ಕೇಂದ್ರ, ರಾಜ್ಯ ಸರಕಾರ ಘೋಷಿಸಿದ ಪ್ಯಾಕೇಜ್‍ಗಳ ಅಸಲಿ ಬಣ್ಣ ಬಯಲು ಮಾಡುತ್ತೇವೆ: ಕುಮಾರಸ್ವಾಮಿ ಎಚ್ಚರಿಕೆ

Update: 2020-05-16 11:42 GMT

ಬೆಂಗಳೂರು, ಮೇ 16: ಕೊರೋನ ಲಾಕ್‍ಡೌನ್‍ನಿಂದ ಜನರು ಸಂಕಷ್ಟಕ್ಕೆ ಸಿಲುಕಿರುವ ವೇಳೆ ಕೇಂದ್ರ ಸರಕಾರ ಘೋಷಿಸಿರುವ ಪ್ಯಾಕೇಜ್ ಸಾಲದ ರೂಪದ್ದೋ ಅಥವಾ ಪರಿಹಾರ ರೂಪದ್ದೊ ಎಂಬುದನ್ನು ಕೂಡಲೇ ಸ್ಪಷ್ಟಪಡಿಸಬೇಕು ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಇಂದಿಲ್ಲಿ ಒತ್ತಾಯಿಸಿದ್ದಾರೆ.

ಶನಿವಾರ ಕಾಮಾಕ್ಷಿಪಾಳ್ಯದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೊರೋನ ಸೋಂಕು ನಿಯಂತ್ರಣದ ಹೆಸರಿನಲ್ಲಿ ಹಣ ಲೂಟಿಯಾಗುತ್ತಿದೆ. ಕೇಂದ್ರ ಸರಕಾರ ಹೇಳುತ್ತಿರುವಂತೆ 45 ದಿನಗಳ ಲಾಕ್‍ಡೌನ್ ಅವಧಿಯಲ್ಲಿ ಕಾರ್ಮಿಕರಿಗೆ ಮೂರು ಹೊತ್ತು ಊಟ ನೀಡಲು 11 ಸಾವಿರ ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ಹೇಳಿದೆ. ಆದರೂ ಕಾರ್ಮಿಕರು ಏಕೆ ಪರದಾಡುವ ಪರಿಸ್ಥಿತಿ ಉದ್ಭವಿಸಿತ್ತು. ರಸ್ತೆಗಳಲ್ಲಿ ಕೂಲಿ ಕಾರ್ಮಿಕರು ಪ್ರವಾಹದ ರೂಪದಲ್ಲಿ ತಮ್ಮ ಊರುಗಳಿಗೆ ತೆರಳಿದ್ದೇಕೆ ಎಂದು ಪ್ರಶ್ನಿಸಿದರು.

ರಾಜ್ಯ ಸರಕಾರ ಆಟೋರಿಕ್ಷಾ ಚಾಲಕರು, ದೋಬಿ, ಕ್ಷೌರಿಕರು ಸೇರಿದಂತೆ ಬಡವರಿಗೆ 5 ಸಾವಿರ ರೂ. ನೀಡಿದ್ದರೆ 2.50 ಕೋಟಿ ರೂ.ಬೇಕಾಗುತ್ತದೆ. ಕೇಂದ್ರ ಸರಕಾರ ಪ್ರತಿನಿತ್ಯ ಒಂದೊಂದು ಪ್ಯಾಕೇಜ್ ಘೋಷಣೆ ಮಾಡುತ್ತಲೇ ಇದೆ. ಕೆಲಸವಿಲ್ಲದ 40 ಕೋಟಿ ಜನರಿಗೆ 10 ಸಾವಿರ ರೂ.ನೀಡಿದರೂ 40 ಕೋಟಿ ರೂ.ಗಳು ಸಾಕಾಗುತ್ತದೆ ಎಂದು ಅವರು ವಿಶ್ಲೇಷಿಸಿದರು.

ಕೊರೋನ ಸೋಂಕುನಿಂದ ಸಂಕಷ್ಟಕ್ಕೆ ಸಿಲುಕಿರುವ ಜನರ ನೆರವಿಗಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಘೋಷಿಸಿರುವ ಪ್ಯಾಕೇಜ್‍ಗಳ ಅಸಲಿ ಬಣ್ಣ ಮುಂದಿನ ದಿನಗಳಲ್ಲಿ ಬಯಲು ಮಾಡಲಾಗುವುದು ಎಂದು ಎಚ್ಚರಿಸಿದ ಕುಮಾರಸ್ವಾಮಿ, ಸರಕಾರಗಳ ಈ ಪ್ಯಾಕೇಜ್ ನಿಜಕ್ಕೂ ಬಡವರಿಗೆ ತಲುಪಿವೆಯೇ ಎಂದು ಕೇಳಿದರು.

ಪರಿಹಾರದ ಹೆಸರಿನಲ್ಲಿ ರಾಜ್ಯದ ಜನರಿಗೆ ಟೋಪಿ ಹಾಕುವ ಕೆಲಸ ನಡೆಯುತ್ತಿದೆ. ಆದರೆ, ರಾಜ್ಯದಲ್ಲಿ ಜೆಡಿಎಸ್ ಅಧಿಕಾರದಲ್ಲಿದ್ದಾಗ ಅಂತಹ ಯಾವುದೇ ಕೆಲಸವನ್ನು ಮಾಡಲಿಲ್ಲ. ರಾಜ್ಯ ಸರಕಾರ ಬಡವರಿಗೆ ಆಹಾರ ಪದಾರ್ಥಗಳನ್ನು ತಲುಪಿಸಿದ್ದರೆ ಜನರು ಸುರಕ್ಷಿತ ಅಂತರವನ್ನು ಮರೆತು ಆಹಾರದ ಕಿಟ್‍ಗಳಿಗಾಗಿ ಮುಗಿಬೀಳುವ ಸ್ಥಿತಿ ಬರುತ್ತಿರಲಿಲ್ಲ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News