ಮಧುಮೇಹ: ಪಾದದ ಆರೈಕೆಗಾಗಿ ಡಯಾಬಿಟಿಕ್ ಶೂಗಳು

Update: 2020-05-19 17:42 GMT

ನಾವು ಸರಿಯಾದ ಶೂಗಳನ್ನು ಆಯ್ಕೆ ಮಾಡಿಕೊಳ್ಳ್ಳುವುದು ಅಗತ್ಯವಾಗಿದೆ. ಇಲ್ಲದಿದ್ದರೆ ಹಿಮ್ಮಡಿಗಳು ಊದಿಕೊಳ್ಳಬಹುದು ಅಥವಾ ಯಾತನಾದಾಯಕ ಹುಣ್ಣುಗಳಾಗಬಹುದು. ಮಧುಮೇಹಿಗಳಂತೂ ತಮ್ಮ ಶೂಗಳನ್ನು ಖರೀದಿ ಮಾಡಬೇಕಿದ್ದರೆ ವಿಶೇಷ ಕಾಳಜಿಯನ್ನು ವಹಿಸಬೇಕಾಗುತ್ತದೆ. ತಪ್ಪು ಅಳತೆಯ ಶೂಗಳು ಪಾದದ ಹುಣ್ಣುಗಳು,ಸೋಂಕುಗಳಂತಹ ಹಲವಾರು ಸಮಸ್ಯೆಗಳಿಗೆ ಕಾರಣವಾಗುತ್ತವೆ. ಅಷ್ಟೇ ಏಕೆ,ಪಾದದ ಮೂಳೆಗಳ ಮುರಿತವನ್ನೂ ಉಂಟು ಮಾಡಬಹುದು.

ವಿಶ್ವದಲ್ಲಿಯ ಶೇ.25ರಷ್ಟು ಜನರು ಮಾತ್ರ ಸರಿಯಾದ ಅಳತೆಯ ಶೂಗಳನ್ನು ಧರಿಸುತ್ತಾರೆ ಎಂದು ಅಧ್ಯಯನವೊಂದು ವರದಿ ಮಾಡಿದೆ. ಸಮೀಕ್ಷೆಯೊಂದರಂತೆ ಪ್ರತಿ 10 ಮಧುಮೇಹಿಗಳ ಪೈಕಿ ಆರು ಜನರು ತಪ್ಪು ಅಳತೆಯ ಶೂಗಳನ್ನು ಧರಿಸುತ್ತಾರೆ ಮತ್ತು ಇದರಿಂದಾಗಿ ನರರೋಗ ಮತ್ತು ಬಾಹ್ಯ ರಕ್ತನಾಳಗಳ ರೋಗದಿಂದ ಬಳಲುತ್ತಿರುತ್ತಾರೆ. ಪಾದಗಳ ನರಗಳು ನಿಶ್ಚೇಷ್ಟಿತಗೊಳ್ಳುತ್ತವೆ ಮತ್ತು ಇದರಿಂದಾಗಿ ಪಾದಗಳಿಗೆ ಬಿಸಿ,ತಂಪು ಅಥವಾ ಗಾಯದ ಸಂವೇದನೆಯಾಗುವುದಿಲ್ಲ ಎನ್ನುವುದು ನಿಮಗೆ ಗೊತ್ತೇ? ಇದು ಬಳಿಕ ಸೋಂಕಿನಂತೆ ಶರೀರದ ಇತರ ಭಾಗಕ್ಕೂ ವ್ಯಾಪಿಸಬಹುದು. ಬಾಹ್ಯ ನರರೋಗದಿಂದಾಗಿ ನಮ್ಮ ರಕ್ತನಾಳಗಳು ಕುಗ್ಗತೊಡಗುತ್ತವೆ ಮತ್ತು ಇದರಿಂದಾಗಿ ರಕ್ತ ಸಂಚಾರವು ಕಡಿಮೆಯಾಗುತ್ತದೆ. ಈ ಕಾರಣದಿಂದಾಗಿ ಮಧುಮೇಹಿಗೆ ಗಾಯವಾದಾಗ ಬೇಗನೇ ಮಾಯುವುದಿಲ್ಲ.

 ಮಧುಮೇಹಿಗಳು ತಮ್ಮ ಸೂಕ್ಷ್ಮ ಪಾದಗಳ ಹೆಚ್ಚುವರಿ ರಕ್ಷಣೆ ಮತ್ತು ಹಿತಕ್ಕಾಗಿ ಡಯಾಬಿಟಿಕ್ ಶೂಗಳನ್ನು ಧರಿಸಬೇಕು. ಇಂತಹ ಶೂಗಳು ಹೆಚ್ಚುವರಿ ಆಳವನ್ನು ಹೊಂದಿದ್ದು,ಇವು ಪಾದಗಳ ಮೇಲೆ ಒತ್ತಡವನ್ನು ಹೇರುವುದಿಲ್ಲ. ಇವು ಒಂದು ವಿಧದ ವೈದ್ಯಕೀಯ ಶೂಗಳಾಗಿದ್ದು,ಸಕ್ಕರೆ ಶೂಗಳು ಎಂದೂ ಕರೆಯಲ್ಪಡುತ್ತವೆ. ಇಂತಹ ಸಕ್ಕರೆ ಶೂಗಳ ಕೆಲವು ವಿಶಿಷ್ಟ ಅಂಶಗಳ ಕುರಿತು ಮಾಹಿತಿ ಇಲ್ಲಿದೆ....

ಶೂ ಒಳಗಿನಿಂದ ಮೃದುವಾಗಿರಬೇಕು: ಯಾವುದೇ ಮಧುಮೇಹ ರೋಗಿಗೆ ಶೂ ಖರೀದಿ ಸಮಯದಲ್ಲಿ ಅದು ಒಳಗಡೆಯಿಂದ ಮೃದುವಾಗಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ಅಲ್ಲಿ ಪಾದಗಳನ್ನು ಚುಚ್ಚುವ ಯಾವುದೇ ಹೊಲಿಗೆಗಳಿವೆಯೇ ಎನ್ನುವುದನ್ನು ಪರಿಶೀಲಿಸಬೇಕು.

ಹಿಗ್ಗುವಂತಿರಬೇಕು: ಶೂ ಮೇಲ್ಭಾಗವು ಅತಿ ಹೆಚ್ಚಿನ ಪ್ರಮಾಣದಲ್ಲಿ ಹಿಗ್ಗುವಂತಿರಬೇಕು. ಇದು ಬೆರಳುಗಳಿಗೆ ಹೆಚ್ಚುವರಿ ರಕ್ಷಣೆ ಮತ್ತು ಆರಾಮವನ್ನು ನೀಡುತ್ತದೆ.

ಹೆಚ್ಚುವರಿ ಆಳವುಳ್ಳ ವಿನ್ಯಾಸ:ಸಡಿಲವಾದ ಶೂಗಳು ಯಾವಾಗಲೂ ಆರಾಮದಾಯಕವಾಗಿರುತ್ತವೆ. ಇದಕ್ಕಾಗಿ ಶೂಗಳು ಹೆಚ್ಚುವರಿ ಆಳವನ್ನು ಹೊಂದಿರಬೇಕು.

ಡೀಪ್ ಟೋ-ಬಾಕ್ಸ್: ಅತ್ಯುತ್ತಮ ಡಯಾಬಿಟಿಕ್ ಶೂಗಳು ಕಾಲ್ಬೆರಳುಗಳನ್ನು ಚಾಚಲು ವಿಫುಲ ಸ್ಥಳಾವಕಾಶವನ್ನು ಹೊಂದಿರುತ್ತವೆ,ಇದರಿಂದಾಗಿ ಪಾದದ ಮೇಲೆ ಹೆಚ್ಚು ಒತ್ತಡ ಬೀಳುವುದಿಲ್ಲ ಮತ್ತು ಅದು ಮುಕ್ತವಾಗಿರುತ್ತದೆ.

ಹೆಚ್ಚು ಅಗಲ: ಮಧುಮೇಹ ರೋಗಿಗಳು ಅಗಲವಾದ ಶೂಗಳನ್ನು ಧರಿಸಬೇಕು. ಇದರಿಂದಾಗಿ ಪಾದಗಳು ಪಾರ್ಶ್ವಗಳಲ್ಲಿ ಅದುಮಲ್ಪಡುವುದಿಲ್ಲ.

ಹಗುರವಾದ ಹಿಮ್ಮಡಿ: ಹಗುರವಾದ ಹಿಮ್ಮಡಿಗಳುಳ್ಳ ಶೂಗಳು ಪಾದದ ವೇಗವನ್ನು ಹೆಚ್ಚಿಸುತ್ತವೆ ಮತ್ತು ನಡಿಗೆಯು ಆರಾಮದಾಯಕವಾಗಿರುತ್ತದೆ.

                   ಮಧುಮೇಹ ಪಾದದ ಆರೈಕೆ

ಮಧುಮೇಹಿಗಳು ತಮ್ಮ ಪಾದಗಳ ಬಗ್ಗೆ ವಿಶೇಷ ಕಾಳಜಿಯನ್ನು ವಹಿಸಬೇಕಾಗುತ್ತದೆ. ಪಾದಗಳ ನೈರ್ಮಲ್ಯದ ಬಗ್ಗೆ ಮತ್ತು ಪಾದಗಳಿಗೆ ಗಾಯಗಳಾಗದಂತೆ ಎಚ್ಚರಿಕೆಯಿಂದಿರಬೇಕು.

ಮಧುಮೇಹಿಗಳು ತಮ್ಮ ಪಾದಗಳನ್ನು ಪ್ರತಿದಿನವೂ ಚೆನ್ನಾಗಿ ತೊಳೆದುಕೊಳ್ಳಬೇಕು. ಪಾದಗಳಲ್ಲ್ಲಿ ಗಾಯಗಳು ಅಥವಾ ಏನಾದರೂ ಬದಲಾವಣೆಗಳಾಗಿವೆೆಯೇ ಎನ್ನುವುದನ್ನು ತಿಳಿದುಕೊಳ್ಳಲು ಅವುಗಳನ್ನು ಪ್ರತಿದಿನವೂ ಪರೀಕ್ಷಿಸಬೇಕು. ಪಾದಗಳಲ್ಲಿ ರಕ್ತ ಸಂಚಾರ ಸರಿಯಾಗಿರುವಂತೆ ಅನುಕೂಲಕರ ಶೂಗಳನ್ನು ಮತ್ತು ಸಾಕ್ಸ್ ಧರಿಸಬೇಕು. ಕುಳಿತುಕೊಂಡಾಗ ಕಾಲುಗಳನ್ನು ಎತ್ತರಿಸಬೇಕು ಮತ್ತು ಆಗಾಗ್ಗೆ ಕಾಲ್ಬೆರಳುಗಳನ್ನು ಚಲಿಸುತ್ತಿರಬೇಕು. ಪಾದಗಳಿಗೆ ನಿಯಮಿತವಾಗಿ ಸಾಕಷ್ಟು ವ್ಯಾಯಾಮವನ್ನು ನೀಡಬೇಕು. ವೈದ್ಯರ ಬಳಿ ಆಗಾಗ್ಗೆ ಪಾದಗಳ ಪರೀಕ್ಷೆ ಮಾಡಿಸಿಕೊಳ್ಳಬೇಕು. ಎಲ್ಲಕ್ಕಿಂತ ಮುಖ್ಯವಾಗಿ ರಕ್ತದಲ್ಲಿ ಸಕ್ಕರೆ ಮಟ್ಟ ನಿಯಂತ್ರಣದಲ್ಲಿರುವಂತೆ ಕಾಳಜಿ ವಹಿಸಬೇಕು.

ಉಗುರುಗಳನ್ನು ಕತ್ತರಿಸುವಾಗ ಎಚ್ಚರಿಕೆಯಿರಲಿ:ಕಾಲ್ಬೆರಳುಗಳ ಉಗುರುಗಳನ್ನು ಆಗಾಗ್ಗೆ ಕತ್ತರಿಸುತ್ತ ಅವು ಚಿಕ್ಕದಾಗಿರುವಂತೆ ನೋಡಿಕೊಳ್ಳಬೇಕು. ಏಕೆಂದರೆ ಉಗುರಿಗೆ ಗಾಯವಾದರೆ ಅದು ಸೋಂಕಿಗೆ ಕಾರಣವಾಗುತ್ತದೆ.

ಅತಿಯಾದ ಬಿಸಿಯಿಂದ ಪಾದಗಳಿಗೆ ರಕ್ಷಣೆ: ಮಧುಮೇಹಿಗಳು ಅತಿಯಾದ ಉಷ್ಣತೆ ಅಥವಾ ತಂಪಿಗೆ ಒಡ್ಡಿಕೊಂಡರೆ ಅದು ಪಾದಗಳಿಗೆ ಹಾನಿಯನ್ನುಂಟು ಮಾಡುತ್ತದೆ.

 ಧೂಮ್ರಪಾನ ಬೇಡ: ಧೂಮ್ರಪಾನವು ರಕ್ತಸಂಚಾರದ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ ಮತ್ತು ಇದು ಮಧುಮೇಹಿಗಳಲ್ಲಿ ಯಾವುದೇ ಪಾದ ಸಮಸ್ಯೆಯನ್ನು ಇನ್ನಷ್ಟು ಹದಗೆಡುವಂತೆ ಮಾಡುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News