಲ್ಸೇತುವೆಯನ್ನು ಆಹಾರ ಸಚಿವ ಗೋಪಾಲಯ್ಯ, ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮೇಯರ್ ಗೌತಮ್ ಕುಮಾರ್, ಬಿಬಿಎಂಪಿ ವ್ಯಾಪ್ತಿಯಲ್ಲಿ ಸಾರ್ವಜನಿಕ ಓಡಾಟಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಅವಶ್ಯಕ ಸ್ಥಳಗಳಲ್ಲಿ ಪಾದಚಾರಿ ಮೇಲ್ಸೇತುವೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿಸಿದರು.
ನಾಗಪುರ ವಾರ್ಡ್ ವ್ಯಾಪ್ತಿಯಲ್ಲಿ ಇಸ್ಕಾನ್ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸುಸಜ್ಜಿತ ಸ್ಕೈವಾಕ್ ನಿರ್ಮಿಸಿದ್ದು, 16 ಮಂದಿಯನ್ನು ಒಯ್ಯಬಲ್ಲ 2 ಲಿಫ್ಟ್ ಗಳನ್ನು ಅಳವಡಿಸಲಾಗಿದೆ. ವಿದ್ಯುತ್ ಇಲ್ಲದಾಗ ಲಿಫ್ಟ್ ಕಾರ್ಯನಿರ್ವಹಿಸಲು ಜನರೇಟರ್ ವ್ಯವಸ್ಥೆಯನ್ನು ಕೂಡ ಕಲ್ಪಿಸಲಾಗಿದೆ ಎಂದರು.
ಈ ವೇಳೆ ಉಪಮೇಯರ್ ರಾಮಮೋಹನರಾಜು, ಅಭಿಯಂತರರಾದ ಸೋಮಶೇಖರ್, ಬಸವರಾಜ್ ಕಬಾಡೆ ಉಪಸ್ಥಿತರಿದ್ದರು.