×
Ad

ಕಾಲೇಜು ಪ್ರಾಧ್ಯಾಪಕರಿಂದ ಲಂಚ ಕೇಳಿದ ಆರೋಪ: ವಿಚಾರಣಾ ವರದಿ ಸಲ್ಲಿಸಲಾಗಿದೆ- ಹೈಕೋರ್ಟ್ ಗೆ ಮಾಹಿತಿ

Update: 2020-05-15 23:05 IST

ಬೆಂಗಳೂರು, ಮೇ 15: ಕಲಬುರಗಿಯ ಖ್ವಾಜಾ ಬಂದೇ ನವಾಜ್ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕರು ಲಂಚ ಕೇಳಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾ ವರದಿಯನ್ನು ಕೋರ್ಟ್‍ಗೆ ಸಲ್ಲಿಸಲಾಗಿದೆ ಎಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ಪರ ವಕೀಲರು ಹೈಕೋರ್ಟ್‍ಗೆ ತಿಳಿಸಿದ್ದಾರೆ.

ಪ್ರಾಯೋಗಿಕ ವಿಷಯ ಪರೀಕ್ಷೆ ನಡೆಸಲು ವಿವಿಗೆ ನಿರ್ದೇಶಿಸಬೇಕೆಂದು ಕೋರಿ ವಿನೋದಿನಿ ಇನ್ನಿತರ 7 ಮಂದಿ ಎಂಬಿಬಿಎಸ್ ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.

ವಿವಿ ಪರ ವಕೀಲರು ವಾದಿಸಿ, 4ನೆ ವರ್ಷದ ಎಂಬಿಬಿಎಸ್ ಪದವಿಯ ಸರ್ಜರಿ ವಿಷಯದ ಪ್ರಾಯೋಗಿಕ ಪರೀಕ್ಷೆಯಲ್ಲಿ ಉತ್ತೀರ್ಣ ಮಾಡಬೇಕಾದರೆ ತಲಾ ಐದು ಸಾವಿರ ರೂ.ಲಂಚ ನೀಡಬೇಕು ಎಂದು ಪ್ರಾಧ್ಯಾಪಕ ಡಾ.ಸದಾಶಿವ ಪಾಟೀಲ್ 2020ರ ಜ.2ರಂದು ನಡೆದ ಪುನರ್ ಮನನ ತರಗತಿಗಳ ವೇಳೆ ವಿದ್ಯಾರ್ಥಿಗಳಿಗೆ ಬೇಡಿಕೆ ಇಟ್ಟಿದ್ದ ಆರೋಪ ಕೇಳಿ ಬಂದಿತ್ತು. ಪ್ರಕರಣ ಕುರಿತು ವಿಚಾರಣೆಗೆ ಸಮಿತಿ ರಚಿಸಲಾಗಿತ್ತು. ವಿಚಾರಣೆ ನಡೆಸಿರುವ ಸಮಿತಿ 2020ರ ಫೆ.19ರಂದು ವರದಿ ಸಲ್ಲಿಸಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಏನಿದು ಪ್ರಕರಣ: ಶಸ್ತ್ರ ಚಿಕಿತ್ಸೆ ವಿಷಯದ ಪ್ರಾಯೋಗಿಕ ಪರೀಕ್ಷೆಯಲ್ಲಿ ಪಾಸು ಮಾಡಲು ಪ್ರಾಧ್ಯಾಪಕರು ಲಂಚ ಕೇಳಿದ ಆರೋಪವಿತ್ತು. ಹಾಗೆಯೇ ವಿದ್ಯಾರ್ಥಿಗಳು ತಲಾ ಐದು ಸಾವಿರ ರೂ.ಹಣ ನೀಡಿದ್ದರು ಎನ್ನಲಾಗಿತ್ತು.

ತದನಂತರವೂ ಪಾಟೀಲ್ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಆದರೆ, ಅರ್ಜಿದಾರರು ಸೇರಿ 18 ವಿದ್ಯಾರ್ಥಿಗಳು 2ನೆ ಬಾರಿಗೆ ಲಂಚ ನೀಡಲು ನಿರಾಕರಿಸಿದ್ದರು. ಆ ಕಾರಣದಿಂದ ಅರ್ಜಿದಾರರನ್ನು ಪ್ರಾಯೋಗಿಕ ಪರೀಕ್ಷೆಯಲ್ಲಿ ಅನುತ್ತೀರ್ಣ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು.

ಅಲ್ಲದೆ, ಮತ್ತೆ ಪ್ರಾಯೋಗಿಕ ಪರೀಕ್ಷೆ ನಡೆಸಬೇಕು. ಪ್ರಕರಣದ ವಿಚಾರಣೆ ನಡೆಸಿ ಪ್ರಾಧ್ಯಾಪಕ ಡಾ.ಸದಾಶಿವ ಪಾಟೀಲ್ ಅವರನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಕೋರಿ ವಿದ್ಯಾರ್ಥಿಗಳು 2020ರ ಫೆ.12ರಂದು ಸಲ್ಲಿಸಿದ ಮನವಿ ಪತ್ರವನ್ನು ಈವರೆಗೂ ವಿವಿ ಹಾಗೂ ಕಾಲೇಜು ಆಡಳಿತ ಮಂಡಳಿಗೆ ಪರಿಗಣಿಸಿಲ್ಲ ಎಂದು ದೂರಿದ್ದ ವಿದ್ಯಾರ್ಥಿಗಳು, ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News