ಯುಎಪಿಎಯಿಂದ ಪ್ರಜಾಪ್ರಭುತ್ವ ದುರ್ಬಲಗೊಳ್ಳಬಹುದೇ?

Update: 2020-05-19 18:52 GMT

ಪ್ರಜಾಪ್ರಭುತ್ವವು ದೇಶದಲ್ಲಿ ಸಾರ್ವಭೌಮ ಹಿತದೃಷ್ಟಿಯಿಂದ ಬಹುಮುಖ್ಯವಾದ ಜೀವಾಳವಾಗಿದೆ. ಇದು ಕೇವಲ ಪ್ರಭುತ್ವಕ್ಕೆ ಸಂಬಂಧಿಸಿದ ವಿಚಾರವಲ್ಲ. ಪ್ರಜೆಗಳ ದೃಷ್ಟಿಯಿಂದಲೂ ತುಲನಾತ್ಮಕವಾಗಿ ಬೆಸೆದುಕೊಂಡಿರುವ ಕೊಂಡಿಯಾಗಿದೆ. ಇಂತಹ ಸಮಚಿತ್ತವಾದ ಸೌಹಾರ್ದ ಪರಂಪರೆಯನ್ನು ಕೆಡವಲು ಕೋಮುವಾದಿ ಶಕ್ತಿಗಳು ಕಾನೂನನ್ನು ಬಳಸಿಕೊಳ್ಳುತ್ತಿವೆ ಮತ್ತು ಸಂವಿಧಾನದ ಆಶಯಗಳನ್ನು ದುರ್ಬಲಗೊಳಿಸುತ್ತಿವೆ. ಯುಎಪಿಎ ಕಾಯ್ದೆಯ ಮೂಲಕ ಗಟ್ಟಿಯಾಗುತ್ತಿರುವ ದನಿ ಅಡಗಿಸುವ ಕಾರ್ಯತಂತ್ರವೂ ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳನ್ನು ದಮನಿಸುವ ಕಾರ್ಯಸೂಚಿಯು ಪ್ರತ್ಯಕ್ಷ ದರ್ಶನದ ಮೂಲಕವೇ ನಡೆಯುತ್ತಿದೆ.

UAPA - unlowful activities ( prevention) act (ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ). ದೇಶದ ಸಮಗ್ರತೆ ಮತ್ತು ಹಿತವನ್ನಿಟ್ಟುಕೊಂಡು 1963ರಲ್ಲಿ ಈ ಕಾಯ್ದೆಯನ್ನು ಮಂಡಿಸಲಾಯಿತು. 1967ರಲ್ಲಿ ರಾಷ್ಟ್ರಪತಿ ಅಂಕಿತದ ಮೇರೆಗೆ ಸಂಪೂರ್ಣವಾಗಿ ಜಾರಿಗೆ ತರಲಾಯಿತು. ಅಂದಿನಿಂದಲೂ ಈ ಕಾಯ್ದೆಯನ್ನು ದೇಶದ ರಕ್ಷಣಾ ದೃಷ್ಟಿಯಿಂದ ಕಾಯ್ದುಕೊಂಡು ಬರಲಾಗುತ್ತಿದೆ. ಕಾಲಾನಂತರದಲ್ಲಿ 1972, 1986, 2004, 2008, 2012, 2019 ರವರೆಗೆ ಆರು ಸಲ ತಿದ್ದುಪಡಿ ತರಲಾಗಿದೆ. ಮುಂಬೈಯಲ್ಲಿ ನಡೆದ ಸ್ಫೋಟ ಮತ್ತು ಸಂಸತ್ ಭವನದ ಮೇಲಿನ ದಾಳಿ ಸೇರಿದಂತೆ ಹಲವು ಕಾರಣಗಳಿಗೆ ಈ ಕಾಯ್ದೆ ತಿದ್ದುಪಡಿಯಾಗುತ್ತಲೇ ಬಂದಿದೆ. ಯುಎಪಿಎ ಕಾಯ್ದೆಯು ಜಾರಿಗೆ ಬಂದ ನಂತರದಿಂದ ಈ ತನಕವೂ ನಾನಾ ಕಾರಣಗಳಿಗೆ ಸಾಕಷ್ಟು ಜನರನ್ನು ಬಂಧಿಸಿದ್ದಾರೆ.

2007ರಲ್ಲಿ ಅರುಣ್ ಪೆರೇರಾ, ವರ್ಣನ್ ಗೋನ್ಸಾಲಿಸ್, ವೈದ್ಯ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತರಾದ ಬಿನಾಯಕ್ ಸೇನ್, ಕಮ್ಯುನಿಷ್ಟ್ ಪಾರ್ಟಿ ಆಫ್ ಇಂಡಿಯಾ(ಮಾವೋವಾದಿ)ದ ಗೌರ್ ಚಕ್ರವರ್ತಿ ಹಾಗೂ ಐಎಸ್‌ಐಎಲ್ ಅನ್ನು ಟ್ವಿಟರ್ ಖಾತೆಯಲ್ಲಿ ಬೆಂಬಲಿಸಿದ ಆರೋಪದಲ್ಲಿ ಮೆಹದಿ ಮಸ್ರೂರ್ ಬಿಸ್ವಾಸ್ ಅವರನ್ನೊಳಗೊಂಡಂತೆ ಬಂಧಿಸಲಾಗಿತ್ತು. 2009ರಲ್ಲಿ ಭಾರತೀಯ ಮಾವೋವಾದಿ ಎಂದು ಆರೋಪಿಸಿ ಕೋಬಾದ್ ಘಾಂಡಿ ಅವರನ್ನು ಸೇರಿದಂತೆ ಈ ಕಾಯ್ದೆಯ ಅಡಿ ಬಂಧಿಸಲಾಗಿತ್ತು. ಇತ್ತೀಚೆಗೆ 2018 ರಲ್ಲಿ ಬುಡಕಟ್ಟು ಹಕ್ಕುಗಳ ಕಾರ್ಯಕರ್ತ ಮಹೇಶ್ ರೌತ್ ಮತ್ತು ಸುಧಾ ಭಾರದ್ವಾಜ್, ಪ್ರಾಧ್ಯಾಪಕ ಸೋಮ್ ಸೇನ್, ಸಂಶೋಧನಾ ವಿದ್ವಾಂಸ ರೋನಾ ವಿಲ್ಸನ್, ದಲಿತ ಹಕ್ಕುಗಳ ಕಾರ್ಯಕರ್ತ ಸುಧೀರ್ ಧವಾಲೆ ಮತ್ತು ಸುರೇಂದ್ರ ಗ್ಯಾಡ್ಲಿಂಗ್, ಕವಿ ವರವರರಾವ್ ಹಾಗೂ ಪತ್ರಕರ್ತರಾದ ಗೌತಮ್ ನವ್ಲಾಖಾ ಅವರನ್ನು ಸೇರಿದಂತೆ ಯುಎಪಿಎ ಕಾಯ್ದೆಯ ವ್ಯಾಪ್ತಿಗೆ ತರಲಾಗಿದೆ. ಹಿಂದೆ ಭಾರತ ಸಂವಿಧಾನ ಜಾರಿಯಾಗುವ ಮುನ್ನ ಬ್ರಿಟಿಷ್ ಆಧಿಪತ್ಯದಲ್ಲಿದ್ದಾಗಲೂ ಇಂತಹ ಕರಾಳ ಕಾನೂನುಗಳನ್ನು ತರುತ್ತಿದ್ದರು. ಬ್ರಿಟಿಷರು ಸಾಮ್ರಾಜ್ಯ ವಿಸ್ತರಣೆಗಾಗಿ ದೇಸಿ ರಾಜರ ವಿರುದ್ಧ ಯುದ್ಧ ಹೂಡುತ್ತಿದ್ದರು.

ಅಂತಹ ಸಂದರ್ಭದಲ್ಲಿ ಯುದ್ಧ ಹೂಡುವ ದೇಸಿ ರಾಜರಿಗೆ ಆಹಾರ ಸಾಮಗ್ರಿಗಳು ಪ್ರಮುಖವಾಗಿ ಬೇಕಾಗಿತ್ತು. ಆಯಾ ಪ್ರದೇಶದ ಬುಡಕಟ್ಟು ಜನಾಂಗಗಳು ಸ್ಥಳೀಯ ದೇಸಿ ರಾಜರಿಗೆ ಎತ್ತಿನ ಬಂಡಿಗಳ ಮೂಲಕ ಆಹಾರ ಸಾಮಗ್ರಿ ಸಾಗಿಸುತ್ತಿದ್ದರು. ಇದನ್ನು ತಡೆಯುವುದೇ ಬ್ರಿಟಿಷರ ಬಹುದೊಡ್ಡ ಸಾಹಸವಾಗಿತ್ತು. ಆಹಾರ ಸಾಮಗ್ರಿಗಳು ಪೂರೈಕೆಯಾಗದಿದ್ದರೆ ದೇಸಿ ರಾಜರು ಯುದ್ಧದಲ್ಲಿ ಸೋಲುವುದು ಅನಿವಾರ್ಯ ಎಂಬ ಅರಿವು ಅವರಲ್ಲಿತ್ತು. ಆದರೂ ಬ್ರಿಟಿಷರಿಗೆ ಹೆದರದೆ ಬುಡಕಟ್ಟು ಜನಾಂಗಗಳು ಕಾಡು ಹಾದಿಯ ಮಾರ್ಗಗಳಲ್ಲಿ ದವಸ ಧಾನ್ಯಗಳನ್ನು ದೇಸಿ ಸಂಸ್ಥಾನಗಳಿಗೆ ತಲುಪಿಸುತ್ತಿದ್ದರು. ಇದನ್ನು ತಿಳಿದ ಬ್ರಿಟಿಷರು ಕ್ರಿಮಿನಲ್ ಟ್ರೈಬ್ಸ್ ಎಂಬ ಕಾಯ್ದೆಯನ್ನು ತಂದು ಬಹುತೇಕ ಬುಡಕಟ್ಟು ಜನರನ್ನು ಜೈಲಿಗಟ್ಟುತ್ತಿದ್ದರು. ಇವರನ್ನು ಅಪರಾಧಿಕ ಬುಡಕಟ್ಟು ಜನಾಂಗಗಳೆಂದು ಕರೆಯುತ್ತಿದ್ದರು. ಆನಂತರ ಇದೇ ಬ್ರಿಟಿಷರು ರೌಲತ್ ಕಾಯ್ದೆಯನ್ನು ಜಾರಿಗೆ ತಂದರು. ಈ ಕಾಯ್ದೆಯ ಮೂಲಕ ಅಂದಿನ ಸ್ವಾತಂತ್ರ್ಯ ಹೋರಾಟಗಾರರನ್ನು ಬಂಧಿಸುವುದರ ಕುತಂತ್ರವಿತ್ತು. ರೌಲತ್ ಕಾಯ್ದೆಯ ಉದ್ದೇಶ ಯಾರೂ ಶಸ್ತ್ರಾಸ್ತ್ರಗಳನ್ನು ಹೊಂದುವಂತಿಲ್ಲ ಎಂಬುದಾಗಿತ್ತು. ಅಂದು ಯಾರಾದರು ಶಸ್ತ್ರಾಸ್ತ್ರಗಳನ್ನು ಈ ಕಾಯ್ದೆಯ ವಿರುದ್ಧವಾಗಿ ಇಟ್ಟುಕೊಂಡರೆ ಅಂತಹವರನ್ನು ರೌಲತ್ ಕಾಯ್ದೆಯ ಅಡಿ ಬಂಧಿಸಲಾಗುತ್ತಿತ್ತು.

ಈ ಕಾಯ್ದೆಯ ಪ್ರಕಾರ ದಾಳಿಕೋರರು, ಹಿಂಸಾ ಘಾತುಕರನ್ನು ಸದೆಬಡಿಯುವುದು ಸರಕಾರದ ಉದ್ದೇಶವಾಗಿರಲಿಲ್ಲ. ಈ ಕಾನೂನಿನ ಅಡಿಯಲ್ಲಿ ಸ್ವಾತಂತ್ರ ಹೋರಾಟಗಾರರನ್ನು ಬಂಧಿಸುವುದು ಬ್ರಿಟಿಷ್ ಸರಕಾರದ ಮೂಲ ಉದ್ದೇಶವಾಗಿತ್ತು. ಇಂತಹ ಕಾನೂನು ಕಾಯ್ದೆಗಳು ಜನಶಕ್ತಿಯನ್ನು ಧಮನಿಸುವಲ್ಲಿ ಯಶಸ್ವಿಯಾಗಿವೆ. ಆಳುವ ವರ್ಗಗಳು ಪ್ರಶ್ನಾತೀತ ಸರಕಾರವನ್ನು ರೂಪಿಸಲು ಸರ್ವಾಧಿಕಾರ ನಿಯಂತ್ರಣ ಹೇರಲು ಸಾಮ್ರಾಜ್ಯಶಾಹಿ ಶಕ್ತಿಗಳು ತಮಗಿಷ್ಟವಾದ ಕಾನೂನನ್ನು ರೂಪಿಸಿವೆ ಮತ್ತು ಇರುವ ಕಾನೂನುಗಳನ್ನೇ ದುರುಪಯೋಗ ಮಾಡಿಕೊಂಡಿವೆ. ಇಂತಹ ದುರ್ಬಳಕೆಯ ಸಾಧ್ಯತೆಗಳು ನರೇಂದ್ರ ಮೋದಿ ಸರಕಾರದಲ್ಲಿಯೂ ಇಣುಕಿ ನೋಡುತ್ತಿದೆ. 1967ರಲ್ಲಿ ಜಾರಿಗೆ ಬಂದಿರುವ ಯುಎಪಿಎ ಕಾಯ್ದೆಯನ್ನು 2019 ರಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ತಿದ್ದುಪಡಿ ಮಾಡಿತು. ಹಳೆಯ ಕಾಯ್ದೆ ಹೇಳುತ್ತಿದ್ದ ಬಹುತೇಕ ಅಂಶಗಳು ಇವರು ತಂದ ತಿದ್ದುಪಡಿಯಲ್ಲಿ ಬದಲಾದವು. ದೇಶದ ಎಲ್ಲಾ ಜನರ ಜೀವ ರಕ್ಷಣೆ ಸರಕಾರದ್ದೇ ಆಗಿರುತ್ತದೆ. ಈ ನಿಟ್ಟಿನಲ್ಲಿ ದೇಶದೊಡನೆ ಯುದ್ಧ ಸಾರುವ ಸಂಘಟನೆಗಳನ್ನು ಭಯೋತ್ಪಾದನಾ ಸಂಘಟನೆ ಎಂದು ಸಚಿವಾಲಯವು ಘೋಷಿಸಬಹುದಿತ್ತು.

ಅಂತಹವರ ಮೇಲೆ ನಿರ್ಧಾಕ್ಷಿಣ್ಯವಾಗಿ ಈ ಕಾಯ್ದೆಯ ಅಡಿಯಲ್ಲಿ ಬಂಧಿಸಬಹುದಿತ್ತು. ಆದರೆ 2019 ರ ತಿದ್ದುಪಡಿಯ ನಂತರ ಅದರ ಸ್ವರೂಪ ಬದಲಾಗಿದೆ. ಸಂಘಟನೆಯನ್ನು ಮಾತ್ರ ಭಯೋತ್ಪಾದಕರು ಎಂದು ಘೋಷಿಸುತ್ತಿದ್ದ ಕಾಯ್ದೆ ಇಂದು ವ್ಯಕ್ತಿಯನ್ನು ಕೂಡ ಭಯೋತ್ಪಾದಕ ಎಂದು ಘೋಷಿಸುವ ಅರ್ಹತೆಯನ್ನು ಪಡೆದುಕೊಂಡಿದೆ. ಒಬ್ಬ ವ್ಯಕ್ತಿಯನ್ನು ಕೂಡ ಅನುಮಾನಾಸ್ಪದವಾಗಿಯೂ ಬಂಧಿಸಲು ಈ ಕಾಯ್ದೆಯಲ್ಲಿ ಅವಕಾಶವಿದೆ. ಇದನ್ನು ಪ್ರಭುತ್ವವು ದುರ್ಬಳಕೆ ಮಾಡಿಕೊಳ್ಳುವ ಅಪಾಯಗಳು ಕೂಡ ಇವೆ. ಕಾಯ್ದೆ ಅನುಷ್ಠಾನಕ್ಕೆ ಬಂದ ನಂತರ ಈ ದೇಶದ ಕೆಲವು ಮಂದಿಗಳನ್ನು ಬೇಕೆಂದೇ ಬಲಿಪಶುಗಳನ್ನಾಗಿ ಮಾಡಿರುವುದು ಕೂಡ ನಾವು ಈಗಾಗಲೇ ಮನಗಂಡಿದ್ದೇವೆ. ಇದು ಹೀಗೇ ಮುಂದುವರಿದಿದ್ದೇ ಆದಲ್ಲಿ ಇದರ ಪರಿಣಾಮ ಎಷ್ಟು ಭೀಕರವಾಗಿರುತ್ತದೆ ಎಂಬ ಪ್ರಜ್ಞೆಯು ಕೂಡ ಎಲ್ಲರನ್ನೂ ಕಾಡುತ್ತಿವೆ. ಕಾಶ್ಮೀರದ ಪತ್ರಕರ್ತೆ ಮಸ್ರತ್ ಝಹ್ರಾ ಎಂಬ ಮಹಿಳೆಯ ಮೇಲೆ ಯುಎಪಿಎ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. 2019 ರಲ್ಲಿ ಈ ಕಾಯ್ದೆಯ ತಿದ್ದುಪಡಿಯ ನಂತರ ಜರುಗಿದ ಮೊದಲ ಪ್ರಕರಣ ಇದಾಗಿದೆ. ಈ ಪತ್ರಕರ್ತೆ ಫೋಟೊ ಜರ್ನಲಿಸ್ಟ್ ಆಗಿದ್ದು, ಈಕೆಯ ಛಾಯಾಚಿತ್ರ ಮತ್ತು ವರದಿಗಳು ಪ್ರತಿಷ್ಟಿತ ಪತ್ರಿಕೆಗಳಾದ ವಾಶಿಂಗ್ಟನ್ ಪೋಸ್ಟ್, ಅಲ್ ಜಝೀರ, ಕಾರವಾನ್ ಗಳಲ್ಲಿ ಪ್ರಕಟಗೊಳ್ಳುತ್ತವೆ.

ಕ್ರಿಮಿನಲ್ ಉದ್ದೇಶದಿಂದ ಹಾಗೂ ಶಾಂತಿ ಕದಡುವ ರೀತಿಯ ಅಪರಾಧಿಕ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸುತ್ತಿದ್ದಾಳೆ ಮತ್ತು ಯುವಜನತೆಯನ್ನು ಪ್ರಚೋದಿಸುತ್ತಿದ್ದಾಳೆ ಎಂಬ ಆರೋಪದಡಿಯಲ್ಲಿ ಈಕೆಯ ಮೇಲೆ ಯುಎಪಿಎ ಕಾಯ್ದೆಯನ್ನು ಅಂಟಿಸಲಾಗಿದೆ. ಕಾಶ್ಮೀರದ ಪತ್ರಕರ್ತೆಯನ್ನು ಈ ಕಾಯ್ದೆಯ ಅಡಿಯಲ್ಲಿ ತಂದ ನಂತರ ಅಸ್ಸಾಮಿನ ಯುವ ರೈತ ಮುಖಂಡ ಅಖಿಲ್ ಗೊಗೊಯ್ ಅವರನ್ನು ಇದೇ ಯುಎಪಿಎ ಬಾಗಿಲಿಗೆ ತಂದಿಡಲಾಯಿತು. ಎನ್‌ಆರ್‌ಸಿ ಮತ್ತು ಸಿಎಎ ವಿರೋಧಿಸಿ ದೊಡ್ಡ ಮಟ್ಟದ ಚಳವಳಿಯೇ ನಡೆಯುತಿತ್ತು. ಪ್ರತಿ ರಾಜ್ಯದಲ್ಲೂ ಹೋರಾಟಗಾರರು ಇದನ್ನು ವಿರೋಧಿಸುತ್ತಿದ್ದರು. ಅದೇ ರೀತಿ ಅಸ್ಸಾಮಿನಲ್ಲಿಯೂ ರೈತ ಮುಖಂಡ ಅಖಿಲ್ ಗೊಗೊಯ್ ರಾಜ್ಯವ್ಯಾಪಿ ಹೋರಾಟ ನಡೆಸುತ್ತಿದ್ದ ವೇಳೆಯಲ್ಲಿ ಅವರನ್ನು ಬಂಧಿಸಲಾಯಿತು. ಕಾನೂನು ಸುವ್ಯವಸ್ಥೆಗೆ ಭಂಗ ಹಾಗೂ ಕಾನೂನು ಬಾಹಿರ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆಂದು ಇವರ ಮೇಲೆ ಯುಎಪಿಎ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಯಿತು. ಅದೇ ಸಂದರ್ಭದಲ್ಲಿ ದೇಶದ ಹಲವು ವಿಶ್ವವಿದ್ಯಾನಿಲಗಳಲ್ಲಿ ಸಿಎಎ ಮತ್ತು ಎನ್‌ಆರ್‌ಸಿ ವಿರೋಧಿಸಿ ಬಹುದೊಡ್ಡ ಪ್ರತಿರೋಧ ಕಾಣಿಸಿತು. ದಿಲ್ಲಿಯ ಜಾಮಿಯ ವಿಶ್ವವಿದ್ಯಾನಿಲಯದ ಸಂಶೋಧನಾ ವಿದ್ಯಾರ್ಥಿನಿಯಾದ ಸಪೂರ ಝರ್ಗಾರ್ ಅವರು ಅಂದು ಹೋರಾಟದ ಮುಂಚೂಣಿಲ್ಲಿದ್ದರು.

ಅವರ ಪ್ರತಿಭಟನೆಯನ್ನು ಹತ್ತಿಕ್ಕಲೆಂದೇ ಪೊಲೀಸರು ಯುಎಪಿಎ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿ ಬಂಧಿಸಿದ್ದಾರೆ. ಮೂರು ತಿಂಗಳ ಗರ್ಭಿಣಿಯಾಗಿದ್ದರೂ ಆಕೆಯನ್ನು ತಿಹಾರ್ ಜೈಲಿಗೆ ತಳ್ಳಲಾಗಿದೆ. ಜೈಲಿಗೆ ಹಾಕುವ ಮುನ್ನವೇ ಆಕೆ ಗರ್ಭಿಣಿ ಎಂದು ಗೊತ್ತಿದ್ದರೂ ಇಂತಹ ಹೀನ ಕೃತ್ಯವನ್ನು ಪ್ರಭುತ್ವ ಮಾಡಿದೆ. ಇವರ ನಂತರ ಯುಎಪಿಎ ಕಾಯ್ದೆ ಅಡಿಯಲ್ಲಿ ಬಂಧಿಸಿದ್ದು ಈ ದೇಶದ ಪ್ರಮುಖ ಚಿಂತಕರಾದ ಆನಂದ್ ತೇಲ್ತುಂಬ್ಡೆ ಅವರನ್ನು. ಎಪ್ರಿಲ್ 14 ರಂದು ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ, ಅದೇ ದಿನ ಅಂಬೇಡ್ಕರ್ ಅವರ ಮೊಮ್ಮಗಳ ಗಂಡನಾಗಿರುವ ಆನಂದ್ ತೇಲ್ತುಂಬ್ಡೆ ಅವರನ್ನು ಬಂಧಿಸಲಾಯಿತು. ಈ ದೇಶದ ಸಾಮಾಜಿಕ ವ್ಯವಸ್ಥೆ, ಆರ್ಥಿಕ ಅಸಮಾನತೆ, ರಾಜಕೀಯ ಬಿಕ್ಕಟ್ಟುಗಳ ಬಗೆ ಮಾತನಾಡುತ್ತ, ಅದರ ಜೊತೆಗೆ ಇಲ್ಲಿನ ತಳಸಮುದಾಯಗಳ ಬಗ್ಗೆ 30ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ ಚಿಂತಕರ ಮೇಲೆ ಭೀಮ ಕೋರೆಗಾಂವ್ ಗಲಭೆಯ ನೆಪವೊಡ್ಡಿ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ ಅಡಿಯಲ್ಲಿ ಬಂಧಿಸಿರುವುದರ ಹಿಂದೆ ಬಹುದೊಡ್ಡ ಷಡ್ಯಂತ್ರವೇ ಅಡಗಿದೆ. ಕಾಂಗ್ರೆಸ್ ಸುದೀರ್ಘವಾಗಿ ಈ ದೇಶವನ್ನು 60 ವರ್ಷಗಳ ಆಳ್ವಿಕೆ ಮಾಡಿದೆ. ಅವರ ನಿರಂತರವಾದ ಆಳ್ವಿಕೆಯಲ್ಲಿ 6 ಜನರನ್ನು ಯುಎಪಿಎ ಕಾಯ್ದೆ ಅಡಿ ಬಂಧಿಸಲಾಯಿತು. ಆದರೆ ಬಿಜೆಪಿಯ ಏಳು ವರ್ಷಗಳ ಆಡಳಿತದಲ್ಲಿ ತಿದ್ದುಪಡಿಗೂ ಮುನ್ನ 8 ಮಂದಿಯನ್ನು, ತಿದ್ದುಪಡಿ ತಂದ ನಂತರ 4 ಜನರ ಮೇಲೆ ಅಂದರೆ ಒಟ್ಟು 12 ಜನರ ಮೇಲೆ ಯುಎಪಿಎ ಕಾಯ್ದೆಯನ್ನು ತರಲಾಗಿದೆ.

ದೇಶವನ್ನು ಸುಭಧ್ರವಾಗಿಟ್ಟುಕೊಳ್ಳಲು ಕಾಯ್ದೆಗಳು ಅತ್ಯಂತ ಅವಶ್ಯಕವಾಗಿ ಬೇಕು. ಆದರೆ ಕಾಯ್ದೆಯ ನೆಪದಲ್ಲಿ ಹೋರಾಟಗಾರರು ಮತ್ತು ಬರಹಗಾರರನ್ನು ಹತ್ತಿಕ್ಕಲು ಕಾಯ್ದೆ ಮತ್ತು ಕಾನೂನುಗಳು ಬಳಕೆಯಾಗುವುದು ಪ್ರಜಾಪ್ರಭುತ್ವಕ್ಕೆ ಮಾಡುವ ಅಪಚಾರ. ಕಾಯ್ದೆಯನ್ನು ತಿದ್ದುಪಡಿ ಮಾಡುವ ಮೂಲಕ ಚಿಂತಕರನ್ನು ಅನುಮಾನದ ಆಧಾರದ ಮೇಲೆ ಬಂಧಿಸುವ ಕಾಯ್ದೆಯು ಅತ್ಯಂತ ಕರಾಳವಾಗಿದೆ. ದೇಶದಲ್ಲಿ ಸರ್ವಾಧಿಕಾರ ಪ್ರಭುತ್ವ ಹೆಣೆಯುವ ಅಪಾಯದ ಮಾರ್ಗ ಮತ್ತು ಜನವಿರೋಧಿ ನೀತಿ ನಿಯಮಗಳನ್ನು ಪ್ರಶ್ನಿಸುವ ದೊಡ್ಡ ಮಟ್ಟದ ಬುದ್ಧಿಜೀವಿ ವರ್ಗವನ್ನು ಜೈಲಿಗಟ್ಟಲು ಈ ಕಾಯ್ದೆ ದುರುಪಯೋಗವಾಗುವ ಲಕ್ಷಣಗಳು ಗೋಚರಿಸುತ್ತಿವೆ.

ಕೋಮುವಾದಿ ಮತ್ತು ಬಂಡವಾಳಶಾಹಿಗಳ ವಿರುದ್ಧ ಪುಟಿದೇಳುವ ದನಿಯನ್ನು ಅಡಗಿಸಲು ನಮ್ಮ ಸರಕಾರಗಳು ಈ ಕಾಯ್ದೆಯನ್ನು ಕಾಪಿಟ್ಟುಕೊಂಡು ಪೋಷಿಸುತ್ತಿವೆ. ದೇಶದ ಸುರಕ್ಷತಾ ದೃಷ್ಟಿಯಿಂದ ತಿದ್ದುಪಡಿ ಮಾಡಿರುವ ಯುಎಪಿಎ ಕಾಯ್ದೆಯು ನಿಜವಾಗಿಯೂ ದೇಶವನ್ನು ರಕ್ಷಿಸುವ ಮತ್ತು ಸಮಾಜಘಾತುಕ ಶಕ್ತಿಗಳನ್ನು ಅಡಗಿಸಲಷ್ಟೇ ಬಳಕೆಯಾಗಲಿ. ಆದರೆ ಇದು ಈ ನೆಲದ ಜನಪರ ಚಿಂತಕರನ್ನು ಹತ್ತಿಕ್ಕಲು ವಿದ್ಯಾರ್ಥಿಗಳು, ಹೋರಾಟಗಾರರು ಮತ್ತು ಬರಹಗಾರರ ಬಂಧನಕ್ಕೆ ದುರ್ಬಳಕೆಯಾಗುತ್ತಿರುವುದು ದುರಂತ. ಇದೇ ರೀತಿ ಕಾಯ್ದೆಯು ಚಿಂತಕರನ್ನು ಬಂಧಿಸುವಲ್ಲಿ ಬಳಕೆಯಾದರೆ ಪ್ರಜಾಪ್ರಭುತ್ವವನ್ನು ಅತ್ಯಂತ ದುರ್ಬಲ ಸ್ಥಿತಿಗೆ ತೆಗೆದುಕೊಂಡು ಹೋಗುವುದರಲ್ಲಿ ಯಾವುದೇ ಅನುಮಾನವಿಲ್ಲ.

Writer - ಹಾರೋಹಳ್ಳಿ ರವೀಂದ್ರ

contributor

Editor - ಹಾರೋಹಳ್ಳಿ ರವೀಂದ್ರ

contributor

Similar News