ಅನುದಾನರಹಿತ ಶಾಲಾ-ಕಾಲೇಜು ಶಿಕ್ಷಕರಿಗೆ ಪರಿಹಾರಕ್ಕೆ ವಿಧಾನಪರಿಷತ್ ಸದಸ್ಯರ ಒತ್ತಾಯ

Update: 2020-05-16 14:37 GMT

ಬೆಂಗಳೂರು, ಮೇ 16: ಅನುದಾನ ರಹಿತ ಪ್ರಾಥಮಿಕ, ಪ್ರೌಢಶಿಕ್ಷಣ, ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಕಳೆದ 2-3 ತಿಂಗಳುಗಳಿಂದ ವೇತನವಿಲ್ಲದೆ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಇವರಿಗೆ 25 ಸಾವಿರ ರೂ.ಪರಿಹಾರ ಹಾಗೂ ಅಗತ್ಯವಿರುವವರಿಗೆ ಆಹಾರ ಕಿಟ್‍ಗಳನ್ನು ನೀಡಬೇಕೆಂದು ವಿಧಾನಪರಿಷತ್ ಸದಸ್ಯರು ಒತ್ತಾಯಿಸಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರೊಂದಿಗೆ ಸಭೆ ನಡೆಸಿ ನಂತರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಪರಿಷತ್ ಸದಸ್ಯರು, ಅನುದಾನರಹಿತ ಶಾಲೆಗಳ ಬಾಕಿ ಇರುವ ಆರ್‍ಟಿಇ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು. ಹಾಗೂ ಅನುದಾನರಹಿತ ಶಾಲಾ-ಕಾಲೇಜಿನ ಶಿಕ್ಷಕರು, ಗೌರವ ಶಿಕ್ಷಕರು, ಕಾಲೇಜು, ಪಾಲಿಟೆಕ್ನಿಕ್‍ನಲ್ಲಿ ಕಾರ್ಯನಿರ್ವಹಿಸುವ ಅತಿಥಿ ಉಪನ್ಯಾಸಕರಿಗೂ 25 ಸಾವಿರ ರೂ.ಸಹಾಯ ಧನ ಘೋಷಿಸಬೇಕು.

ಕೋವಿಡ್-19 ಆರೋಗ್ಯ ಸಮೀಕ್ಷೆಯು ಸೇರಿದಂತೆ ಇನ್ನಿತರ ಕೋವಿಡ್-19ರ ಕೆಲಸಗಳಲ್ಲಿ ಭಾಗವಹಿಸುವ ಎಲ್ಲ ಶಿಕ್ಷಕರು ಉಪನ್ಯಾಸಕರುಗಳಿಗೆ ಸುರಕ್ಷತಾ ಸಾಮಗ್ರಿಗಳನ್ನು ಕೊಡಬೇಕು. ಕೋವಿಡ್-19ರಲ್ಲಿ ಭಾಗವಹಿಸಿರುವ ವೈದ್ಯಕೀಯ, ಪೊಲೀಸ್, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡಿರುವ ವೈದ್ಯಕೀಯ ವಿಮೆಯನ್ನು ಕೋವಿಡ್-19ರಲ್ಲಿ ಕೆಲಸ ಮಾಡುವ ಶಿಕ್ಷಕರಿಗೂ ವಿಸ್ತರಿಸಬೇಕು.

ಕೋವಿಡ್-19 ಕಾರ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಅನುದಾನರಹಿತ ಶಾಲಾ-ಕಾಲೇಜುಗಳ ಶಿಕ್ಷಕರು ಹಾಗೂ ಉಪನ್ಯಾಸಕರಿಗೆ ಗೌರವಧನವನ್ನು ನೀಡಬೇಕು ಹಾಗೂ ಸಂಕಷ್ಟದಲ್ಲಿರುವ ಶಾಲಾ-ಕಾಲೇಜುಗಳ ಆಡಳಿತ ಮಂಡಳಿಗಳಿಗೆ ಶಿಕ್ಷಕರಿಗೆ ವೇತನ ನೀಡಲು ಅನುಕೂಲಕ್ಕಾಗಿ ಬ್ಯಾಂಕ್‍ಗಳಲ್ಲಿ ಬಡ್ಡಿರಹಿತ ಸಾಲವನ್ನು ಕೊಡಲು ನಿರ್ದೇಶಿಸಬೇಕೆಂದು ರಾಜ್ಯ ಸರಕಾರವನ್ನು ಪತ್ರಿಕಾ ಪ್ರಕಟನೆಯ ಮೂಲಕ ಒತ್ತಾಯಿಸಲಾಗಿದೆ.

ಮುಖ್ಯಮಂತ್ರಿಗಳೊಂದಿಗೆ ನಡೆದ ಸಭೆಯಲ್ಲಿ ವಿಧಾನಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ, ಅರುಣ ಶಹಾಪುರ, ಎಸ್.ವಿ.ಸಂಕನೂರ, ಪುಟ್ಟಣ್ಣ, ಶರಣಪ್ಪ ಮಟ್ಟೂರ, ಮರಿತಿಬ್ಬೇಗೌಡ, ಚೌಡರೆಡ್ಡಿ ತೂಪಲ್ಲಿ, ಕೆ.ಟಿ.ಶ್ರೀಕಂಠೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News