ಪಾರ್ಶವಾಯು ಪೀಡಿತ ಅನಿವಾಸಿ ಕನ್ನಡಿಗನ ಕೈಹಿಡಿದ ಸೋಶಿಯಲ್ ಫೋರಮ್

Update: 2020-05-20 14:26 GMT

ಮಸ್ಕತ್ : ಕೋವಿಡ್ ಲಾಕ್ ಡೌನ್ ನಡುವೆ ಎಪ್ರಿಲ್ 12ರಂದು ತನ್ನ ಕಾರಿನಲ್ಲೇ ಪ್ರಜ್ಞಾಹೀನನಾಗಿ ಬಿದ್ದು ಆಸ್ಪತ್ರೆಗೆ ದಾಖಲಾದ ಬೆಂಗಳೂರು ಮೂಲದ 29ರ ಹರೆಯದ ಯುವಕ ಅಶ್ರಫ್ ಅಫಾಖ್ ರಿಗೆ ಪ್ರಜ್ಞೆ ಬಂದಾಗ ತನ್ನ ದೇಹದ ಒಂದು ಭಾಗದ ಸ್ವಾಧೀನ ಕಳೆದುಕೊಂಡಿದ್ದರು. ರಕ್ತದೊತ್ತಡ ಅಧಿಕಗೊಂಡು ಮೆದುಳಿನ ನರವೊಂದು ಘಾಸಿಗೊಂಡಿದ್ದರಿಂದ ಪ್ರಜ್ಞಾಹೀನ ಸ್ಥಿತಿಯಲ್ಲೇ ಕೆಲವು ದಿನಗಳ ಕಾಲ ಮಸ್ಕತ್ ನ ಕೌಲಾ ಅಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು.

ಒಮಾನ್ ನ ಮುಸನ್ನ ಎಂಬಲ್ಲಿ ಅಂಗಡಿಯೊಂದರಲ್ಲಿ ಸೇಲ್ಸ್‌ಮನ್ ಆಗಿ ಕೆಲಸ ಮಾಡುತ್ತಿದ್ದ ಅಶ್ರಫ್ ರ ಈ ಶೋಚನೀಯ ಪರಿಸ್ಥಿತಿಯ ಬಗ್ಗೆ  ಕುಟುಂಬ ಸಂಬಂಧಿ ಮುಹಮ್ಮದ್ ನಬೀಲ್ ಎಂಬವರು ಒಮಾನ್ ನ ಅನಿವಾಸಿ ಭಾರತೀಯರ ಸಾಮಾಜಿಕ ಸಂಘಟನೆಯಾಗಿರುವ ಸೋಶಿಯಲ್ ಫೋರಮ್ ನ ಗಮನಕ್ಕೆ ತಂದಿದ್ದರು. 

ವಿಷಯ ತಿಳಿದು ಆಸ್ಪತ್ರೆಗೆ ಧಾವಿಸಿ ಸಂಪೂರ್ಣ ಮಾಹಿತಿ ಕಲೆಹಾಕಿದ ಸೋಶಿಯಲ್ ಫೋರಮ್ ಒಮಾನ್ ನ ನಿಯೋಗವು ಅಶ್ರಫ್ ಗೆ ಹೆಚ್ಚಿನ ಚಿಕಿತ್ಸೆಗಾಗಿ ತವರಿಗೆ ಕಳುಹಿಸಿ ಕೊಡಬೇಕಾದ ಅನಿವಾರ್ಯತೆಯನ್ನು ಮನಗಂಡಿತು. ಭಾರತ ಸರಕಾರದ ವಂದೇ ಭಾರತ್ ಮಿಶನ್ ಭಾಗವಾಗಿ ವಿಶೇಷವಾಗಿ ಕಲ್ಪಿಸಲಾದ ವಿಮಾನದಲ್ಲಿ ಪ್ರಯಾಣಿಸಲು ಅನುಮತಿ ಕೋರಿ ಭಾರತದ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿತು. ಇದಕ್ಕೆ ಪೂರಕವಾಗಿ ಆಸ್ಪತ್ರೆಯ ಬಿಲ್ಲು ಪಾವತಿಸಲು ಬೇಕಾದ ಹಣಕಾಸಿನ ಮೂಲಕ್ಕೆ ಸಹಕರಿಸಿತು. ತೀವ್ರ ನಿಗಾ ಘಟಕ ಮತ್ತು ವಿಶೇಷ ಚಿಕಿತ್ಸೆಯ ಹಿನ್ನೆಲೆಯಲ್ಲಿ ಆಸ್ಪತ್ರೆಯ ಬಿಲ್ಲು 4 ಲಕ್ಷ ರೂ. ದಾಟಿತ್ತು. ಪ್ರಯಾಣಕ್ಕೆ ಬೇಕಾದ ಪ್ರಮಾಣಪತ್ರ, ಸಹಾಯಕ್ಕಾಗಿ ಸಹ ಪ್ರಯಾಣಿಕರೊಬ್ಬರನ್ನು ಸೋಶಿಯಲ್ ಫೋರಮ್ ಸಂಘಟಿಸಿತು. ಕೋವಿಡ್ -19 ನಡುವೆಯೂ ಪಾರ್ಶ್ವವಾಯುಪೀಡಿತರಾದ ಅಶ್ರಫ್ ನೊಂದಿಗೆ ಮುಹಮ್ಮದ್ ನಬೀಲ್ ಆಸ್ಪತ್ರೆಯಲ್ಲೇ ಉಳಿದು ಮಾನವೀಯತೆ ಮೆರೆದರು.

ತೀರಾ ಬಡಕುಟುಂಬದ ಆಧಾರ ಸ್ತಂಭವಾಗಿದ್ದ ಅಶ್ರಫ್ ರ ದೇಹದ ಒಂದು ಭಾಗವು ಈಗ ಸ್ತಬ್ಧಗೊಂಡಿದೆ. ಸುದೀರ್ಘ ಕಾಲದ ಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ. ತಂದೆ ಕಿಡ್ನಿ ಕಾಯಿಲೆಯಿಂದ ಬಳಲುತ್ತಿದ್ದು, ಮನೆಯವರನ್ನು ಸಾಕಿಸಲಹುವ ಜವಾಬ್ಧಾರಿ ವಹಿಸಿಕೊಂಡು ಒಮಾನ್ ಗೆ ಉದ್ಯೋಗಕ್ಕೆಂದು ಬಂದ ಯುವಕನ ಕನಸು ನುಚ್ಚುನೂರಾಗಿದೆ. ವೀಲ್ ಚೆಯರ್ ನಲ್ಲಿ ತವರಿಗೆ ಮರಳುತ್ತಿರುವ ಅಶ್ರಫ್ ಅಫಾಖ್ ಹಿಂದಿನಂತೆ ಗುಣಮುಖರಾಗಿ ಎದ್ದು ನಿಲ್ಲುವಂತಾಗಲಿ ಎಂದು ಸೋಶಿಯಲ್ ಫೋರಮ್ ಹಾರೈಸುತ್ತದೆ.

ಸೋಶಿಯಲ್ ಫೋರಮ್ ನ ನಿಯೋಗದಲ್ಲಿ ಅಬ್ದುಲ್ ಹಮೀದ್, ಆಸಿಫ್ ಬೈಲೂರು, ನೂರ್ ಮುಹಮ್ಮದ್, ಫಯಾಝ್ ಉಪ್ಪಿನಂಗಡಿ, ಯೂಸುಫ್ ಮುಕ್ಕ ಮುಂತಾದವರು ಕಾರ್ಯ ನಿರ್ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News