ತೆರೆದ ಟ್ರಕ್ ನಲ್ಲಿ ಕಾರ್ಮಿಕರ ಜೊತೆ ಟಾರ್ಪಾಲಿನ್ ನಲ್ಲಿ ಸುತ್ತಿದ ಮೃತದೇಹಗಳನ್ನು ಕಳುಹಿಸಿದ ಉತ್ತರ ಪ್ರದೇಶ!

Update: 2020-05-19 09:16 GMT

ಲಕ್ನೋ: ಶನಿವಾರ ಔರಯ್ಯ ಎಂಬಲ್ಲಿ ನಡೆದ ಭೀಕರ ಅಪಘಾತದಲ್ಲಿ ಗಾಯಾಳುಗಳಾಗಿರುವ ವಲಸಿಗ ಕಾರ್ಮಿಕರು ಟಾರ್ಪಾಲಿನ್‍ ನಲ್ಲಿ ಸುತ್ತಲಾಗಿದ್ದ ತಮ್ಮ ಸಹೋದ್ಯೋಗಿಗಳ ಕಳೇಬರಗಳನ್ನು ಉತ್ತರಪ್ರದೇಶದಲ್ಲಿ ತೆರೆದ ಟ್ರಕ್‍ ನಲ್ಲಿ ಸಾಗಿಸುತ್ತಿರುವ ದೃಶ್ಯಗಳು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರನ್ನು ಆಕ್ರೋಶಕ್ಕೀಡು ಮಾಡಿದೆ. ‘ಇದೊಂದು ಅಮಾನವೀಯ ಕೃತ್ಯ ಹಾಗೂ ಬದುಕಿರುವವರಿಗೆ ಹಾಗೂ ಸತ್ತವರಿಗೆ ಗೌರವವಿಲ್ಲದಂತಾಗಿದೆ’ ಎಂದು ಅವರು ಹೇಳಿದ್ದಾರೆ.

ಲಕ್ನೋದಿಂದ ಸುಮಾರು 200 ಕಿಮೀ ದೂರದ ಔರಯ್ಯ ಎಂಬಲ್ಲಿ ಶನಿವಾರ ಬೆಳಗ್ಗೆ ನಡೆದ ರಸ್ತೆ ಅಪಘಾತದಲ್ಲಿ ಈ ಕಾರ್ಮಿಕರು ಮೃತಪಟ್ಟಿದ್ದರು. ಅಪಘಾತದ ಗಾಯಾಳುಗಳು ಹಾಗೂ ಸತ್ತವರ ಕಳೇಬರಗಳನ್ನು ಹೊತ್ತ ಟ್ರಕ್‍ನ ಚಿತ್ರ ಮರುದಿನ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಭಾರೀ ಆಕ್ರೋಶ ಸೃಷ್ಟಿಸಿತ್ತು.

“ನಮ್ಮ ವಲಸಿಗ ಕಾರ್ಮಿಕರನ್ನು ಈ ರೀತಿ ಅಮಾನವೀಯವಾಗಿ ನಡೆಸಿಕೊಳ್ಳುವುದನ್ನು ತಪ್ಪಿಸಬಹುದಾಗಿತ್ತು. ಜಾರ್ಖಂಡ್ ಗಡಿ ತನಕ ಮೃತಪಟ್ಟವರ ಕಳೇಬರಗಳಿಗೆ ಸೂಕ್ತ ಸಾಗಾಟ ವ್ಯವಸ್ಥೆ ಕಲ್ಪಿಸುವಂತೆ ಉತ್ತರ ಪ್ರದೇಶ ಸರಕಾರ ಹಾಗೂ ನಿತೀಶ್ ಕುಮಾರ್ ಜಿ ಅವರ ಕಚೇರಿಯನ್ನು ಕೇಳಿಕೊಳ್ಳುತ್ತೇನೆ. ನಂತರ ಅವರನ್ನು ಹಾಗೂ ಕಳೇಬರಗಳನ್ನು ಬೊಕಾರೋದಲ್ಲಿನ ಅವರ ಮನೆಗಳಿಗೆ ಗೌರವಯುತವಾಗಿ ತಲುಪಿಸುವ ವ್ಯವಸ್ಥೆ ಮಾಡುತ್ತೇವೆ'' ಎಂದು ಸೊರೇನ್ ಟ್ವೀಟ್ ಮಾಡಿದ್ದರೆ.

ಸೊರೇನ್ ಅವರ ಅಪೀಲಿನ ಬೆನ್ನಿಗೇ ಪ್ರಯಾಗ್‍ ರಾಜ್ ಹೆದ್ದಾರಿಯಲ್ಲಿದ್ದ ಟ್ರಕ್ ‍ಗಳನ್ನು ತಡೆದು ಮೃತದೇಹಗಳನ್ನು ಅಂಬುಲೆನ್ಸ್‍ಗಳಲ್ಲಿ ಸಾಗಿಸಲಾಯಿತು.

ಔರಯ್ಯ ಎಂಬಲ್ಲಿ ಶನಿವಾರ ಮುಂಜಾನೆ 3.30ರ ಸುಮಾರಿಗೆ ಎರಡು ಟ್ರಕ್‍ಗಳ ನಡುವೆ ನಡೆದ ಅಪಘಾತದಲ್ಲಿ 26 ವಲಸಿಗ ಕಾರ್ಮಿಕರು ಮೃತಪಟ್ಟು 30ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಮೃತರಲ್ಲಿ 11 ಮಂದಿ ಜಾರ್ಖಂಡ್‍ ನವರಾಗಿದ್ದರೆ ಉಳಿದವರು ಪಶ್ಚಿಮ ಬಂಗಾಳದವರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News