×
Ad

ಕೊರೋನ ಹೋಗಲಾಡಿಸಲು ಲಾಕ್‌ಡೌನ್ ಉಲ್ಲಂಘಿಸಿ ದೇವಿಯ ಆರಾಧನೆ !

Update: 2020-05-18 15:37 IST

ಬೆಂಗಳೂರು, ಮೇ 18: ಕೊರೋನ ವೈರಸ್ ಸೋಂಕು ಹೋಗಲಾಡಿಸಲು ಇಲ್ಲಿನ ರಾಮನಗರ ಜಿಲ್ಲೆ, ಕನಕಪುರ ತಾಲೂಕಿನ ಕೋಡಿಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಕೊಳಗೊಂಡನಹಳ್ಳಿಯಲ್ಲಿ ಲಾಕ್‌ಡೌನ್ ಉಲ್ಲಂಘಿಸಿ 500 ಕ್ಕೂ ಹೆಚ್ಚು ಜನರು ಸೇರಿ ಗ್ರಾಮದ ಮಾರಮ್ಮದೇವಿಯ ಆರಾಧನೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಅರ್ಚಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಕೊಳಗೊಂಡನಹಳ್ಳಿ ಗ್ರಾಮದ ಮಾರಮ್ಮನ ಗುಡಿಯ ಅರ್ಚಕ ಚಿಕ್ಕಮರಿಗೌಡನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದೇ ವೇಳೆ ಕೊರೋನ ರೋಗವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಿದ್ದು, ಇಂತಹ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಕೇಂದ್ರ ಸ್ಥಾನದಲ್ಲಿ ಕರ್ತವ್ಯ ನಿರ್ವಹಿಸುವಲ್ಲಿ ವಿಫಲವಾಗಿರುವ ಕನಕಪುರ ತಾಲೂಕಿನ ಬನ್ನಿಮುಕ್ಕೋಡ್ಲು ಕಂದಾಯ ವೃತ್ತದ ಗ್ರಾಮ ಲೆಕ್ಕಿಗ ಎನ್.ಸಿ. ಕಲ್ಮಟ್‌ಕರ್ ಅವರನ್ನು ಅಮಾನತ್ತು ಮಾಡಲಾಗಿದೆ.

ಏನಿದು ಪ್ರಕರಣ: ಮೇ 12ರಂದು ಗ್ರಾಮದಲ್ಲಿ ಲಾಕ್‌ಡೌನ್ ಉಲ್ಲಂಘಿಸಿ, ಕೊರೋನ ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದ ಯಾವುದೇ ಮುನ್ನಚ್ಚರಿಕೆ ಕೈಗೊಳ್ಳದೆ ಗ್ರಾಮದ 500ಕ್ಕೂ ಹೆಚ್ಚು ಮಂದಿ ಒಟ್ಟಿಗೆ ಸೇರಿ ಮಾರಮ್ಮ ದೇವಿಯ ಆರಾಧನೆ ನಡೆಸಲಾಗಿತ್ತು. ಬಹಳ ಹಿಂದಿನಿಂದಲೂ ಪ್ಲೇಗ್, ಕಾಲರಾ, ದಡಾರ ಸೇರಿದಂತೆ ಇನ್ನಿತರ ಯಾವುದೇ ಮಾರಕ ರೋಗಗಳು ಬಂದರೂ ಗ್ರಾಮದ ದೇವಿಯ ಆರಾಧನೆ ಮಾಡುವುದು ರೂಢಿಯಲ್ಲಿತ್ತು. ಗ್ರಾಮದ ದೇವಿ ಆರಾಧನೆ ಮಾಡದರೆ ರೋಗ ಮುಕ್ತವಾಗಲಿದೆ ಎಂಬುದು ಗ್ರಾಮಸ್ಥರು ನಂಬಿಕೆಯಾಗಿದೆ.

ಅದೇ ರೀತಿಯಲ್ಲಿ ಮೇ 12ರಂದು ಕೊರೋನ ತೊಲಗಿಸಲು ಗ್ರಾಮದ ಮಾರಮ್ಮ ದೇವಿ ಗುಡಿ ಮುಂಭಾಗದಲ್ಲಿ ಬೇವಿನ ಸೊಪ್ಪು ಹಿಡಿದು ಆರತಿ ಹೊತ್ತ ಮಹಿಳೆಯರು, ಮಕ್ಕಳು ಸೇರಿದಂತೆ ನೂರಾರು ಜನರು ಒಟ್ಟಿಗೆ ಸೇರಿ ದೇವಿಯ ಪೂಜೆಗೆ ಮಾಡಿದ್ದರು. ಈ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರಗೊಂಡ ಹಿನ್ನೆಲೆಯಲ್ಲಿ ಕೂಡಲೇ ಎಚ್ಚೆತ್ತ ರಾಮನಗರ ಜಿಲ್ಲಾಡಳಿತ ಕನಕಪುರ ತಹಶೀಲ್ದಾರ್ ಅವರಿಗೆ ಈ ಬಗ್ಗೆ ವರದಿ ನೀಡಲು ಸೂಚಿಸಿತ್ತು.

ಕೊಳಗೊಂಡನಹಳ್ಳಿ ರಾಮನಗರ ಜಿಲ್ಲೆಯ ಕನಕಪುರ ವ್ಯಾಪ್ತಿಗೆ ಸೇರಿದ್ದರೂ, ಈ ಗ್ರಾಮ ತಮಿಳುನಾಡು ಗಡಿಯ ದಿಂಡಿಗಲ್ ಸಮೀಪದಲ್ಲಿದ್ದು, ಕಾಡಾನೆಗಳ ಹಾವಳಿ ಇಲ್ಲಿ ಮಿತಿಮೀರಿದೆ. ಈ ಗ್ರಾಮಕ್ಕೆ ಸಂಜೆಯಾದರೆ ಹೋಗುವುದು ಕಷ್ಟಕರ. ಜಿಲ್ಲಾಧಿಕಾರಿ ಸೂಚನೆ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಭೇಟಿ ನೀಡಿದ ತಹಶೀಲ್ದಾರ್ ವರ್ಷಾ ಒಡೆಯರ್ ಹಾಗೂ ಕೋಡಿಹಳ್ಳಿ ಠಾಣೆ ಎಸ್ಸೈ ನಂಜುಂಡಸ್ವಾಮಿ ಮತ್ತು ಸಿಬ್ಬಂದಿ ನೀಡಿದ ವರದಿಯನ್ನು ಆಧರಿಸಿ,  ಕೊರೋನ ಸೋಂಕಿನ ಹಾವಳಿ ಸಂದರ್ಭದಲ್ಲಿ ಗ್ರಾಮ ದೇವಿಯ ಆರಾಧನೆಗೆ ಸುರಕ್ಷಿತ ಅಂತರ ಕಾಯ್ದುಕೊಳ್ಳದೆ, ಮಾಸ್ಕ್ ಧರಿಸದೆ, ಲಾಕ್‌ಡೌನ್ ಆದೇಶ ಉಲ್ಲಂಘಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಗ್ರಾಮಸ್ಥರ ಖಂಡನೆ: ದೇವಳದ ಅರ್ಚಕನ ವಿರುದ್ಧ ಪ್ರಕರಣ ದಾಖಲಿಸಿರುವುದು ಸರಿಯಲ್ಲ. ಕೊರೋನ ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಅಧಿಕಾರಿಗಳಾಗಲಿ ಅಥವಾ ಪೋಲೀಸರಾಗಲಿ ನಮಗೆ ಯಾವುದೇ ಮುನ್ಸೂಚನೆ ಅಥವಾ ಮುನ್ನಚ್ಚರಿಕೆಯನ್ನು ನೀಡಿಲ್ಲ. ಗ್ರಾಮದಲ್ಲಿ ದೇವಿ ಆರಾಧನೆ ಗೌಪ್ಯವಾಗಿ ಏನೂ ಮಾಡಿಲ್ಲ. ಮೊದಲೇ ದೇವಿಯ ಆರಾಧನೆ ತಡೆಯುವುದಕ್ಕೆ ಮುಂದಾಗದೆ, ಇದೀಗ ಗ್ರಾಮದ ಅರ್ಚಕನ ವಿರುದ್ಧ ದೂರು ದಾಖಲಿಸಿರುವುದು ಖಂಡನೀಯ ಎಂದು ಗ್ರಾಮಸ್ಥರು ಆಕ್ಷೇಪಿಸಿದ್ದಾರೆ.

ಗ್ರಾಮ ಪಂ. ಮಟ್ಟದಲ್ಲಿ ಕೊರೋನ ಸೋಂಕು ಸಮುದಾಯಕ್ಕೆ ಹರಡದಂತೆ ಜಾಗೃತಿ ಮೂಡಿಸಲು ಟಾಸ್ಕ್‌ಫೋರ್ಸ್ ರಚನೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಬನ್ನಿಮುಕ್ಕೋಡ್ಲು ಪಂಚಾಯಿತಿಯ ವ್ಯಾಪ್ತಿಗೆ ಬರುವ ಕೊಳಗೊಂಡನಹಳ್ಳಿ ಗ್ರಾಮದಲ್ಲಿ ಕೊರೋನ ಸೋಂಕಿನ ಬಗ್ಗೆ ಜನರಿಗೆ ಕನಿಷ್ಟ ಮಾಹಿತಿಯನ್ನೂ ನೀಡದೆ, ಇದೀಗ ಗ್ರಾಮಸ್ಥರ ವಿರುದ್ಧ ಕೇಸು ದಾಖಲಿಸಿರುವುದು ಮುಗ್ಧ ಜನರ ಬಲಿಪಶು ಮಾಡುವುದು ಎಷ್ಟು ಸರಿ ಎಂಬುದು ಗ್ರಾಮಸ್ಥರ ಪ್ರಶ್ನೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News