×
Ad

ನಮಗೆ ಕಿಟ್ ಇಲ್ಲ, ಮಾಸ್ಕ್ ಕೊಟ್ಟು 4 ದಿನ ಆಗಿದೆ: ಅಳಲು ತೋಡಿಕೊಂಡ ನರ್ಸ್

Update: 2020-05-15 23:24 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ 15: ಕೊರೋನ ವೈರಸ್ ಅನ್ನು ಕಟ್ಟಿ ಹಾಕಲು ಮೆಡಿಕಲ್ ವಾರಿಯರ್ಸ್ ಸತತ ಪ್ರಯತ್ನದಲ್ಲಿದ್ದಾರೆ. ತಮ್ಮ ಮನೆ-ಮಠ ಏನನ್ನೂ ಚಿಂತಿಸದೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ, ಅಂತಹ ಮೆಡಿಕಲ್ ವಾರಿಯರ್ಸ್‍ಗೆ ಸರಕಾರ ಯಾವುದೇ ರೀತಿಯ ಅನುಕೂಲಗಳನ್ನು ನೀಡುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.

ಮಂಗಮ್ಮನಪಾಳ್ಯದ ಮದೀನಾ ನಗರದಲ್ಲಿ ಕೆಲಸ ಮಾಡುವ ನರ್ಸ್ ಒಬ್ಬರು ಆರೋಗ್ಯ ಇಲಾಖೆಯ ಅವ್ಯವಸ್ಥೆ ನೆನೆದು ಕಣ್ಣೀರು ಹಾಕಿದ್ದಾರೆ. ನಮಗೆ ಕಿಟ್ ಇಲ್ಲ. ಮಾಸ್ಕ್ ಕೊಟ್ಟು 4 ದಿನ ಆಗಿದೆ ಎಂದು ಆರೋಗ್ಯ ಇಲಾಖೆಯ ಲೋಪವನ್ನು ಬಿಚ್ಚಿಟ್ಟಿದ್ದಾರೆ.

ಅಲ್ಲದೆ, ರಾತ್ರಿ ವೇಳೆಯೂ ಮಹಿಳಾ ಸಿಬ್ಬಂದಿ ಕೆಲಸ ಮಾಡಬೇಕು. ಅವರಿಗೆ ಯಾವುದೇ ಭದ್ರತೆ ನೀಡಿಲ್ಲ. ಕೆಲಸ ಮುಗಿಸಿಕೊಂಡು ಮನೆಗೆ ಹೋಗಿದ್ದ ನರ್ಸ್‍ಗೆ ಅಧಿಕಾರಿಗಳು ಕರೆ ಮಾಡಿ ಮಂಗಮ್ಮನಪಾಳ್ಯದಲ್ಲಿ ಸೋಂಕಿನ ಶಂಕೆ ಇದೆ. ಹೋಗಿ ಸಂಪರ್ಕಿತರ ಮಾಹಿತಿ ತೆಗೆದುಕೊಂಡು ಬನ್ನಿ ಎಂದಿದ್ದಾರೆ. ಆದರೆ, ನರ್ಸ್‍ಗೆ ಯಾವುದೇ ಭದ್ರತೆ ನೀಡಿಲ್ಲ. ರಾತ್ರಿ 9 ಗಂಟೆಯಾದರೂ ಮನೆಗೆ ಹೋಗಲು ವಾಹನ ಕೂಡ ಸಿಗದೆ ಪರದಾಡಿದ್ದಾರೆ ಎಂದು ದೂರಿದ್ದಾರೆ.

ಜೀವ ಉಳಿಸುವ ಕೆಲಸ ಮಾಡುತ್ತಿರುವವರ ಜೀವನದ ಜೊತೆ ಅಧಿಕಾರಿಗಳು ಆಟ ಆಡುತ್ತಿದ್ದಾರೆ. ಇಲ್ಲಿ ಇವರು ಕಷ್ಟಪಟ್ಟು ಡೇಟಾ ಕಲೆಕ್ಟ್ ಮಾಡಿದರೆ, ಅಲ್ಲಿ ಎಸಿ ರೂಮ್‍ನಲ್ಲಿದ್ದ ಅಧಿಕಾರಿಗಳು ಮಾಹಿತಿ ಪಡೆಯುತ್ತಾರೆ. ಸರಕಾರ ಪಿಪಿಇ ಕಿಟ್‍ಗೆ ಕೋಟಿ ಕೋಟಿ ಖರ್ಚು ಮಾಡುತ್ತದೆ. ಆದರೆ, ಸೋಂಕಿತರಿರುವ ಏರಿಯಾಗೆ ಹೋರುವವರಿಗೆ, ಅಲ್ಲಿ ಸರ್ವೆ ಮಾಡುವ ಸಿಬ್ಬಂದಿಗೆ ಪಿಪಿಇ ಕಿಟ್ ಕೊಡಲ್ಲ. ಇಂತಹ ಕೆಟ್ಟ ಪರಿಸ್ಥಿತಿ ಯಾರಿಗೂ ಬೇಡ ಎಂದು ಆರೋಗ್ಯ ಇಲಾಖೆ ವಿರುದ್ಧ ನರ್ಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News