ಪಾದರಾಯನಪುರದಲ್ಲಿ ಕಿಯೋಸ್ಕ್ ಸ್ಥಾಪನೆ: ಕೊರೋನ ತಪಾಸಣೆ ಸಂಖ್ಯೆ ಹೆಚ್ಚಳ

Update: 2020-05-15 12:15 GMT

ಬೆಂಗಳೂರು, ಮೇ 15: ಪಾದರಾಯನಪುರದ ಕಂಟೈನ್ಮೆಂಟ್ ವ್ಯಾಪ್ತಿಯಲ್ಲಿ ಎಲ್ಲರಿಗೂ ಕೊರೋನ ಸೋಂಕು ಪರೀಕ್ಷೆ ಮಾಡುವ ಕಾರ್ಯಾಚರಣೆಗೆ ಬಿಬಿಎಂಪಿ ಚಾಲನೆ ನೀಡಿದ್ದು, ಗಂಟಲು ದ್ರವ ಪರೀಕ್ಷೆ ಹಾಗೂ ಕಂಟೈನ್ಮೆಂಟ್ ಝೋನ್ ನಿಯಮ ಪಾಲನೆಗೆ ಸಂಬಂಧಿಸಿದಂತೆ ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್‍ ಕುಮಾರ್ ಪರಿಶೀಲನೆ ನಡೆಸಿದರು.

ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್‍ ಕುಮಾರ್, ಪಾದರಾಯನಪುರದ ಕಂಟೈನ್ಮೆಂಟ್‍ ಝೋನ್ ವ್ಯಾಪ್ತಿಯಲ್ಲಿನ ಕೆಲವು ರಸ್ತೆಗಳಲ್ಲಿನ ನಿವಾಸಿಗಳಲ್ಲಿ ಕೊರೋನ ಸೋಂಕು ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಶೇ.100ರಷ್ಟು ಕೊರೋನ ಸೋಂಕು ಪರೀಕ್ಷೆ ಮಾಡಲಾಗುತ್ತಿದೆ.

ಮೊದಲ ಹಂತದಲ್ಲಿ ಈಗಾಗಲೇ 11 ಜನರ ಗಂಟಲುದ್ರವ ಪರೀಕ್ಷೆ ಮಾಡಲಾಗಿದೆ. ಕೆಎಸ್ಸಾರ್ಟಿಸಿ ಬಸ್‍ನ ಮೊಬೈಲ್ ಕ್ಲಿನಿಕ್‍ ಅನ್ನು ಜಗಜೀವನ್‍ ರಾವ್ ಪೊಲೀಸ್ ಠಾಣೆಯ ಬಳಿ ನಿಲ್ಲಿಸಲಾಗಿದ್ದು, ಪಾದರಾಯನಪುರದ ಅರಾಫತ್ ನಗರದಿಂದ ಬರುವವರನ್ನು ಇದರಲ್ಲಿ ತಪಾಸಣೆಗೆ ಒಳಪಡಿಸಲಾಗುತ್ತಿದೆ.

ಬುಧವಾರ ಮೊದಲ ಹಂತದಲ್ಲಿ 11 ಜನರನ್ನು ತಪಾಸಣೆ ಮಾಡಲಾಗಿದ್ದು, ಶುಕ್ರವಾರದಿಂದ ಮತ್ತೆರಡು ಕಿಯೋಸ್ಕ್ ಸ್ಥಾಪನೆ ಮಾಡುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಕೊರೋನ ಪರೀಕ್ಷೆಗೆ ಚಾಲನೆ ನೀಡಲಾಯಿತು. ಗೋರಿಪಾಳ್ಯದ ರೆಫರಲ್ ಆಸ್ಪತ್ರೆಯಲ್ಲಿ ಕೊರೋನ ಸೋಂಕು ಪರೀಕ್ಷೆ ಮಾಡುವ ಸಂಬಂಧ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಅನಿಲ್ ಕುಮಾರ್ ಮಾಹಿತಿ ನೀಡಿದ್ದಾರೆ.

ಕ್ಯಾರೇ ಎನ್ನದ ಜನ: ಮುಖ್ಯವಾಗಿ ಕಂಟೈನ್ಮೆಂಟ್‍ ಝೋನ್‍ನಲ್ಲಿ ಅಳವಡಿಸಲಾಗಿರುವ ಬ್ಯಾರಿಕೇಡ್‍ಗಳನ್ನು ಸರಿಸಿ ಜನ ಓಡಾಡುತ್ತಿದ್ದಾರೆ. ಇಲ್ಲಿನ ಕಿರಿದಾದ ರಸ್ತೆಗಳಲ್ಲಿ ಜನಸಂಚಾರ ಇನ್ನು ನಿಂತಿಲ್ಲ. ಹೀಗಾಗಿ, ಇಲ್ಲಿನ ಆಯ್ದ ಭಾಗದಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನೇಮಕ ಮಾಡುವ ಸಂಬಂಧ ಪೊಲೀಸ್ ಆಯುಕ್ತರೊಂದಿಗೆ ಚರ್ಚೆ ಮಾಡಲಾಗುವುದು ಎಂದು ಆಯುಕ್ತರು ತಿಳಿಸಿದರು.

ಜಾಗೃತಿ-ಸ್ವಚ್ಛತೆ ಕಾಪಾಡಲು ಸೂಚನೆ: ಈ ಭಾಗದಲ್ಲಿ ಬಹಳಷ್ಟು ಕಡೆ ಸ್ವಚ್ಛತೆ ಕಾಪಾಡಿಕೊಂಡಿಲ್ಲ. ಅಲ್ಲದೆ, ಬ್ಲಾಕ್ ಸ್ಪಾಟ್‍ಗಳ ಸಂಖ್ಯೆಯೂ ಹೆಚ್ಚಾಗಿವೆ. ಹೀಗಾಗಿ, ಹೆಚ್ಚುವರಿ ಘನತ್ಯಾಜ್ಯ ನಿರ್ವಹಣಾ ತಂಡ ನೇಮಕ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News