70 ದಿನಗಳಿಂದ ಬಂಧನದಲ್ಲಿರುವ ರೊನಾಲ್ಡಿ ನೊಗೆ ಬಿಡುಗಡೆ ವಿಶ್ವಾಸ

Update: 2020-05-15 06:11 GMT

ಅಸುನ್‌ಸಿಯೊನ್, ಮೇ 14: ನಕಲಿ ಪಾರ್ಸ್ ಪೋರ್ಟ್ ಹೊಂದಿದ್ದ ಆರೋಪದಲ್ಲಿ ಕಳೆದ ಎರಡು ತಿಂಗಳಿಗೂ ಅಧಿಕ ಸಮಯದಿಂದ ಪರಾಗ್ವೆಯಲ್ಲಿ ಬಂಧನದಲ್ಲಿರುವ ಬ್ರೆಝಿಲ್ ದಿಗ್ಗಜ ರೊನಾಲ್ಡಿನೊಗೆ ಮನೆಗೆ ವಾಪಸಾಗಲು ಅವಕಾಶ ಸಿಗಲಿದೆ ಎಂದು ರೊನಾಲ್ಡಿನೊ ವಕೀಲರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘‘ರೊನಾಲ್ಡಿನೊ ಹಾಗೂ ಅವರ ಸಹೋದರನಿಗೆ ಸ್ವದೇಶಕ್ಕೆ ವಾಪಸಾಗಲು ಪ್ರಾಸಿಕ್ಯೂಶನ್‌ಗೆ ಮನವರಿಕೆ ಮಾಡಿಕೊಡುವ ವಿಶ್ವಾಸದಲ್ಲಿದ್ದೇವೆ. ನಾವು ಏನನ್ನೂ ಮಾಡಲು ಸಾಧ್ಯವಿಲ್ಲ. ಆದರೆ, ತನಿಖೆ ಮುಗಿಯುವುದನ್ನು ಕಾಯುತ್ತಿದ್ದೇವೆ’’ಎಂದು ರಕ್ಷಣಾ ಮೂಲಗಳು ಎಎಫ್‌ಪಿಗೆ ತಿಳಿಸಿವೆ.

ಬಾರ್ಸಿಲೋನ, ಎಸಿ ಮಿಲನ್ ಹಾಗೂ ಪ್ಯಾರಿಸ್ ಸೈಂಟ್-ಜರ್ಮೈನ್ ಮಾಜಿ ಸ್ಟಾರ್ ಆಟಗಾರ ರೊನಾಲ್ಡಿನೊ ಹಾಗೂ ಅವರ ಸಹೋದರ ರಾಬರ್ಟ್ ಅಸ್ಸಿಸ್ ಮೊರೇರ ತಪ್ಪಿತಸ್ಥರೆಂದು ಸಾಬೀತಾದರೆ ಐದು ವರ್ಷಗಳ ಕಾಲ ಜೈಲು ಸಜೆ ಅನುಭವಿಸಬೇಕಾಗುತ್ತದೆ.

 ನಕಲಿ ಪಾಸ್‌ಪೋರ್ಟ್‌ನೊಂದಿಗೆ ಪರಾಗ್ವೆ ಪ್ರವೇಶಿಸಿದ್ದ ಆರೋಪದಲ್ಲಿ ರೊನಾಲ್ಡಿನೊ ಹಾಗೂ ಅವರ ಸಹೋದರ ಕಳೆದ ಎರಡು ತಿಂಗಳುಗಳಿಂದ ಬಂಧನದಲ್ಲಿದ್ದಾರೆ.

2005ರ ಪ್ರತಿಷ್ಠಿತ ‘ಬ್ಯಾಲನ್ ಡಿ’ಓರ್’ ಪ್ರಶಸ್ತಿ ವಿಜೇತ ರೊನಾಲ್ಡಿನೊ ಹಾಗೂ ಅವರ ಸಹೋದರ 1.6 ಮಿಲಿಯನ್ ಡಾಲರ್ ಜಾಮೀನು ನೀಡಿದ್ದು, ಎಪ್ರಿಲ್ 7ರಿಂದ ಪರಾಗ್ವೆ ರಾಜಧಾನಿ ಅಸುನ್ಸಿಯನ್‌ನ ಐತಿಹಾಸಿಕ ಕೇಂದ್ರದಲ್ಲಿರುವ ಹೋಟೆಲ್‌ನಲ್ಲಿ ಬಂಧನದಲ್ಲಿದ್ದಾರೆ.

ಈ ಪ್ರಕರಣದ ತನಿಖೆ ನಡೆಸಲು ಸಾರ್ವಜನಿಕ ಅಭಿಯೋಜಕರಿಗೆ ಆರು ತಿಂಗಳು ಕಾಲಾವಕಾಶವಿದೆ. ಇದಕ್ಕೆ ಸಂಬಂಧಿಸಿದಂತೆ 18 ಮಂದಿಯನ್ನು ಬಂಧಿಸುವಂತೆ ಆದೇಶಿಸಿದೆ.

 ‘‘ಆತನನ್ನು ದೋಷಾರೋಪಣೆ ಮಾಡುವ ಒಂದೇ ಒಂದು ಗಂಭೀರ ಪುರಾವೆ ಕೂಡ ಇಲ್ಲ. ರೊನಾಲ್ಡಿನೊ ಐಷಾರಾಮಿ ಜೈಲಿನಲ್ಲಿದ್ದರೂ ಅವರನ್ನು ಈಗಲೂ ಬಂಧನದಲ್ಲಿಡಲಾಗಿದೆ ಎನ್ನುವುದು ಅನ್ಯಾಯ’’ ಎಂದು ಪರಾಗ್ವೆ ಫುಟ್ಬಾಲ್ ಒಕ್ಕೂಟದ ಅಧ್ಯಕ್ಷ ಹಾಗೂ ಪರಾಗ್ವೆ ಮಾಜಿ ಅಂತರ್‌ರಾಷ್ಟ್ರೀಯ ಆಟಗಾರ ರೊಗೆಲಿಯೊ ಡೆಲ್ಗಾಡೊ ಎಎಫ್‌ಪಿಗೆ ತಿಳಿಸಿದ್ದಾರೆ.

‘‘ಈ ಪಾಸ್‌ಪೋರ್ಟ್‌ಗಳು ಮಾನ್ಯವಾಗಿಲ್ಲ ಎಂದು ನನಗೆ ತಿಳಿದಾಗ ಸಂಪೂರ್ಣವಾಗಿ ಬಂಧಿಯಾಗಿದ್ದೆ’’ಎಂದು ಕಳೆದ ವಾರ ಪರಾಗ್ವೆ ದಿನಪತ್ರಿಕೆ ಎಬಿಸಿಗೆ ರೊನಾಲ್ಡಿನೊ ತಿಳಿಸಿದ್ದರು. ಸಾರ್ವಕಾಲಿಕ ಶ್ರೇಷ್ಠ ಫುಟ್ಬಾಲ್ ಆಟ ಗಾರರ ಪೈಕಿ ಒಬ್ಬರಾಗಿರುವ ರೊನಾಲ್ಡಿನೊ 2002ರಲ್ಲಿ ಬ್ರೆಝಿಲ್ ತಂಡ ವಿಶ್ವಕಪ್ ಜಯಿ ಸಲು ನಿರ್ಣಾಯಕ ಪಾತ್ರವಹಿಸಿದ್ದರು. ರೊನಾಲ್ಡಿನೊ ಹಾಗೂ ಅವರ ಸಹೋದರ, ಬ್ಯುಸಿನೆಸ್ ಮ್ಯಾನೇಜರ್ ಕೂಡ ಆಗಿರುವ ರಾಬರ್ಟ್ ಮಾರ್ಚ್ 4ರಂದು ನೆರೆಯ ಬ್ರೆಝಿಲ್‌ನಿಂದ ಪರಾಗ್ವೆಗೆ ಬಂದಿಳಿದಾಗ ಆರಂಭದಲ್ಲಿ ಯಾವುದೇ ಸಮಸ್ಯೆ ಎದುರಾಗಿರಲಿಲ್ಲ. ಸಹೋದರರು ಆಗಮಿಸಿದ ಕೆಲವೇ ಸಮಯದ ಬಳಿಕ ಪಾಸ್‌ಪೋರ್ಟ್ ನಕಲಿ ಎಂಬ ವಿಚಾರ ಗೊತ್ತಾದ ತಕ್ಷಣವೇ ಇಬ್ಬರನ್ನೂ ಪೊಲೀಸ್ ಕಸ್ಟಡಿಗೆ ಪಡೆಯಲಾಗಿತ್ತು. ತನಿಖಾಧಿಕಾರಿಗಳು ಇಬ್ಬರು ತಂಗಿದ್ದ ಹೋಟೆಲ್ ಮೇಲೆ ದಾಳಿ ನಡೆಸಿದ್ದರು.

ರೊನಾಲ್ಡಿನೊ ಪರಾಗ್ವೆ ರಾಜಧಾನಿಗೆ ಬಂದ ತಕ್ಷಣ ಸುಮಾರು 2,000 ಮಕ್ಕಳು ಹಾಗೂ ಯುವಕರು ರಾಕ್‌ಸ್ಟಾರ್‌ಗೆ ಸ್ವಾಗತಿಸಿದ್ದರು. ಬಡ ಮಕ್ಕಳಿಗಾಗಿ ಕೆಲಸ ಮಾಡುತ್ತಿರುವ ದತ್ತಿಸಂಸ್ಥೆ ನನಗೆ ಈ ದಾಖಲೆ ನೀಡಿದೆ ಎಂದು ರೊನಾಲ್ಡಿನೊ ಹೇಳಿದ್ದರು. ಆ ನಂತರ ತನಿಖೆಯು ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಕ ವಿಸ್ತರಣೆಯಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News