ಸರಕಾರದ ಯೋಜನೆಗಳ ವೈಫಲ್ಯದಿಂದ ಕೊರೋನ ಸೋಂಕು ಹೆಚ್ಚಳ: ಕೃಷ್ಣಭೈರೇಗೌಡ

Update: 2020-05-16 17:27 GMT

ಬೆಂಗಳೂರು, ಮೇ 16: ಸರಕಾರದ ಯೋಜನೆಗಳ ವೈಫಲ್ಯದಿಂದ ರಾಜ್ಯದಲ್ಲಿ ಕೊರೋನ ಸೋಂಕು ಹೆಚ್ಚಾಗುತ್ತಿದೆ ಎಂದು ಶಾಸಕ ಕೃಷ್ಣಭೈರೇಗೌಡ ಆರೋಪಿಸಿದರು.

ಪುಲಿಕೇಶಿನಗರದಲ್ಲಿ ಶಾಸಕ ಅಖಂಡ ಶ್ರೀನಿವಾಸ್‍ಮೂರ್ತಿ ಆಯೋಜಿಸಿದ್ದ ಪಡಿತರ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೊರೋನ ಸೋಂಕಿನ ಸಂದಿಗ್ಧತೆ ಹೆಚ್ಚುತ್ತಿದ್ದು ರೋಗದ ನಿಯಂತ್ರಣಕ್ಕೆ ಸರಕಾರ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಸರಕಾರದ ಅಲಕ್ಷ್ಯದಿಂದ ರೋಗದ ಪ್ರಮಾಣ ಹೆಚ್ಚಾಗುತ್ತಿದೆ. ರೋಗ ತಹಬಂದಿಗೆ ತರಲು ಪೂರ್ವ ಯೋಜನೆಯೂ ಇಲ್ಲ. ಹತೋಟಿಗೆ ತರಲು ಕ್ರಮಗಳೂ ಇಲ್ಲದಿರುವುದರಿಂದ ರಾಜ್ಯದಲ್ಲಿ ಗೊಂದಲಮಯ ವಾತಾವರಣವಿದೆ ಎಂದು ಹೇಳಿದರು.  

ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಮಾತನಾಡಿ, ಪುಲಿಕೇಶಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ದುಡಿಯುವ ಜನ ಹೆಚ್ಚಿದ್ದಾರೆ. ಕಳೆದ 2 ತಿಂಗಳಿನಿಂದ ತೊಂದರೆಯಲ್ಲಿ ಸಿಲುಕಿದ್ದವರಿಗೆ 40 ಸಾವಿರ ಪಡಿತರ ಕಿಟ್, ಪ್ರತಿದಿನ 5 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News