ಪೆರಿಟೋನಿಯಲ್ ಕ್ಯಾನ್ಸರ್: ಈ ಅಪರೂಪದ ಕ್ಯಾನ್ಸರ್ ಬಗ್ಗೆ ನಿಮಗೆ ಗೊತ್ತಿರಲಿ

Update: 2020-05-20 12:49 GMT

ಕ್ಯಾನ್ಸರ್‌ನಲ್ಲಿ ನೂರಕ್ಕೂ ಅಧಿಕ ವಿಧಗಳಿವೆ. ನಮಗೆ ಸಾಮಾನ್ಯವಾಗಿ ರೋಗನಿರ್ಧಾರವಾಗುವ ಕೆಲವೇ ಕ್ಯಾನ್ಸರ್‌ಗಳ ಬಗ್ಗೆ ಗೊತ್ತು,ಆದರೆ ಜನಸಾಮಾನ್ಯರು ಹೆಸರು ಕೇಳಿಯೇ ಇರದ ಹಲವಾರು ಅಪರೂಪದ ಕ್ಯಾನ್ಸರ್ ರೋಗಗಳಿವೆ. ಪೆರಿಟೋನಿಯಲ್ ಕ್ಯಾನ್ಸರ್ ಇವುಗಳಲ್ಲಿ ಒಂದಾಗಿದೆ. ಇದು ಅತ್ಯಂತ ಅಪರೂಪವಾಗಿದ್ದರೂ ಇತರ ಕ್ಯಾನ್ಸರ್‌ಗಳಷ್ಟೇ ಮಾರಣಾಂತಿಕವಾಗಿದೆ.

ಏನಿದು ಪೆರಿಟೋನಿಯಲ್ ಕ್ಯಾನ್ಸರ್?

ಒಳಹೊಟ್ಟೆಯ ಭಿತ್ತಿಯನ್ನು ಆವರಿಸಿಕೊಂಡಿರುವ ತೆಳುವಾದ ಎಪಿಥೇಲಿಯಲ್ ಕೋಶಗಳ ಪದರದಲ್ಲಿ ಈ ಕ್ಯಾನ್ಸರ್ ಉಂಟಾಗುತ್ತದೆ. ಈ ಪದರವನ್ನು ‘ಪೆರಿಟೋನಿಯಂ’ಎಂದು ಕರೆಯಲಾಗುತ್ತದೆ,ಹೀಗಾಗಿ ಈ ರೋಗಕ್ಕೆ ಪೆರಿಟೋನಿಯಲ್ ಕ್ಯಾನ್ಸರ್ ಎಂಬ ಹೆಸರು ಬಂದಿದೆ. ಈ ಪದರವು ಹೊಟ್ಟೆಯೊಳಗಿನ ಸಣ್ಣ ಮತ್ತು ದೊಡ್ಡ ಕರುಳುಗಳು,ಮೂತ್ರಕೋಶ,ಗರ್ಭಾಶಯ ಮತ್ತು ಗುದನಾಳದಂತಹ ಅಂಗಾಂಗಗಳಿಗೆ ರಕ್ಷಣೆಯನ್ನು ಒದಗಿಸುತ್ತದೆ. ಇದು ಕೀಲೆಣ್ಣೆಯಂತಹ ದ್ರವವನ್ನು ಬಿಡುಗಡೆಗೊಳಿಸುತ್ತದೆ ಮತ್ತು ಈ ದ್ರವವು ಹೊಟ್ಟೆಯೊಳಗಿನ ಅಂಗಗಳ ಚಲನೆಗೆ ನೆರವಾಗುತ್ತದೆ. ಈ ಕ್ಯಾನ್ಸರ್‌ನ ಲಕ್ಷಣಗಳು ಆರಂಭದ ಹಂತಗಳಲ್ಲಿ ಹೆಚ್ಚಾಗಿ ಗಮನಕ್ಕೆ ಬರುವುದಿಲ್ಲ ಮತ್ತು ಪರಿಸ್ಥಿತಿಯು ತೀರ ಹದಗೆಟ್ಟು ರೋಗವು ಅಂತಿಮ ಹಂತದಲ್ಲಿದ್ದಾಗ ಮಾತ್ರ ಪತ್ತೆಯಾಗುತ್ತವೆ. ಹೀಗಾಗಿ ಪೆರಿಟೋನಿಯಂ ಕ್ಯಾನ್ಸರ್‌ಗೆ ತುತ್ತಾದ ರೋಗಿಗಳು ಬದುಕುಳಿಯುವ ಸಾಧ್ಯತೆ ತೀರ ಕಡಿಮೆಯಾಗಿರುತ್ತದೆ.

 ಪೆರಿಟೋನಿಯಲ್ ಕ್ಯಾನ್ಸರ್‌ನ ಲಕ್ಷಣಗಳು ಪೆರಿಟೋನಿಯಲ್ ಕ್ಯಾನ್ಸರ್‌ನ ಲಕ್ಷಣಗಳು ವಿಧ ಮತ್ತು ಹಂತಕ್ಕೆ ಅನುಗುಣವಾಗಿ ಬೇರೆ ಬೇರೆಯಾಗಿರುತ್ತವೆ. ಆರಂಭಿಕ ಹಂತದಲ್ಲಿ ರೋಗದ ಯಾವುದೇ ಹಂತಗಳು ಗೋಚರವಾಗದಿರುವುದು ಈ ಕ್ಯಾನ್ಸರ್‌ಗೆ ಸಂಬಂಧಿಸಿದ ಅತ್ಯಂತ ಕಳವಳಕಾರಿ ಅಂಶವಾಗಿದೆ. ಕೆಲವು ಪ್ರಕರಣಗಳಲ್ಲಿ ಕ್ಯಾನ್ಸರ್ ಅಂತಿಮ ಹಂತವನ್ನು ತಲುಪುವವರೆಗೆ ಲಕ್ಷಣಗಳು ಕಾಣಿಸಿಕೊಳ್ಳುವುದೇ ಇಲ್ಲ.

ಹೊಟ್ಟೆ ನೋವು,ಹೊಟ್ಟೆ ಉಬ್ಬರಿಸುವುದು,ಪೆಲ್ವಿಕ್ ಅಥವಾ ಶ್ರೋಣಿ ಭಾಗದಲ್ಲಿ ನೋವು,ಮೂತ್ರದಲ್ಲಿ ಬದಲಾವಣೆಗಳು,ದೊಡ್ಡಕರುಳಿನ ಚಲನವಲನದಲ್ಲಿ ಬದಲಾವಣೆಗಳು,ಯೋನಿಯಿಂದ ಸ್ರಾವ,ಅಜೀರ್ಣ,ಹೆಚ್ಚು ತಿನ್ನದಿದ್ದರೂ ಹೊಟ್ಟೆ ತುಂಬಿದಂತಿರುವುದು,ತೂಕದಲ್ಲಿ ದಿಢೀರ್ ಬದಲಾವಣೆಗಳು ಇವು ಪೆರಿಟೋನಿಯಲ್ ಕ್ಯಾನ್ಸರ್‌ನ ಸಂಭಾವ್ಯ ಲಕ್ಷಣಗಳಾಗಿವೆ.

ಕ್ಯಾನ್ಸರ್ ತೀವ್ರಗೊಳ್ಳುತ್ತಿರುವಂತೆ ಹೊಟ್ಟೆಯಲ್ಲಿ ದ್ರವ ಸಂಗ್ರಹಗೊಳ್ಳಲು ಆರಂಭವಾಗುತ್ತದೆ ಮತ್ತು ಇದು ಹೊಟ್ಟೆ ನೋವು,ಬಳಲಿಕೆ,ವಾಕರಿಕೆ ಅಥವಾ ವಾಂತಿ,ಉಸಿರುಗಟ್ಟುವಿಕೆಯಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಇದೇ ರೀತಿ ತೀವ್ರ ಹೊಟ್ಟೆನೋವು,ದೊಡ್ಡಕರುಳು ಅಥವಾ ಮೂತ್ರನಾಳದಲ್ಲಿ ತಡೆ,ಆಹಾರ ಅಥವಾ ಪಾನೀಯ ಸೇವಿಸಲು ಕಷ್ಟ,ವಾಂತಿ ಇವು ಕ್ಯಾನ್ಸರ್ ವೃದ್ಧಿಗೊಂಡ ನಂತರದ ಹಂತದಲ್ಲಿ ಕಾಣಿಸಿಕೊಳ್ಳುವ ಲಕ್ಷಣಗಳಾಗಿವೆ. ಪೆರಿಟೋನಿಯಲ್ ಕ್ಯಾನ್ಸರ್‌ಗೆ ಕಾರಣವಾಗುವ ಅಪಾಯದ ಅಂಶಗಳು

ಈ ಕ್ಯಾನ್ಸರ್ ಮಹಿಳೆಯರಲ್ಲಿ ಹೆಚ್ಚು ಸಾಮಾನ್ಯ,ಆದರೆ ಪುರುಷರನ್ನೂ ಇದು ಬಿಡುವುದಿಲ್ಲ. ವಯಸ್ಸು ಹೆಚ್ಚುತ್ತಿದ್ದಂತೆ ಪೆರಿಟೋನಿಯಲ್ ಕ್ಯಾನ್ಸರ್‌ಗೆ ಗುರಿಯಾಗುವ ಅಪಾಯವೂ ಹೆಚ್ಚುತ್ತ ಹೋಗುತ್ತದೆ. ಇಲ್ಲಿವೆ ಪೆರಿಟೋನಿಯಲ್ ಕ್ಯಾನ್ಸರ್‌ನ್ನುಂಟು ಮಾಡಬಲ್ಲ ಅಪಾಯದ ಅಂಶಗಳು:

ವಯಸ್ಸು: ಮಧ್ಯವಯಸ್ಕರು ಮತ್ತು ವಯಸ್ಸಾದ ವ್ಯಕ್ತಿಗಳು ಈ ಕ್ಯಾನ್ಸರ್‌ಗೆ ತುತ್ತಾಗುವ ಅಪಾಯ ಹೆಚ್ಚಾಗಿರುತ್ತದೆ

ಆನುವಂಶಿಕತೆ: ವ್ಯಕ್ತಿಯ ಕುಟುಂಬದಲ್ಲಿ ಯಾರಾದರೂ ಪೆರಿಟೋನಿಯಲ್ ಅಥವಾ ಒವೇರಿಯನ್(ಅಂಡಾಶಯ) ಕ್ಯಾನ್ಸರ್ ಹೊಂದಿದ ಇತಿಹಾಸವಿದ್ದರೆ ಅಂತಹ ವ್ಯಕ್ತಿಯೂ ಈ ಕ್ಯಾನ್ಸರ್‌ಗೆ ತುತ್ತಾಗುವ ಸಾಧ್ಯತೆ ಅತ್ಯಂತ ಹೆಚ್ಚು. ಅಂತಹವರು ಆಗಿಂದಾಗ್ಗೆ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳುವುದು ಒಳ್ಳೆಯದು.

ಎತ್ತರ ಮತ್ತು ತೂಕ: ಬೊಜ್ಜುದೇಹಿಗಳು ಮತ್ತು ಎತ್ತರವಾಗಿರುವ ವ್ಯಕ್ತಿಗಳು ಪೆರಿಟೋನಿಯಲ್ ಕ್ಯಾನ್ಸರ್‌ಗೆ ತುತ್ತಾಗುವ ಗರಿಷ್ಠ ಅಪಾಯವನ್ನು ಹೊಂದಿರುತ್ತಾರೆ.

ಹಾರ್ಮೋನ್ ಚಿಕಿತ್ಸೆ: ಋತುಬಂಧಗೊಂಡ ಬಳಿಕ ಹಾರ್ಮೋನ್ ಚಿಕಿತ್ಸೆಗೆ ಒಳಗಾಗುವ ಮಹಿಳೆಯರಿಗೆ ಈ ಕ್ಯಾನ್ಸರ್ ಉಂಟಾಗುವ ಸಾದ್ಯತೆಯಿರುತ್ತದೆ.

ಸಕಾಲದಲ್ಲಿ ರೋಗನಿರ್ಣಯ ಮುಖ್ಯ

ಈ ಅಪರೂಪದ ಕ್ಯಾನ್ಸರ್‌ನ ಲಕ್ಷಣಗಳು ಆರಂಭದಲ್ಲಿ ಗೋಚರಿಸುವುದಿಲ್ಲ ವಾದ್ದರಿಂದ ಈ ಹಂತದಲ್ಲಿ ರೋಗನಿರ್ಣಯವು ಕಠಿಣವಾಗುತ್ತದೆ. ಹೆಚ್ಚಿನ ಜನರಲ್ಲಿ ಅಂತಿಮ ಹಂತ ತಲುಪಿದಾಗ ಮಾತ್ರ ಲಕ್ಷಣಗಳು ಕಂಡು ಬರುತ್ತವೆ ಮತ್ತು ರೋಗಿಯು ಬದುಕುಳಿಯುವ ಸಾಧ್ಯತೆಯು ಕಡಿಮೆಯಾಗಿರುತ್ತದೆ. ಈ ಸ್ಥಿತಿಯಿಂದ ಪಾರಾಗಲು ಸಕಾಲದಲ್ಲಿ ರೋಗನಿರ್ಣಯವೊಂದೇ ದಾರಿಯಾಗಿರುತ್ತದೆ ಮತ್ತು ಅದಕ್ಕಾಗಿ ಜನರು ಶರೀರವೇನಾದರೂ ಈ ರೋಗದ ಸುಳಿವನ್ನು ನೀಡುತ್ತದೆಯೇ ಎನ್ನುವುದನ್ನು ಗಮನಿಸುತ್ತಿರಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News