ಅಮೆರಿಕದಿಂದ 160ಕ್ಕೂ ಹೆಚ್ಚು ಭಾರತೀಯರನ್ನು ಹೈದರಾಬಾದ್‌ಗೆ ಕರೆತಂದ ಏರ್‌ಇಂಡಿಯಾ ವಿಮಾನ

Update: 2020-05-17 18:03 GMT

ಹೈದರಾಬಾದ್, ಮೇ 17: ಅಮೆರಿಕದ ಚಿಕಾಗೋದಲ್ಲಿದ್ದ 160ಕ್ಕೂ ಹೆಚ್ಚು ಭಾರತೀಯ ಪ್ರಜೆಗಳು ಏರ್‌ ಇಂಡಿಯಾ ವಿಮಾನದ ಮೂಲಕ ಹೈದರಾಬಾದ್‌ಗೆ ರವಿವಾರ ಆಗಮಿಸಿದ್ದಾರೆ. ಕೊರೋನ ವೈರಸ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ವಿದೇಶದಲ್ಲಿ ಸಿಕ್ಕಿಕೊಂಡಿರುವ ಭಾರತೀಯರನ್ನು ಹೈದರಾಬಾದ್‌ಗೆ ಕರೆತಂದ ವಂದೇ ಭಾರತ್ ಮಿಷನ್‌ನ 9ನೇ ಕಾರ್ಯಾಚರಣೆ ಇದಾಗಿದೆ.

ಏರ್‌ಇಂಡಿಯಾದ ಎ1 126 ವಿಮಾನ ದಿಲ್ಲಿಯ ಮೂಲಕ ರವಿವಾರ ಬೆಳಿಗ್ಗೆ 4:45ಕ್ಕೆ ಹೈದರಾಬಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದೆ. ವಿಮಾನ ನಿಲ್ದಾಣದಲ್ಲಿ ಮುಖ್ಯ ಟರ್ಮಿನಲ್ ‌ನಲ್ಲಿ ಪ್ರಯಾಣಿಕರನ್ನು ಸ್ಯಾನಿಟೈಸ್ ಪ್ರಕ್ರಿಯೆಗೆ ಒಳಪಡಿಸಲಾಗಿದೆ ಎಂದು ವಿಮಾನನಿಲ್ದಾಣದ ಮೂಲಗಳು ತಿಳಿಸಿವೆ. ವಿಮಾನ ನಿಲ್ದಾಣದ ಏರೋಬ್ರಿಡ್ಜ್‌ನಿಂದ ಪ್ರಯಾಣಿಕರ ಆಗಮನ ದ್ವಾರದವರೆಗಿನ ಪ್ರದೇಶವನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಲಾಗಿದೆ. ಅಲ್ಲದೆ ಏರೋಬ್ರಿಡ್ಜ್‌ನಿಂದ ಟರ್ಮಿನಲ್‌ನವರೆಗೆ ಪ್ರಯಾಣಿಕರು ಸುರಕ್ಷಿತ ಅಂತರ ಕಾಯ್ದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಪ್ರಯಾಣಿಕರನ್ನು ತಲಾ 25 ಜನರ ತಂಡವಾಗಿ ಪ್ರತ್ಯೇಕಿಸಿ, ವಿಮಾನ ನಿಲ್ದಾಣದ ಆರೋಗ್ಯಾಧಿಕಾರಿಗಳ ಮೇಲುಸ್ತುವಾರಿಯಲ್ಲಿ ಥರ್ಮಲ್ ಕ್ಯಾಮೆರಾದ ಮೂಲಕ ಸ್ಕ್ರೀನಿಂಗ್ ಮಾಡಲಾಯಿತು.

 ವಿಮಾನವು ವಾಪಸಾಗುವಾಗ ವಿದೇಶಕ್ಕೆ ತೆರಳಬೇಕಿರುವ 68 ಪ್ರಯಾಣಿಕರನ್ನು ದಿಲ್ಲಿಗೆ ಕರೆದೊಯ್ದಿದೆ . ಇವರನ್ನು ಅಮೆರಿಕ ಮತ್ತು ಇಂಗ್ಲೆಂಡಿಗೆ ಕಳುಹಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News