ಕೃಷಿ ಮೂಲ ಸೌಕರ್ಯ ಅಭಿವೃದ್ಧಿಗೆ 1 ಲಕ್ಷ ಕೋಟಿ ರೂ.: ನಿರ್ಮಲಾ ಸೀತಾರಾಮನ್

Update: 2020-05-15 18:29 GMT

ಹೊಸದಿಲ್ಲಿ, ಮೇ 15: ಕೃಷಿಗೆ ಸಂಬಂಧಿಸಿದ 11 ಘೋಷಣೆ, ಕೃಷಿಯಲ್ಲಿ ಆಡಳಿತಾತ್ಮಕ ಸುಧಾರಣೆ ಬಗ್ಗೆ ಪ್ರಸ್ತಾವ, ನೀರಾವರಿಗೆ ಹೆಚ್ಚಿನ ಆದ್ಯತೆ, ಕೃಷಿ ಸೌಕರ್ಯ, ಕೃಷಿ ಉತ್ಪನ್ನಗಳಿಗೆ ಹೆಚ್ಚಿನ ಆದ್ಯತೆ ನೀಡುವ ಬಗ್ಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಹೇಳಿದ್ದಾರೆ.

ಕೃಷಿ ಮೂಲ ಸೌಕರ್ಯ ಅಭಿವೃದ್ಧಿಗೆ 1 ಲಕ್ಷ ಕೋಟಿ ರೂ. ಘೋಷಿಸಿದರು. ಕೃಷಿ ಉತ್ಪನ್ನಗಳ ಸಾಗಾಟಕ್ಕೆ 10 ಸಾವಿರ ಕೋಟಿ ಮೀಸಲು, ಆಯುರ್ವೇದ ಉತ್ಪನ್ನಗಳ ಸಾಗಾಟಕ್ಕೆ ಹಣ ಮೀಸಲು , ಕ್ಲಸ್ಟರ್ ಆಧರಿತ ಕೃಷಿಗೆ 10 ಸಾವಿರ ಕೋಟಿ ರೂ. ಕರ್ನಾಟಕದ ರಾಗಿ, ತಮಿಳುನಾಡಿನ ಅರಿಸಿನ ಹಾಗೂ ಕಾಶ್ಮೀರದ ಕೇಸರಿ ಎಲ್ಲ ದೇಶಿಯ ಆಹಾರ ಉತ್ಪನ್ನಗಳ ಮಾರುಕಟ್ಟೆ ವಿಸ್ತರಣೆಗೆ ಒತ್ತು, ಸಾವಯವ ಪದ್ಧತಿಯಲ್ಲಿ ರಾಗಿ ಬೆಳೆಯಲು ಪ್ರೋತ್ಸಾಹ,ಬ್ರಾಂಡಿಂಗ್ ಮೂಲಕ ಆಹಾರ ಉತ್ಪನ್ನಗಳ ಮಾರಾಟಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು. ಮತ್ಸ್ಯ ಸಂಪದ ಯೋಜನೆಗೆ 20 ಸಾವಿರ ಕೋ.ರೂ. ನೆರವು, ಸಣ್ಣ ಆಹಾರ ಉತ್ಪನ್ನಗಳ ತಯಾರಿಕೆಗೆ 10 ಸಾವಿರ ಕೋಟಿ ರೂ. ಹೊಸ ಬೋಟ್ ಉಪಕರಣಗಳ ಖರೀದಿಗೆ ಮೀನುಗಾರರಿಗೆ ಸಹಾಯ ನೀಡುತ್ತವೆ ಎಂದು ಸಚಿವೆ ಹೇಳಿದರು.

ಕಿಸಾನ್ ಸಮ್ಮಾನ್ ಯೋಜನೆಯಲ್ಲಿ 18,700 ಕೋ.ರೂ. ಹಣ ವರ್ಗಾವಣೆ ಮಾಡಲಾಗಿದೆ. ಫಸಲ್ ಭಿಮಾ ಯೋಜನೆಯಡಿ 6,400 ಕೋ.ರೂ. ನೀಡಿದ್ದೇವೆ. ಬೆಂಬಲ ಬೆಲೆಯಲ್ಲಿ 74,300 ಕೋ.ರೂ. ಉತ್ಪನ್ನ ಖರೀದಿಸಿದ್ದೇವೆ ಎಂದು ಸಚಿವೆ ಹೇಳಿದರು.

ಜೇನು ಕೃಷಿಗೆ 500 ಕೋ.ರೂ.

ಡೇರಿ ಉತ್ಪನ್ನಗಳ ಪ್ರೋತ್ಸಾಹಕ್ಕೆ 15 ಸಾವಿರ ಕೋ.ರೂ. ನೆರವು, ಔಷದೀಯ ಸಸ್ಯಗಳ ಕೃಷಿ ಉತ್ಪನ್ನಗಳಿಗೆ 4 ಸಾವಿರ ಕೋ.ರೂ., ಗಿಡಮೂಲಿಕೆ ಉಳುಮೆ ಮಾಡಲು ನೆರವು, 53 ಕೋಟಿ ಪಶುಗಳಿಗೆ ಲಸಿಕೆ, ಜೇನು ಸಾಕಣೆಗಾಗಿ 500 ಕೋ.ರೂ. ಮೀಸಲು, 2 ಲಕ್ಷ ಜೇನು ಕೃಷಿಕರಿಗೆ ಅನುಕೂಲ ನಿರೀಕ್ಷೆ. ಗ್ರಾಮೀಣ ಮಹಿಳೆಯರಿಗೆ ಉದ್ಯೋಗ ಸೃಷ್ಟಿ, ಜೇನಿನಿಂದ ಉತ್ಪಾದನೆಯಾಗುವ ಮೇಣ ರಫ್ತಿಗೆ ಕಡಿತ, ಟೊಮ್ಯಾಟೊ, ಈರುಳ್ಳಿ, ಆಲೂಗಡ್ಡೆ ಬೆಳೆ ಸಾಗಣೆ, ಸಂಸ್ಕರಣೆಗೆ 500 ಕೋ.ರೂ., ಇದೇ ಉತ್ಪನ್ನಗಳ ಸಾಗಾಟಕ್ಕೆ ಶೇ.50ರಷ್ಟು ಸಬ್ಸಿಡಿ ನೀಡಲಾಗುವುದು ಎಂದು ನಿರ್ಮಲಾ ಹೇಳಿದ್ದಾರೆ.

ಅಗತ್ಯವಸ್ತುಗಳ ಕಾಯ್ದೆಗೆ ತಿದ್ದುಪಡಿ ತರಲು ನಿರ್ಧಾರ: ಈ ತಿದ್ದುಪಡಿಯ ಮೂಲಕ ರೈತರಿಗೆ ಉತ್ತಮ ಬೆಂಬಲ ಬೆಲೆ ನೀಡಲು ಪ್ರಯತ್ನ, ಎಣ್ಣೆಕಾಳುಗಳು, ಬೇಳೆ ಕಾಳುಗಳು, ಆಲೂಗಡ್ಡೆ,ಈರುಳ್ಳಿ ಸಂಗ್ರಹಕ್ಕೆ ನಿರ್ಬಂಧ ರದ್ದು, ಅಗತ್ಯವಸ್ತುಗಳ ಸಂಗ್ರಹಕ್ಕೆ ಸದ್ಯಕ್ಕೆ ಯಾವುದೇ ಮಿತಿ ಇಲ್ಲ. ರಾಷ್ಟ್ರೀಯ ವಿಪತ್ತು,ದರ ಕುಸಿತ ವೇಳೆ ಮಾತ್ರ ರದ್ದು. ಉಳಿದ ದಿನಗಳಲ್ಲಿ ಅಗತ್ಯ ವಸ್ತುಗಳು ಸಂಗ್ರಹಿಸಲು ಮಿತಿ ಇಲ್ಲ.

ಕೃಷಿ ಮಾರುಕಟ್ಟೆಗಳಲ್ಲಿ ಸುಧಾರಣೆ ತರಲು ಕೇಂದ್ರ ನಿರ್ಧಾರ

ಎಪಿಎಂಸಿಯಲ್ಲೆ ಮಾರಾಟ ಮಾಡಬೇಕೆಂಬ ನಿಯಮವಿಲ್ಲ, ರೈತರಿಗೆ ತಮಗಿಷ್ಟವಾದ ಮಾರುಕಟ್ಟೆಯಲ್ಲಿ ಮಾರಲು ಅವಕಾಶ, ಇದರಿಂದ ಬೇಕಾಬಿಟ್ಟಿ ಖರೀದಿಗಾರರಿಗೆ ಕಡಿವಾಣ. ಎಪಿಎಂಸಿಯಲ್ಲಿ ಪರವಾನಗಿ ಹೊಂದಿರುವ ರೈತರಿಗೆ ಅವಕಾಶ. ಕೃಷಿ ಉತ್ಪನ್ನಗಳ ಅಂತರಾಜ್ಯ ಮುಕ್ತ ಮಾರಾಟಕ್ಕೆ ಕೇಂದ್ರದಿಂದ ಅವಕಾಶ, ಯಾವುದೆ ಸುಂಕವಿಲ್ಲದೆ ಮಾರಾಟಕ್ಕೆ ಅವಕಾಶ, ಇ-ಟ್ರೇಡಿಂಗ್ ಮೂಲಕ ಕೃಷಿ ಉತ್ಪನ್ನಗಳ ಮಾರಾಟ ಮಾಡಬಹುದು ಎಂದು ಸಚಿವೆ ನಿರ್ಮಲಾ ಹೇಳಿದ್ದಾರೆ.

ರಾಗಿಗೆ ಜಾಗತಿಕ ಮನ್ನಣೆ

2 ಲಕ್ಷಕ್ಕೂ ಅಧಿಕ ಸಣ್ಣ ಆಹಾರ ಉದ್ಯಮ (ಎಂಎಫ್‌ಇ)ಗಳ ಬೆಳವಣಿಗೆಗೆಗೆ ನಿರ್ಮಲಾ ಸೀತಾರಾಮನ್ ಅವರು 10 ಸಾವಿರ ಕೋಟಿ ರೂ.ಗಳ ಬೃಹತ್ ಯೋಜನೆಯನ್ನು ಪ್ರಕಟಿಸಿದ್ದಾರೆ. ಈ ಯೋಜನೆಯಡಿ ಸ್ಥಳೀಯವಾಗಿ ಉತ್ಪಾದನೆಯಾದ ಕೃಷಿ ವಸ್ತುಗಳನ್ನು ಜಾಗತಿಕ ಮಟ್ಟದಲ್ಲಿ ಪ್ರಚುರಪಡಿಸಲಾಗುತ್ತದೆ. ಉತ್ತರಪ್ರದೇಶದ ಮಾವು, ಕರ್ನಾಟಕದ ರಾಗಿ, ಜಮ್ಮುಕಾಶ್ಮೀರದ ಕೇಸರಿ, ಈಶಾನ್ಯಭಾರತದ ಬಿದಿರಿನ ಕಣಿಲೆ, ಆಂಧ್ರಪ್ರದೇಶದ ಮೆಣಸು, ತಮಿಳುನಾಡಿನ ಮರಗೆಣಸಿಗೆ ಮಾರುಕಟ್ಟೆಯನ್ನು ಜಾಗತಿಕವಾಗಿ ವಿಸ್ತರಿಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.ಇದರಿಂದಾಗಿ 2 ಲಕ್ಷಕ್ಕೂ ಅಧಿಕ ಸಣ್ಣ ಆಹಾರ ಕೈಗಾರಿಕೆಗಳಿಗೆ ಪ್ರಯೋಜನವಾಗಲಿದೆ.

ಮೀನುಗಾರಿಕೆಯಲ್ಲಿ 50 ಲಕ್ಷ ಉದ್ಯೋಗ ಸೃಷ್ಟಿ

ಮೀನುಗಾರರ ನೆರವಿಗೂ ಧಾವಿಸಿರುವ ನಿರ್ಮಲಾ ಅವರು, ಮೀನುಗಾರಿಕೆ ಮೂಲ ಸೌಕರ್ಯಗಳ ಅಭಿವೃದ್ಧಿಗೆ 20 ಸಾವಿರ ಕೋಟಿ ರೂ. ನೆರವು ಘೋಷಿಸಿದ್ದಾರೆ. ಮೀನುಗಾರರಿಗೆ ದೋಣಿ ಮತ್ತಿತರ ಮೀನುಗಾರಿಕಾ ಸಲಕರಣೆಗಳಿಗೆ ಆರ್ಥಿಕ ನೆರವನ್ನು ಅವರು ಪ್ರಕಟಿಸಿದ್ದಾರೆ.ಮೀನುಗಾರಿಕೆ ಉದ್ಯಮದಲ್ಲಿ 55 ಲಕ್ಷ ಉದ್ಯೋಗ ಸೃಷ್ಟಿಸಲಾಗುವುದೆಂದು ಹೇಳಿದ್ದಾರೆ.

ಔಷಧಿಯ ಕೃಷಿ 2 ಲಕ್ಷ ಹೆಕ್ಟೇರ್‌ಗೆ ವಿಸ್ತರಣೆ

ನಿರ್ಮಲಾ ಅವರು ತನ್ನ ಬಹುನಿರೀಕ್ಷಿತ ಕೃಷಿ ಪ್ಯಾಕೇಜ್‌ನಲ್ಲಿ ಔಷಧೀಯ ಸಸ್ಯಗಳ ಕೃಷಿಗೂ ಉತ್ತೇಜನ ನೀಡಿದ್ದಾರೆ. ಇದಕ್ಕಾಗಿ 4 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ. ಮುಂದಿನ ಎರಡು ವರ್ಷಗಳಲ್ಲಿ ಔಷಧೀಯ ಸಸ್ಯಗಳ ಕೃಷಿಯನ್ನು 2 ಲಕ್ಷ ಹೆಕ್ಟೇರ್‌ಗಳಿಗೆ ವಿಸ್ತರಿಸುವ ಗುರಿಯನ್ನು ಸರಕಾರ ಹೊಂದಿದೆ. ಗಂಗಾನದಿಯ ದಡೆಗಳಲ್ಲಿ ಔಷಧೀಯ ಸಸಿಗಳ ಕಾರಿಡಾರ್ ನಿರ್ಮಾಣಗೊಳ್ಳಲಿದೆ.

ಕೃಷಿ ಖುಷಿ...

► ಕೃಷಿ ಅಭಿವೃದ್ಧಿಗೆ ಕೇಂದ್ರದ ಮೂರನೇ ಘೋಷಣೆ

► ಕೃಷಿ ಮೂಲಸೌಕರ್ಯಕ್ಕೆ 1 ಲಕ್ಷ ಕೋಟಿ ರೂ.

► ಸಣ್ಣ ಆಹಾರ ಉದ್ಯಮಕ್ಕ್ಕೆ 10 ಸಾವಿರ ಕೋಟಿ ರೂ.

► ಕರ್ನಾಟಕದ ರಾಗಿ, ಕಾಶ್ಮೀರದ ಕೇಸರಿ, ತಮಿಳುನಾಡಿನ ಮರಗೆಣಸು ಮಾರುಕಟ್ಟೆ ವಿಸ್ತರಣೆಗೆ ಒತ್ತು

► ಸಾವಯವ,ಔಷಧಿ ಸಸಿಗಳ ಕೃಷಿಕರಿಗೆ ನೆರವು

► ಸಾವಯವ ಪದ್ಧತಿಯಲ್ಲಿ ರಾಗಿ ಬೆಳೆಗೆ ಪ್ರೋತ್ಸಾಹ

► ಮೀನುಗಾರರಿಗೆ ಹೊಸ ಬೋಟ್, ಉಪಕರಣ ಖರೀದಿಗೆ ‘ಮತ್ಸ ಸಂಪದ’ ಯೋಜನೆಯಡಿ 20 ಸಾವಿರ ಕೋಟಿ ರೂ. ನೆರವು.

► ದೇಶೀಯ ಉತ್ಪನ್ನಗಳ ರಫ್ತಿಗೆ 10 ಸಾವಿರ ಕೋಟಿ ರೂ. ನಿಧಿ

► ಸಣ್ಣ ಆಹಾರ ಉತ್ಪನ್ನಗಳ ತಯಾರಿಕೆ ಉದ್ಯಮಕ್ಕೆ 10 ಸಾವಿರ ಕೋಟಿ ರೂ.

► ಮೀನುಗಾರಿಕೆ ಉದ್ಯಮದಲ್ಲಿ 55 ಲಕ್ಷ ಉದ್ಯೋಗ ಸೃಷ್ಟಿಗೆ ಕ್ರಮ

► ಡೈರಿ ಉತ್ಪನ್ನಗಳ ಪ್ರೋತ್ಸಾಹಕ್ಕೆ 15 ಸಾವಿರ ಕೋಟಿ ರೂ.

► ಮಿಲ್ಕ್‌ಪೌಡರ್, ಚೀಸ್, ಕ್ರೀಮ್ ಉತ್ಪನ್ನಗಳ ಗುಣಮಟ್ಟಕ್ಕೆ ಒತ್ತು

► 53 ಕೋಟಿ ಪಶುಗಳಿಗೆ ರೋಗ ನಿರೋಧಕ ಲಸಿಕೆ

► ಔಷಧೀಯ ಸಸ್ಯಗಳ ಕೃಷಿ ಉತ್ತೇಜನಕ್ಕೆ 4 ಸಾವಿರ ಕೋಟಿ ರೂ.

► ಜಾನುವಾರು ರೋಗ ನಿಯಂತ್ರಣಕ್ಕೆ 13,343 ಕೋಟಿ ರೂಪಾಯಿ ಮೀಸಲು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News