ಮಲೇರಿಯಾ ಮಾತ್ರೆಗಳಿಗೆ ಬದಲಾಗಿ ಭಾರತಕ್ಕೆ ವೆಂಟಿಲೇಟರ್ ನೀಡುತ್ತಿರುವುದಲ್ಲ: ಅಮೆರಿಕ

Update: 2020-05-19 18:08 GMT

ಹೊಸದಿಲ್ಲಿ, ಮೇ 19: ಭಾರತವು ಈ ಹಿಂದೆ ಹೈಡ್ರಾಕ್ಸಿಕ್ಲೊರೋಕ್ವಿನ್ ಮಾತ್ರೆಗಳನ್ನು ಪೂರೈಸಿದ್ದಕ್ಕೆ ಪ್ರತಿಯಾಗಿ ಆ ದೇಶಕ್ಕೆ ವೆಂಟಿಲೇಟರ್ ನೀಡಲಾಗುತ್ತಿಲ್ಲ. ಉಭಯ ದೇಶಗಳ ನಡುವಿನ ಸಹಭಾಗಿತ್ವದ ದ್ಯೋತಕವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ.

ಒಂದರ ಬದಲು ಮತ್ತೊಂದು ಎಂಬ ರೀತಿಯಲ್ಲಿ ಭಾರತಕ್ಕೆ ವೆಂಟಿಲೇಟರ್ ಕೊಡುಗೆ ನೀಡುತ್ತಿಲ್ಲ. ಇದು ಸಹಭಾಗಿತ್ವದ ಕ್ರಮವಾಗಿದೆ. ಈ ಹಂತದಲ್ಲಿ ಸಾಧ್ಯವಿರುವ ಮಟ್ಟಿಗೆ ಪರಸ್ಪರ ಸಹಕಾರ, ಸಹಭಾಗಿತ್ವದ ಅಗತ್ಯವಿದೆ. ಈ ಕಾರಣದಿಂದ ಅಮೆರಿಕವು , ತನ್ನ ಅಗತ್ಯಕ್ಕೆ ಸಾಕಷ್ಟು ಇರಿಸಿಕೊಂಡು ಅಗತ್ಯ ಇರುವ ದೇಶಗಳಿಗೆ ನೀಡಲಿದೆ ಎಂದು ಅಮೆರಿಕದ ಯುಎಸ್‌ಎಯ್ಡ್ ಪ್ರಭಾರಿ ನಿರ್ದೇಶಕರು ಹೇಳಿದ್ದಾರೆ.

ಯುನೈಟೆಡ್ ಸ್ಟೇಟ್ಸ್ ಏಜೆನ್ಸಿ ಫಾರ್ ಇಂಟರ್‌ನ್ಯಾಷನಲ್ ಡೆವಲಪ್‌ಮೆಂಟ್(ಯುಎಸ್‌ಎಯ್ಡ್) ಪ್ರಥಮ ಕಂತಿನಲ್ಲಿ ಭಾರತಕ್ಕೆ 50 ವೆಂಟಿಲೇಟರ್‌ಗಳನ್ನು ರವಾನಿಸಲಿದೆ. ಮುಂದಿನ ಹಂತದಲ್ಲಿ ಉಳಿದ 150 ವೆಂಟಿಲೇಟರ್‌ಗಳನ್ನು ಕಳುಹಿಸುತ್ತೇವೆ . ಸದ್ಯದ ಮಟ್ಟಿಗೆ ಇನ್ನಷ್ಟು ವೆಂಟಿಲೇಟರ್‌ಗಳನ್ನು ಕಳುಹಿಸಲು ನಿರ್ಧರಿಸಿಲ್ಲ ಎಂದವರು ಹೇಳಿದ್ದಾರೆ. ಕೊರೋನ ಸೋಂಕಿನ ವಿರುದ್ಧ ಹೋರಾಟಕ್ಕೆ ಇದುವರೆಗೆ ಭಾರತಕ್ಕೆ 5.9 ಮಿಲಿಯನ್ ಡಾಲರ್ ನೆರವನ್ನು ಅಮೆರಿಕ ನೀಡಿದೆ. ಭಾರತವು ಅಮೆರಿಕದಿಂದ ಕೊರೋನ ಪರೀಕ್ಷೆಯ ಕಿಟ್ ಆಮದು ಮಾಡಿಕೊಳ್ಳುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಭಾರತಕ್ಕೆ ಇತರ ಔಷಧಿಗಳ ಪೂರೈಕೆ ಪ್ರಕ್ರಿಯೆಯು ಭಾರತ-ಅಮೆರಿಕ ನಡುವಿನ ಲಸಿಕೆ ಯೋಜನೆಯಡಿ ನಡೆಯುತ್ತದೆ ಎಂದು ಹೇಳಿದರು.

ಕಳೆದ ತಿಂಗಳು theprint.inಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಅಮೆರಿಕದಲ್ಲಿ ಭಾರತದ ರಾಯಭಾರಿಯಾಗಿರುವ ತರಣ್‌ಜಿತ್ ಸಿಂಗ್ ಸಂಧು, ಭಾರತವು ಅಮೆರಿಕದಿಂದ ರ್ಯಾಪಿಡ್ ಆ್ಯಂಟಿಬಾಡಿ ಟೆಸ್ಟ್ ಕಿಟ್ ಹಾಗೂ ಆರ್‌ಟಿ-ಪಿಸಿಆರ್, ಆರ್‌ಎನ್‌ಎ ಮತ್ತಿತರ ವೈದ್ಯಕೀಯ ಉಪಕರಣಗಳನ್ನು ಆಮದು ಮಾಡಿಕೊಳ್ಳಲಿದೆ ಎಂದು ಹೇಳಿದ್ದರು.

ಭಾರತಕ್ಕೆ ಕೊರೋನ ವೈರಸ್ ಸೋಂಕಿನ ವಿರುದ್ಧದ ಸಮರದಲ್ಲಿ 75,000 ವೆಂಟಿಲೇಟರ್‌ಗಳ ಅಗತ್ಯವಿದೆ. ಭಾರತದ ಬಳಿ 19,398 ವೆಂಟಿಲೇಟರ್‌ಗಳಿದ್ದು 60,884 ವೆಂಟಿಲೇಟರ್‌ಗಳ ಪೂರೈಕೆಗೆ ಬೇಡಿಕೆ ಸಲ್ಲಿಸಲಾಗಿದೆ ಎಂದು ಸರಕಾರ ಈ ತಿಂಗಳ ಆರಂಭದಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News