20 ಲಕ್ಷ ಕೋಟಿ ರೂ. ಪ್ಯಾಕೇಜ್ ಕೇವಲ ಅಂಕಿ ಅಂಶ ಮಾತ್ರ: ಎಸ್‍ಡಿಪಿಐ
ಬೆಂಗಳೂರು, ಮೇ 16: ಕೇಂದ್ರ ಸರಕಾರ ಘೊಷಿಸಿರುವ 20 ಲಕ್ಷ ಕೋಟಿ ರೂ. ಉತ್ತೇಜನಕಾರಿ ಪ್ಯಾಕೇಜ್ ಅರ್ಥವೇ ಇಲ್ಲದ ಕೇವಲ ಅಂಕಿ ಅಂಶವನ್ನು ತೋರಿಸುವ ಪ್ಯಾಕೇಜ್ ಆಗಿದೆ ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‍ಡಿಪಿಐ) ರಾಷ್ಟ್ರೀಯ ಅಧ್ಯಕ್ಷ ಎಂ.ಕೆ.ಫೈಝಿ ಟೀಕಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಈ ಪ್ಯಾಕೇಜ್ ಭಾರತೀಯ ಜಿಡಿಪಿಯ ಶೇ.10ರಷ್ಟಕ್ಕೆ ಸಮಾನವಾಗಿದೆ ಎಂದು ಸರಕಾರ ಹೇಳಿಕೊಂಡರೂ ಅದು ಚತುರ ತಂತ್ರವಾಗಿದೆ. ವಾಸ್ತವವಾಗಿ ಇದು, ಹಣದ ಪ್ರಮಾಣವನ್ನು ಹೆಚ್ಚಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಈ ಹಿಂದೆ ಘೋಷಿಸಿದ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಅಡಿಯ 1.7 ಲಕ್ಷ ಕೋಟಿ ರೂ.ಗಳು ಮತ್ತು ಇತರ ಹಲವು ಕ್ರಮಗಳಡಿ ಘೋಷಿಸಿದ 6.5 ಲಕ್ಷ ಕೋಟಿ ರೂ.ಗಳನ್ನು ಒಳಗೊಂಡಿದೆ ಎಂದು ತಿಳಿಸಿದ್ದಾರೆ.
ಪ್ಯಾಕೇಜ್‍ನ ಪ್ರಮುಖ ಅಂಶಗಳಲ್ಲೊಂದಾದ ಎಂಎಸ್‍ಎಂಇಗಳಿಗಾಗಿ 3 ಲಕ್ಷ ಕೋಟಿ ರೂ. ಮೀಸಲಿಡಲಾಗಿದೆ ಎಂಬುದು ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳ ಇಚ್ಛೆಯನ್ನು ಅವಲಂಬಿಸಿರುತ್ತದೆ. ಹಿಂದಿನ ಸಾಲಗಳ ಮರುಪಾವತಿಗೆ ಸಾಕಷ್ಟು ಸಮಯವನ್ನು ವಿಸ್ತರಿಸುವ ಬದಲು, ಸರಕಾರವು ಸಂಕಷ್ಟಕ್ಕೆ ತುತ್ತಾಗಿರುವ ಎಂಎಸ್‍ಎಂಇಗಳಿಗೆ ಕಾಲ್ಪನಿಕ ಪರಿಹಾರವನ್ನು ನೀಡಿದೆ ಎಂದು ಫೈಝಿ ತಿಳಿಸಿದ್ದಾರೆ.
ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಅಡಿಯಲ್ಲಿ ಘೋಷಿಸಲಾದ 1.7 ಲಕ್ಷ ಕೋಟಿ ರೂ.ಗಳು ಇನ್ನೂ ಸರಿಯಾಗಿ ವಿತರಿಸಲಾಗಿಲ್ಲ ಎಂಬುದು ಗಮನಿಸಬೇಕಾದ ಸಂಗತಿ. ಈ ಪ್ಯಾಕೇಜ್ ಲಕ್ಷಾಂತರ ಬಡವರು, ಬಡ ಕಾರ್ಮಿಕರು, ಹಸಿವು ಮತ್ತು ಸಂಕಷ್ಟದೊಂದಿಗೆ ಇನ್ನೂ ಮನೆ ಸೇರದ ವಲಸೆ ಕಾರ್ಮಿಕರಿಗೆ ಯಾವುದೇ ಪರಿಹಾರವನ್ನು ನೀಡುವುದಿಲ್ಲ ಎಂಬುದು ನಿಜಕ್ಕೂ ಆಘಾತಕಾರಿ. ದೇಶದಲ್ಲಿ ಹೆಚ್ಚುತ್ತಿರುವ ಆರ್ಥಿಕ ಸಮಸ್ಯೆಗಳ ಬಗ್ಗೆ ಆಡಳಿತ ಯಂತ್ರಕ್ಕೆ ಸ್ವಲ್ಪವೂ ಸೂಕ್ಷ್ಮತೆ ಇಲ್ಲ ಎಂಬುದನ್ನು ಇದು ಸ್ಪಷ್ಟವಾಗಿ ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ.
ಈಗ ಘೋಷಿಸಿರುವ ಉತ್ತೇಜನಕಾರಿ ಪ್ಯಾಕೇಜ್, ಪ್ರಧಾನಮಂತ್ರಿಯ ಚುನಾವಣಾ ಪೂರ್ವದಲ್ಲಿ ಘೋಷಿಸಿದ್ದ ಪ್ರತಿಯೊಬ್ಬ ಭಾರತೀಯನಿಗೂ 15 ಲಕ್ಷ ರೂ. ನೀಡುವ ಭರವಸೆಯನ್ನೆ ಹೋಲುತ್ತದೆ ಎಂ.ಕೆ.ಫೈಝಿ ವ್ಯಂಗ್ಯವಾಡಿದ್ದಾರೆ.