ನಾಳೆಯಿಂದ ರಾಜ್ಯದಲ್ಲಿ ಸರಕಾರಿ, ಖಾಸಗಿ ಬಸ್ ಸಂಚಾರಕ್ಕೆ ಅವಕಾಶ: ನೂತನ ಲಾಕ್ ಡೌನ್ ಮಾರ್ಗಸೂಚಿ ಘೋಷಿಸಿದ ಸಿಎಂ

Update: 2020-05-18 12:28 GMT

ಬೆಂಗಳೂರು, ಮೇ 18: ಕೊರೋನ ಸೋಂಕು ತಡೆಗಟ್ಟುವ ದೃಷ್ಟಿಯಿಂದ ಹೇರಿರುವ ಲಾಕ್‍ಡೌನ್ ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿರುವ 'ಕಂಟೈನ್ಮೆಂಟ್ ಝೋನ್'ಗಳಲ್ಲಿ ಮೇ 31ರ ವರೆಗೆ ಮುಂದುವರಿಯಲಿದ್ದು, ಉಳಿದ ವಲಯಗಳಲ್ಲಿ ಕೆಎಸ್ಸಾರ್ಟಿಸಿ, ಬಿಎಂಟಿಸಿ ಸೇರಿದಂತೆ ಸಾರಿಗೆ ಬಸ್, ಆಟೋ, ಟ್ಯಾಕ್ಸಿ, ಮಾಕ್ಸಿಕ್ಯಾಬ್ ಸಂಚಾರಕ್ಕೆ ಷರತ್ತು ಬದ್ಧ ಅನುಮತಿ ನೀಡಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.

ಸೋಮವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಲಾಕ್‍ಡೌನ್ ಹಂತಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರ ಹೊರಡಿಸಿರುವ ಮಾರ್ಗಸೂಚಿಗಳ ಹಿನ್ನೆಲೆಯಲ್ಲಿ ಯಾವ ಚಟುವಟಿಕೆಗಳಿಗೆ ಅನುಮತಿ ನೀಡಬೇಕು ಮತ್ತು ಯಾವ ಚಟುವಟಿಕೆಗಳಿಗೆ ಅನುಮತಿ ನೀಡಬಾರದು ಎಂದು ಬಗ್ಗೆ ಸಚಿವ ಸಂಪುಟ ಸದಸ್ಯರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಅವರು ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.

ಕೋವಿಡ್-19 ಸೋಂಕು ನಿಯಂತ್ರಿಸುವುದರ ಜೊತೆಗೆ ಕೇಂದ್ರ ಸರಕಾರ ಅನುಮತಿಸಿರುವ ಚುಟುವಟಿಕೆಗಳನ್ನು ನಿಯಂತ್ರಿಸುವ ಸಂಬಂಧ ಹೊರ ರಾಜ್ಯದಿಂದ, ಹೊರ ದೇಶಗಳಿಂದ ರಾಜ್ಯಕ್ಕೆ ಹಿಂದಿರುಗುವ ಜನರಿಗೆ ಕ್ವಾರಂಟೈನ್ ವ್ಯವಸ್ಥೆ, ಸಾರ್ವಜನಿಕ ಸಾರಿಗೆ ಪ್ರಾರಂಭ ಹಾಗೂ ಕಾನೂನು ಸುವ್ಯವಸ್ಥೆ ಸಂಬಂಧ ಸಮಾಲೋಚನೆ ನಡೆಸಲಾಗಿದೆ ಎಂದರು.

ಕ್ರಿಮಿನಲ್ ಕೇಸ್: ಕೊರೋನ ವೈರಸ್ ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿರುವ ಕಂಟೈನ್ಮೆಂಟ್ ಝೋನ್‍ಗಳಲ್ಲಿ ಕಟ್ಟುನಿಟ್ಟಾಗಿ ಸಾರ್ವಜನಿಕರು ಲಾಕ್ ಡೌನ್ ನಿಯಮಗಳನ್ನು ಪಾಲಿಸಬೇಕು. ಒಂದು ವೇಳೆ ಯಾರಾದರೂ ನಿಯಮ ಉಲ್ಲಂಘಿಸಿ ಮನಸೋ ಇಚ್ಛೆ ಸಂಚರಿಸಿದರೆ ಅಂತಹವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಯಡಿಯೂರಪ್ಪ ಇದೇ ವೇಳೆ ಎಚ್ಚರಿಕೆ ನೀಡಿದರು.

ಕೆಎಸ್ಸಾರ್ಟಿಸಿ ಸೇರಿದಂತೆ ಸಾರಿಗೆ ಸಂಸ್ಥೆ ಬಸ್ ಸಂಚಾರ ನಾಳೆ(ಮೇ 19)ಯಿಂದಲೇ ಪ್ರಾರಂಭಿಸಲು ಸೂಚನೆ ನೀಡಲಾಗಿದೆ. ಖಾಸಗಿ ಬಸ್ ಸಂಚಾರವನ್ನು ಆರಂಭಿಸಬಹುದು. ಆದರೆ, ಬಸ್‍ಗಳಲ್ಲಿ ಕೇವಲ 30 ಮಂದಿ ಮಾತ್ರ ಪ್ರಯಾಣಿಸಲು ಅವಕಾಶ ನೀಡಲಾಗಿದೆ. ಚಾಲಕ, ನಿರ್ವಾಹಕ ಸೇರಿದಂತೆ ಎಲ್ಲ ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ಅಲ್ಲದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಈ ನಿಯಮ ಉಲ್ಲಂಘಿಸಿದರೆ ದಂಡ ವಿಧಿಸಲಾಗುವುದು ಎಂದು ಯಡಿಯೂರಪ್ಪ ಎಚ್ಚರಿಕೆ ನೀಡಿದರು.

ಆಟೋರಿಕ್ಷಾ, ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್ ಸಂಚಾರವನ್ನು ನಾಳೆ(ಮೇ 19) ಪ್ರಾರಂಭಿಸಬಹುದು. ರಿಕ್ಷಾ ಮತ್ತು ಟ್ಯಾಕ್ಸಿಯಲ್ಲಿ ಚಾಲಕ ಬಿಟ್ಟು ಇಬ್ಬರು ಮಾತ್ರ ಪ್ರಯಾಣಿಕರು ಅವಕಾಶ, ಮ್ಯಾಕ್ಸಿಕ್ಯಾಬ್ ಚಾಲಕ ಬಿಟ್ಟು ಮೂರು ಮಂದಿ ಪ್ರಯಾಣಿಸಬಹುದು. ಇಲ್ಲಿಯೂ ಎಲ್ಲರೂ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ ಎಂದು ಅವರು ಸೂಚನೆ ನೀಡಿದರು.

ನಿರ್ಬಂಧ: ಮಾಲ್‍ಗಳು, ಚಿತ್ರಮಂದಿರಗಳು, ಜಿಮ್‍ಗಳನ್ನು ತೆರೆಯಲು ಮೇ 31ರ ವರೆಗೆ ಅವಕಾಶವಿಲ್ಲ. ಉಳಿದಂತೆ ಹೊಟೇಲ್‍ಗಳನ್ನು ತೆರೆಯಬಹುದು. ಆದರೆ, ಕಡ್ಡಾಯವಾಗಿ ಪಾರ್ಸಲ್ ನೀಡಬೇಕು. ಕ್ರೀಡೆಗೆ ಅವಕಾಶ, ಚಿನ್ನ-ಬೆಳ್ಳಿ ಆಭರಣ ಮಳಿಗೆ, ಸಲೂನ್(ಕ್ಷೌರದ ಅಂಗಡಿ)ಗಳು ಸೇರಿದಂತೆ ಇತರೆ ಎಲ್ಲ ಅಂಗಡಿಗಳನ್ನು ಪ್ರಾರಂಭಿಸಬಹುದು ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು.

ಹೊರ ರಾಜ್ಯದಿಂದ ಬರುವವರಿಗೆ ಸಾಂಸ್ಥಿಕ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗುವುದು. ಅನಿವಾರ್ಯ ಪರಿಸ್ಥಿತಿ ಇದ್ದರೆ ಮಾತ್ರ ಅವರಿಗೆ ಪ್ರವೇಶ ನೀಡಲಾಗುವುದು. ಹೋಮ್ ಕ್ವಾರಂಟೈನ್‍ಗೆ ಆದ್ಯತೆ ನೀಡಲಾಗುವುದು ಎಂದ ಅವರು, ರೈಲ್ವೆ ರಾಜ್ಯದೊಳಗೆ ಸಂಚಾರಕ್ಕೆ ಅವಕಾಶವಿದೆ. ಆದರೆ, ಯಾವುದೇ ಕಾರಣಕ್ಕೂ ಹೊರ ರಾಜ್ಯಕ್ಕೆ ಸಂಚಾರವಿಲ್ಲ ಎಂದರು.

ಬೆಂಗಳೂರು ನಗರದ ಪ್ರತಿಷ್ಟಿತ ಲಾಲ್‍ಬಾಗ್, ಕಬ್ಬನ್ ಪಾರ್ಕ್ ಸೇರಿದಂತೆ ಕಂಟೈನ್ಮೆಂಟ್ ಝೋನ್‍ಗಳನ್ನು ಹೊರತುಪಡಿಸಿ ಉಳಿದೆಡೆ ಎಲ್ಲ ಪಾರ್ಕ್(ಉದ್ಯಾನವನ)ಗಳನ್ನು ಬೆಳಗ್ಗೆ 7ರಿಂದ 9ಗಂಟೆ ಹಾಗೂ ಸಂಜೆ 5ರಿಂದ ರಾತ್ರಿ 7ಗಂಟೆಯ ವರೆಗೆ ಸಾರ್ವಜನಿಕರ ಪ್ರವೇಶಕ್ಕೆ ನಾಳೆ(ಮೇ 19)ಯಿಂದಲೇ ಅವಕಾಶ ಕಲ್ಪಿಸಲಾಗುವುದು ಎಂದು ಯಡಿಯೂರಪ್ಪ ಹೇಳಿದರು.

ಬೀದಿ ಬದಿಯ ವ್ಯಾಪಾರಿಗಳು ತಮ್ಮ ವ್ಯಾಪಾರ, ವಹಿವಾಟು ನಡೆಸಲು ಅವಕಾಶವಿದ್ದು, ಎಲ್ಲರೂ ಸರಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಒಂದು ವೇಳೆ ಯಾರಾದರೂ ನಿಯಮಗಳನ್ನು ಉಲ್ಲಂಘಿಸಿದರೆ ಅಂತಹವರ ವಿರುದ್ಧ ಸರಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಯಡಿಯೂರಪ್ಪ ಇದೇ ವೇಳೆ ಎಚ್ಚರಿಸಿದರು.

ಮೇ 31ರ ವರೆಗೆ ಕೇಂದ್ರ ಸರಕಾರದ ಮಾರ್ಗಸೂಚಿ ಅನ್ವಯ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶವಿದ್ದು, ಆ ಬಳಿಕ ಮತ್ತು ಅದಕ್ಕೂ ಮೊದಲೇ ಕೆಲ ಬದಲಾವಣೆಗಳನ್ನು ಮಾಡಬೇಕೆಂದು ಕಂಡುಬಂದರೆ ಬದಲಾವಣೆ ಮಾಡಲಾಗುವುದು. ಕೊರೋನ ಸೋಂಕು ತಡೆಗಟ್ಟಲು ಜನರು ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ಸರಕಾರದೊಂದಿಗೆ ಸಹಕರಿಸಬೇಕು ಎಂದು ಯಡಿಯೂರಪ್ಪ ಮನವಿ ಮಾಡಿದರು.

ರವಿವಾರ ಸಂಪೂರ್ಣ ಲಾಕ್‍ಡೌನ್: ರವಿವಾರ ಯಾವುದೇ ಚಟುವಟಿಕೆಗಳು ಇರುವುದಿಲ್ಲ. ಹೀಗಾಗಿ ಸಂಪೂರ್ಣ ಲಾಕ್‍ಡೌನ್ ಮಾಡಲಾಗುವುದು. ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದ ಯಾವುದೇ ರೀತಿಯ ಚಟುವಟಿಕೆಗಳಿಗೂ ಅವಕಾಶವಿಲ್ಲ. ಆ ದಿನ ಜನ ಸಂಚಾರವನ್ನೂ ಸಂಪೂರ್ಣ ನಿರ್ಬಂಧಿಸಲಾಗುವುದು ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು.

ದರ ಏರಿಕೆ ಇಲ್ಲ: `ಕೆಎಸ್ಸಾರ್ಟಿಸಿ, ಬಿಎಂಟಿಸಿ ಸೇರಿದಂತೆ ಸಾರಿಗೆ ಸಂಚಾರ ಪಾರಂಭಿಸಿದರೆ ಸಂಸ್ಥೆಗಳಿಗೆ ನಷ್ಟವಾಗಲಿದೆ ಎಂಬುದು ಗೊತ್ತಿದೆ. ಆದರೂ, ಯಾವುದೇ ಕಾರಣಕ್ಕೂ ಸದ್ಯಕ್ಕೆ ಬಸ್ ಪ್ರಯಾಣ ದರ ಏರಿಕೆ ಮಾಡುವ ಆಲೋಚನೆ ಸರಕಾರಕ್ಕಿಲ್ಲ. ಆ ನಷ್ಟವನ್ನು ರಾಜ್ಯ ಸರಕಾರವೇ ಭರಿಸಲಿದೆ. ಜನಸಾಮಾನ್ಯರ ಆರೋಗ್ಯ ರಕ್ಷಣೆ ನಮಗೆ ಮುಖ್ಯ' ಎಂದು ಯಡಿಯೂರಪ್ಪ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

ಮಂದಿರ ಮಸೀದಿ ಚರ್ಚ್‍ಗಿಲ್ಲ ಅವಕಾಶ: ದೇವಸ್ಥಾನ, ಮಸೀದಿ ಮತ್ತು ಪ್ರಾರ್ಥನಾ ಮಂದಿರಗಳನ್ನು ಮೇ 31ರ ವರೆಗೆ ತೆರೆಯಲು ಅವಕಾಶವಿಲ್ಲ. ಆ ನಂತರ ಕೇಂದ್ರ ಸರಕಾರದ ಮಾರ್ಗಸೂಚಿಯನ್ನಾದರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಮದುವೆ ಸಮಾರಂಭಕ್ಕೆ ಅವಕಾಶವಿದೆ. ಆದರೆ, ಕೇವಲ 50 ಜನರಷ್ಟು ಪಾಲ್ಗೊಳ್ಳಬೇಕೆಂಬ ನಿರ್ಬಂಧ ಹೇರಲಾಗಿದೆ ಎಂದು ಯಡಿಯೂರಪ್ಪ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News