ಎಪಿಎಂಸಿ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ

Update: 2020-05-16 15:44 GMT

ಬೆಂಗಳೂರು, ಮೇ 16: ರಾಜ್ಯದಲ್ಲಿ ಖಾಸಗಿ ಕಂಪೆನಿಗಳು ಅಥವಾ ಖಾಸಗಿ ವ್ಯಕ್ತಿಗಳು ಕೃಷಿ ಮಾರುಕಟ್ಟೆ ಆರಂಭಿಸಲು ಮತ್ತು ರೈತರು ತಮ್ಮ ಉತ್ಪನ್ನಗಳನ್ನು ತಮಗೆ ಇಷ್ಟ ಬಂದವರಿಗೆ ಮಾರಾಟ ಮಾಡಲು ಅವಕಾಶ ಕಲ್ಪಿಸುವ 'ಕರ್ನಾಟಕ ಕೃಷಿ ಉತ್ಪನ್ನ ಮಾರಾಟ(ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆಗೆ ತಿದ್ದುಪಡಿ ಸುಗ್ರೀವಾಜ್ಞೆ'ಗೆ ರಾಜ್ಯಪಾಲ ವಜುಭಾಯಿ ವಾಲಾ ಅವರು ಅಂಕಿತ ಹಾಕಿದ್ದಾರೆ.

ರೈತ ಸಂಘಟನೆಗಳು ಮತ್ತು ವಿಪಕ್ಷಗಳ ತೀವ್ರ ವಿರೋಧದ ನಡುವೆ ಎಪಿಎಂಸಿ ತಿದ್ದುಪಡಿ ಸುಗ್ರೀವಾಜ್ಞೆಗೆ ರಾಜ್ಯಪಾಲರು ಅಂಕಿತ ಹಾಕಿದ್ದು ಅಧಿಕೃತವಾಗಿ ತಿದ್ದುಪಡಿ ಕಾಯ್ದೆ ಜಾರಿಗೆ ಬರಲಿದೆ. ತಿದ್ದುಪಡಿ ಕಾಯ್ದೆಯಿಂದ ಮಧ್ಯವರ್ತಿಗಳ ಕಪಿಮುಷ್ಟಿಯಿಂದ ರೈತರಿಗೆ ಸ್ವಾತಂತ್ರ್ಯ ಸಿಗಲಿದ್ದು, ರೈತರ ಶೋಷಣೆ ತಪ್ಪಲಿದೆ ಎಂದು ರಾಜ್ಯ ಸರಕಾರ ಕಾಯ್ದೆಯನ್ನು ಸಮರ್ಥಿಸಿದೆ.

ಕೃಷಿ ಉತ್ಪನ್ನ ಮಾರುಕಟ್ಟೆ ಸುಧಾರಣೆಗೆ ಸಂಬಂಧಿಸಿದಂತೆ ಕೇಂದ್ರ ಸರಕಾರದ ಮಾದರಿ ಕಾಯ್ದೆಯನ್ನು ಆಧರಿಸಿ ಎರಡು ತಿದ್ದುಪಡಿ ಮಾಡಿದ್ದು, ರೈತರಿಗೆ ಇದರಿಂದ ಅನುಕೂಲವಾಗಲಿದೆ. ನೂತನ ಎಪಿಎಂಸಿ ತಿದ್ದುಪಡಿ ಸುಗ್ರೀವಾಜ್ಞೆಯಿಂದ ರೈತರ ಹಿತಕ್ಕೆ ಧಕ್ಕೆಯಾದರೆ ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ನಾನು ಮುಖ್ಯಮಂತ್ರಿ ಸ್ಥಾನದಲ್ಲಿ ಒಂದು ಕ್ಷಣವೂ ಮುಂದುವರಿಯುವುದಿಲ್ಲ ಎಂದು ಸಿಎಂ ಬಿಎಸ್‍ವೈ ಸ್ಪಷ್ಟನೆ ನೀಡುವ ಮೂಲಕ ಕಾಯ್ದೆಯನ್ನು ಸಮರ್ಥನೆ ಮಾಡಿದ್ದರು.

ಕೊರೋನ ಸೋಂಕಿನ ಲಾಕ್‍ಡೌನ್ ಸಂದರ್ಭದಲ್ಲಿ ಎಪಿಎಂಸಿ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆಯಿಂದ ರೈತರಿಗೆ ಅನ್ಯಾಯವಾಗಿದ್ದು, ಖಾಸಗಿ ಕಂಪೆನಿಗಳಿಂದ ರೈತರ ಶೋಷಣೆ ನಡೆಯಲಿದೆ. ಹೀಗಾಗಿ ಯಾವುದೇ ಕಾರಣಕ್ಕೂ ವಿಧಾನ ಮಂಡಲದಲ್ಲಿ ಚರ್ಚೆ ಇಲ್ಲದೆ ಕಾಯ್ದೆ ತಿದ್ದುಪಡಿ ಮಾಡಬಾರದು ಎಂದು ವಿಪಕ್ಷಗಳು ಆಗ್ರಹಿಸಿದ್ದವು.

ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಪ್ರಧಾನಿ ದೇವೇಗೌಡ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿ ಸೇರಿದಂತೆ ರೈತರ ಮುಖಂಡರು 'ಎಪಿಎಂಸಿ ಕಾಯ್ದೆ ತಿದ್ದುಪಡಿ ಮೂಲಕ ರಾಜ್ಯ ಸರಕಾರ ರೈತರ ಬದುಕನ್ನು ಅಭದ್ರಗೊಳಿಸಲು ಮುಂದಾಗುವ ಮತ್ತು ಬಹುರಾಷ್ಟ್ರೀಯ ಕಂಪೆನಿಗಳ ದಾಸ್ಯಕ್ಕೆ ಒಳಪಡಿಸುವ ಸುಗ್ರೀವಾಜ್ಞೆ ಜಾರಿಗೆ ಮುಂದಾದರೆ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು. ಆದರೆ, ಈ ವಿರೋಧದ ನಡುವೆಯೂ ಸರಕಾರ ಸುಗ್ರೀವಾಜ್ಞೆ ಜಾರಿಗೆ ಮುಂದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News