ಮೇ 20ರಂದು ಸರಕಾರದ ವಿರುದ್ಧ ಕಾಂಗ್ರೆಸ್ ಸಾಂಕೇತಿಕ ಪ್ರತಿಭಟನೆ

Update: 2020-05-19 17:18 GMT

ಬೆಂಗಳೂರು, ಮೇ 19: ಎಪಿಎಂಸಿ ಕಾಯಿದೆಗೆ ತಿದ್ದುಪಡಿ, ಗ್ರಾಮ ಪಂಚಾಯತ್ ಗಳಿಗೆ ನಾಮನಿರ್ದೇಶನ, ಕಾರ್ಮಿಕ ಕಾಯಿದೆಗೆ ತಿದ್ದುಪಡಿ ಸೇರಿದಂತೆ ರಾಜ್ಯ ಸರಕಾರದ ನಿರ್ಧಾರಗಳನ್ನು ವಿರೋಧಿಸಿ ಮೇ 20ರಂದು ಸಾಂಕೇತಿಕ ಪ್ರತಿಭಟನೆ ನಡೆಸಲು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಮಂಗಳವಾರ ನಗರದ ಕಾಂಗ್ರೆಸ್ ಸಭೆಯಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆ ತೀರ್ಮಾನಿಸಿದೆ.

ವಿಧಾನಸೌಧ, ವಿಕಾಸಸೌಧ ಮಧ್ಯೆ ಇರುವ ಮಹಾತ್ಮ ಗಾಂಧಿ ಪ್ರತಿಮೆ ಮುಂಭಾಗ ಬೆಳಗ್ಗೆ 11 ಗಂಟೆಗೆ ಪ್ರತಿಭಟನೆ ನಡೆಯಲಿದೆ. ಇದಾದ ಬಳಿಕ ಮುಂದಿನ ದಿನಗಳಲ್ಲಿ ರಾಜ್ಯ ಚುನಾವಣಾ ಆಯುಕ್ತರು, ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ದಿನಾಂಕ ನಿಗದಿ ಮಾಡಲು ನಿರ್ಧರಿಸಲಾಗಿದೆ.

ಕೊರೋನ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕೈಗೊಂಡಿರುವ ತಪ್ಪು ನಿರ್ಧಾರಗಳ ಬಗ್ಗೆಯೂ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಹೋರಾಟ ನಡೆಸುವ ನಿರ್ಣಯವನ್ನು ಶಾಸಕಾಂಗ ಪಕ್ಷದ ಸಭೆಯಲ್ಲಿ ಕೈಗೊಳ್ಳಲಾಗಿದೆ.

ಶಾಸಕಾಂಗ ಪಕ್ಷದ ಸಭೆಯಲ್ಲಿ ಆರಂಭಿಕ ಮಾತುಗಳನ್ನಾಡಿದ ಸಿದ್ದರಾಮಯ್ಯ, ಪ್ರಧಾನಿ ಏಕಮುಖವಾಗಿ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ. ಯಾರ ಜೊತೆಗೂ ಅವರು ಚರ್ಚೆ ಮಾಡುವುದಿಲ್ಲ. ಪ್ರತಿಪಕ್ಷಗಳ ಜೊತೆ ಅವರು ಚರ್ಚೆ ನಡೆಸುವುದಿಲ್ಲ. ಹೀಗಾಗಿ ಕೊರೋನ ಸೋಂಕು ವ್ಯಾಪಕವಾಗಿದ್ದು, ದೇಶದ ಆರ್ಥಿಕ ಪರಿಸ್ಥಿತಿ ಪಾತಾಳ ತಲುಪಿದೆ ಎಂದರು.

ನಿರುದ್ಯೋಗ ಪ್ರಮಾಣ ಭಾರಿ ಹೆಚ್ಚಾಗಿದೆ. ಸಂಘಟಿತ, ಅಸಂಘಟಿತ ವಲಯದ ಕಾರ್ಮಿಕರು, ರೈತರು ಕಾಯಕ ಸಮುದಾಯ ಸಂಕಷ್ಟಕ್ಕೆ ಸಿಲುಕಿದೆ. ಮುಂಜಾಗ್ರತಾ ಕ್ರಮಗಳ ಕೊರತೆ ಇದಕ್ಕೆಲ್ಲ ಕಾರಣ. ವಿಮಾನಗಳ ಹಾರಾಟ ಮೊದಲೇ ರದ್ದು ಮಾಡಿದ್ದರೆ ಸೋಂಕು ಭಾರಿ ಪ್ರಮಾಣದಲ್ಲಿ ಹಬ್ಬುತ್ತಿರಲಿಲ್ಲ. ಈಗ ತಪ್ಪು ಮುಚ್ವಿಕೊಳ್ಳಲು ಬೇರೆಯವರ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆದಿದೆ ಎಂದು ಅವರು ಹೇಳಿದರು.

ನರೇಗಾಗೆ ಹೆಚ್ಚಿನ ಹಣ ನೀಡುವುದಾಗಿ ಹೇಳಿರುವುದನ್ನು ಹೊರತುಪಡಿಸಿದರೆ ಕೇಂದ್ರ ಸರಕಾರದ ಪ್ಯಾಕೇಜ್‍ನಿಂದ ಏನೂ ಅನುಕೂಲವಿಲ್ಲ. ಆರ್ಥಿಕ ತಜ್ಞರೆ ಈ ಮಾತು ಹೇಳುತ್ತಿದ್ದಾರೆ. ನಾವು ನೀಡಿದ ಸಲಹೆ, ಸೂಚನೆಗಳಿಗೆ, ಮಂಡಿಸಿದ ಬೇಡಿಕೆಗಳಿಗೆ ರಾಜ್ಯ ಸರಕಾರವೂ ಸ್ಪಂದಿಸಿಲ್ಲ ಎಂದ ಅವರು, ಹಣ್ಣು, ತರಕಾರಿ, ದಿನಸಿ ಕಿಟ್‍ಗಳನ್ನು ವಿತರಿಸುವ ಮೂಲಕ ಕಷ್ಟ ಕಾಲದಲ್ಲಿ ಜನರಿಗೆ ಸಹಾಯ ಮಾಡಿದ ಪಕ್ಷದ ಎಲ್ಲ ಶಾಸಕರಿಗೆ ಅಭಿನಂದನೆಗಳು ಎಂದರು.

ಕೊರೋನ ಹಿನ್ನೆಲೆಯಲ್ಲಿ ಉಂಟಾಗಿರುವ ಪರಿಸ್ಥಿತಿ ನಿಭಾಯಿಸುವಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಪ್ಯಾಕೇಜ್‍ಗಳನ್ನು ಘೋಷಣೆ ಮಾಡಿದ್ದರೂ ಈವರೆಗೆ ಯಾರಿಗೂ ಹಣ ಬಂದಿಲ್ಲ. ಪ್ಯಾಕೇಜ್ ಹೆಸರಲ್ಲಿ ಪ್ರಧಾನಿ ಹಾಗೂ ಸಿಎಂ ಬುರುಡೆ ಬಿಡುತ್ತಿದ್ದಾರೆ. ಜನರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡುತ್ತಿದ್ದಾರೆ. ಈ ಎಲ್ಲ ವಿಚಾರಗಳನ್ನು ಶಾಸಕರು ಜನತೆಯ ಮುಂದೆ ಇಡಬೇಕು ಎಂದು ಸಿದ್ದರಾಮಯ್ಯ ಕರೆ ನೀಡಿದರು.

ಪಂಚಾಯತ್ ಗಳಿಗೆ ಚುನಾವಣೆ ನಡೆಸದೆ ಬಿಜೆಪಿ ಕಾರ್ಯಕರ್ತರನ್ನು ಸದಸ್ಯರನ್ನಾಗಿ ನಾಮನಿರ್ದೇಶನ ಮಾಡುವ ಹುನ್ನಾರ ನಡೆದಿದೆ. ಈಗಿರುವ ಸದಸ್ಯರನ್ನು ಮುಂದುವರಿಸಿ ಆರು ತಿಂಗಳ ಬಳಿಕ ಚುನಾವಣೆ ನಡೆಸುವಂತೆ ಸರಕಾರವನ್ನು ಒತ್ತಾಯಿಸಬೇಕು ಎಂದು ಅವರು ಹೇಳಿದರು.

ರಾಜ್ಯದಲ್ಲಿ ತುಘಲಕ್ ದರ್ಬಾರ್ ನಡೆಯುತ್ತಿದೆ. ಭ್ರಷ್ಟಾಚಾರ ನಡೆದಿದೆ. ನಮ್ಮ ಸರಕಾರವನ್ನು ಹತ್ತು ಪರ್ಸೆಂಟ್ ಸರಕಾರ ಎಂದು ಮೋದಿ ಟೀಕಿಸಿದ್ದರು. ಯಡಿಯೂರಪ್ಪ ಸರಕಾರ ಎಷ್ಟು ಪರ್ಸೆಂಟ್ ಸರಕಾರ ಎಂಬುದನ್ನು ಮೋದಿ ಹೇಳಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.

ಎಪಿಎಂಸಿ ಕಾಯ್ದೆಗೆ ತಿದ್ದುಪಡಿ, ಪಂಚಾಯತ್ ಗಳಿಗೆ ನಾಮನಿರ್ದೇಶನ, ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ಸೇರಿದಂತೆ ಸರಕಾರದ ವಿವಿಧ ಕ್ರಮಗಳನ್ನು ಖಂಡಿಸಿ ಹೋರಾಟ ಕೈಗೆತ್ತಿಕೊಳ್ಳಲಾಗುವುದು. ಹೋರಾಟ ನಾಳೆಯಿಂದಲೆ ಆರಂಭ. ನಾಳೆ ಸರಕಾರದ ವಿರುದ್ಧ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಲಾಗುವುದು. ಬಳಿಕ ತಾಲೂಕು, ಜಿಲ್ಲಾ ಮಟ್ಟದಲ್ಲಿ ಹೋರಾಟ ಕೈಗೆತ್ತಿಕೊಳ್ಳಲಾಗುವುದು ಎಂದು ಅವರು ಹೇಳಿದರು.

ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ, ಸಲೀಮ್ ಅಹ್ಮದ್, ವಿಧಾನಪರಿಷತ್ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News