ಮೀಡಿಯಾ ಚಾನೆಲ್‍ಗಳ ಜತೆ ಚರ್ಚೆ ನಡೆಸಲು ಸರಕಾರಕ್ಕೆ ಹೈಕೋರ್ಟ್ ಸೂಚನೆ
ಬೆಂಗಳೂರು, ಮೇ 16: ಮಾಧ್ಯಮ ಪ್ರತಿನಿಧಿಗಳಿಗೂ ಕೊರೋನ ವೈದ್ಯಕೀಯ ವಿಮೆ ಒದಗಿಸುವ ವಿಚಾರವಾಗಿ ಮೀಡಿಯಾ ಚಾನೆಲ್‍ಗಳ ಜತೆ ಚರ್ಚೆ ನಡೆಸುವಂತೆ ಹೈಕೋರ್ಟ್ ಸರಕಾರಕ್ಕೆ ಸೂಚನೆ ನೀಡಿದೆ.
ಕೋರಮಂಗಲ ನಿವಾಸಿ ಜಾಕಬ್ ಜಾರ್ಜ್ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ನೇತೃತ್ವದ ದ್ವಿಸದಸ್ಯ ಪೀಠ, ಮೀಡಿಯಾ ಮುಖ್ಯಸ್ಥರುಗಳ ಜೊತೆ ಚರ್ಚೆ ನಡೆಸುವಂತೆ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರದ ಪರ ವಕೀಲರಿಗೆ ಸೂಚನೆ ನೀಡಿದೆ.
ಚಾನೆಲ್ ಮುಖ್ಯಸ್ಥರು ಇನ್ಸುರೆನ್ಸ್ ಏನಾದರೂ ವ್ಯವಸ್ಥೆ ಮಾಡಿದ್ದಾರಾ? ಮಾಧ್ಯಮ ಪ್ರತಿನಿಧಿಗಳನ್ನು ವೈದ್ಯಕೀಯ ವಿಮೆಯೊಳಗೆ ತರಬಹುದಾ? ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿಯಲ್ಲಿ ಅವಕಾಶ ಇದೆಯಾ? ಸಂಸ್ಥೆಯಲ್ಲಿ ಯಾರಿಗೆ ವಿಮೆ ನೀಡಬೇಕು? ಮಾಧ್ಯಮದವರಿಗೆ ವಿಮೆ ನೀಡಲು ಆಗುತ್ತಾ? ಆಗಲ್ಲ ಅಂದರೆ ಏನು ಕಾರಣ ತಿಳಿಸಿ. ಈ ಬಗ್ಗೆ ಇನ್ನೆರಡು ತಿಂಗಳಲ್ಲಿ ತಿಳಿಸಿ ನ್ಯಾಯಪೀಠವು ಸೂಚಿಸಿದೆ.
ಕೊರೋನ ಹಿನ್ನೆಲೆ ಕೇಂದ್ರ ಸರಕಾರ ದಿನಗೂಲಿ ನೌಕರರು, ವೈದ್ಯರು ಸೇರಿ ಹಲವು ವರ್ಗಗಳಿಗೆ ಪರಿಹಾರ ಕಲ್ಪಿಸಿದೆ. ಆದರೆ, ಮಾಧ್ಯಮ ಪ್ರತಿನಿಧಿಗಳು ಪ್ರತಿದಿನ ಕೊರೋನ ಏರಿಯಾದಲ್ಲಿ ಓಡಾಡಿ ವರದಿ ಮಾಡುತ್ತಿದ್ದಾರೆ. ಮಾಧ್ಯಮವನ್ನು ನಾವು ಪ್ರಜಾಪ್ರಭುತ್ವದ ನಾಲ್ಕನೆ ಅಂಗವೆಂದು ಪರಿಗಣಿಸಿದ್ದೇವೆ. ಸಾರ್ವಜನಿಕರ ಅರಿವಿಗಾಗಿ ಮಾಧ್ಯಮ ಪ್ರತಿನಿಧಿಗಳು ಮಾಹಿತಿ ನೀಡುತ್ತಿದ್ದಾರೆ. ಆದರೆ, ಅವರಿಗೆ ಯಾವುದೇ ರೀತಿಯ ವಿಮಾ ಸೌಲಭ್ಯಗಳೂ ಇಲ್ಲ ಎಂದು ಅರ್ಜಿದಾರರ ಪರ ವಕೀಲ ಎಚ್.ಸುನಿಲ್ ಕುಮಾರ್ ವಾದ ಮಂಡಿಸಿದರು. ಇದಕ್ಕೆ ನ್ಯಾಯಪೀಠವು ಸಹಮತ ವ್ಯಕ್ತಪಡಿಸಿ, ಮಾಧ್ಯಮ ಸಂಸ್ಥೆಗಳ ಮುಖ್ಯಸ್ಥರ ಜೊತೆ ಚರ್ಚೆ ನಡೆಸುವಂತೆ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಸೂಚಿಸಿದರು.