ರಮಾಝನ್ ಪ್ರಾರ್ಥನೆಗೆ ಅವಕಾಶ ಬೇಡ: ಸೈಯ್ಯದ್ ರೋಷನ್ ಅಬ್ಬಾಸ್ ಒತ್ತಾಯ

Update: 2020-05-18 16:46 GMT

ಬೆಂಗಳೂರು, ಮೇ 18: ರಮಾಝಾನ್ ಹಿನ್ನೆಲೆ ಈದ್ಗಾ ಮೈದಾನಕ್ಕೆ ತೆರಳಿ ಪ್ರಾರ್ಥನೆ ಮಾಡಲು ಅನುಮತಿ ನೀಡಬಾರದೆಂದು ಜೆಡಿಎಸ್ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಸೈಯ್ಯದ್ ರೋಷನ್ ಅಬ್ಬಾಸ್ ಒತ್ತಾಯ ಮಾಡಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್‍ನ ಹಿರಿಯ ನಾಯಕ ಸಿ.ಎಂ. ಇಬ್ರಾಹಿಂ ಅವರು ಈದ್ ಪ್ರಾರ್ಥನೆಗೆ ಅವಕಾಶ ಕೇಳಿರುವುದು ಅಚ್ಚರಿ ಮತ್ತು ದಿಗ್ಭ್ರಮೆ ಏಕಕಾಲಕ್ಕೆ ಉಂಟಾಗುತ್ತದೆ. ಹಿರಿಯ ನಾಯಕರಾಗಿ, ಸಮಾಜದ ಏಳಿಗೆ ಬಯಸುವ ವ್ಯಕ್ತಿಯಾಗಿ ಅವರು ಇಂತಹ ಪತ್ರ ಬರೆಯಬಾರದಿತ್ತು ಎಂದು ತಿಳಿಸಿದರು.

ಕೊರೋನ ಸೋಂಕಿನ ನೆಪವನ್ನಿಟ್ಟುಕೊಂಡು ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಕಣ್ಣಲ್ಲಿ ಮುಸ್ಲಿಮರು ಈಗಾಗಲೇ ಅವಮಾನ, ಅನುಮಾನದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಇದನ್ನು ಲೆಕ್ಕಿಸದೆ, ಇಬ್ರಾಹಿಂ ಅವರು ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಕೋರಿರುವುದು ಸರಿಯಲ್ಲ. ಅಲ್ಲದೆ, ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಮಾಡುವ ಸಂದರ್ಭ ಬಂದರೆ, ಅಲ್ಲಿ ವ್ಯಕ್ತಿಗತ ಅಂತರ ನಿಯಮ ಪಾಲಿಸುವುದು ಕಷ್ಟ ಎಂಬುದು ಎಲ್ಲ ಮುಸ್ಲಿಮರಿಗೆ ಗೊತ್ತಿರುವ ಸತ್ಯ ಎಂದು ನುಡಿದರು.

ಚಾಲಕರಿಗೆ ದಾಖಲೆ ಏಕೆ?: ಲಾಕ್‍ಡೌನ್ ಹಿನ್ನೆಲೆ ವಿಶೇಷ ಪ್ಯಾಕೇಜ್ ಘೋಷಿಸಿ ಟ್ಯಾಕ್ಸಿ ಮತ್ತು ಆಟೊ ಚಾಲಕರಿಗೆ ಹಣ ಬಿಡುಗಡೆ ಮಾಡಲಾಗಿದೆ. ಆದರೆ, ಇದಕ್ಕೆ ಕೆಲ ನಿಯಮ ಮತ್ತು ದಾಖಲೆ ಸಲ್ಲಿಕೆ ಕಡ್ಡಾಯಗೊಳಿಸಿದ ಪರಿಣಾಮ ಬಡ ಚಾಲಕರು ತೊಂದರೆಗೆ ಸಿಲುಕಿದ್ದಾರೆ. ಈ ಬಗ್ಗೆ ಸಾರಿಗೆ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದು ರೋಷನ್ ಅಬ್ಬಾಸ್  ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News