ಬೆಂಗಳೂರಿನಲ್ಲಿ ಕೇಳಿಸಿದ ನಿಗೂಢ ಶಬ್ದಕ್ಕೆ ಕಾರಣ ತಿಳಿಸಿದ ಎಚ್‍ಎಎಲ್

Update: 2020-05-20 14:35 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ 20: ರಾಜಧಾನಿ ಬೆಂಗಳೂರಿನ ಹಲವೆಡೆ ಇಂದು ಹಲವರನ್ನು ಆತಂಕಕ್ಕೆ ದೂಡಿದ್ದ ನಿಗೂಢ ಶಬ್ದದ ಬಗ್ಗೆ ಎಚ್‍ಎಎಲ್ ಸಂಸ್ಥೆ ಪ್ರತಿಕ್ರಿಯೆ ನೀಡಿದ್ದು, ಸುಖೋಯ್(ಎಯು-30) ಯುದ್ಧ ವಿಮಾನ ಹಾರಾಟದಿಂದ ಈ ರೀತಿಯ ಶಬ್ದ ಉಂಟಾಗಿದೆ ಎಂದು ಸ್ಪಷ್ಟನೆ ನೀಡಿದೆ. 

ಬುಧವಾರ ಮಧ್ಯಾಹ್ನ 1:20ರ ಸುಮಾರಿಗೆ ನಗರದ ಪೂರ್ವ ಭಾಗದ ಎಚ್‍ಬಿಆರ್ ಲೇಔಟ್, ಮಾರತಹಳ್ಳಿ, ಸಿ.ವಿ.ರಾಮನಗರ, ವರ್ತೂರು, ಕುಂದಲಹಳ್ಳಿ, ಎಲೆಕ್ಟ್ರಾನಿಕ್ ಸಿಟಿ, ಹಲಸೂರು, ವೈಟ್‍ಫೀಲ್ಡ್, ಟಿನ್‍ಫ್ಯಾಕ್ಟರಿ, ಕೋರಮಂಗಲ ಸೇರಿದಂತೆ ಹಲವು ಕಡೆ ಭಾರೀ ಶಬ್ದ ಕೇಳಿಬಂದಿದ್ದು, ಜನರು ಭಯಭೀತರಾಗಿದ್ದರು.

ಅಷ್ಟೇ ಅಲ್ಲದೆ, ಕೆಲವರು ಬಾಂಬ್ ಸ್ಫೋಟ ಸಂಭವಿಸಿದ ಶಬ್ದದಂತಿತ್ತು ಎಂದು ಹೇಳಿದರೆ, ಇನ್ನು ಕೆಲವರು ಗ್ಯಾಸ್ ಸಿಲಿಂಡರ್ ಸ್ಫೋಟದ ಮಾದರಿಯಲ್ಲಿ ಕೇಳಿಸಿದೆ ಎಂದು ಸುದ್ದಿ ಹಬ್ಬಿಸಿದ್ದರು. ಜತೆಗೆ ಭಾರಿ ಸದ್ದು ಕೇಳಿಸಿದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿಯೂ ಚರ್ಚೆಯಾಗಿದೆ. ಬೆಂಗಳೂರಿನಲ್ಲಿ ಭೂಕಂಪವಾಗಿದೆಯೇ ಎಂದು ಹಲವರು ಪ್ರಶ್ನೆಗಳನ್ನು ಹಾಕಿದ್ದರು.

ಈ ಕುರಿತಂತೆ ಮಾಹಿತಿ ನೀಡಿರುವ ಎಚ್‍ಎಎಲ್ ಸಂಸ್ಥೆ, ಸುಖೋಯ್-30 ಯುದ್ಧ ವಿಮಾನದ ಬುಧವಾರ ಎಚ್‍ಎಎಲ್ ರನ್ ವೇನಲ್ಲಿ ಟೇಕಾಫ್ ಆಗಿತ್ತು. ಸುಖೋಯ್-30 ಯುದ್ಧ ವಿಮಾನ 90 ಡಿಗ್ರಿ ಟೇಕಾಫ್ ಮಾಡಿದಾಗ ಇಂತಹ ಶಬ್ದ ಉಂಟಾಗುತ್ತದೆ. ಈ ಶಬ್ದ 10 ಕಿಲೋಮೀಟರ್ ವರೆಗೆ ವ್ಯಾಪಿಸುತ್ತದೆ. ಇದೇ ಕಾರಣದಿಂದಾಗಿ ಅನೇಕ ಕಡೆಗಳಲ್ಲಿ ಭಾರಿ ಶಬ್ದ ಉಂಟಾಗಿದೆ ಎಂಬುದಾಗಿ ಸ್ಪಷ್ಟ ಪಡಿಸಿದೆ.

ಭೂಕಂಪನ ಅಲ್ಲ: ಬೆಂಗಳೂರಿನಲ್ಲಿ ಭೂಮಿ ಕಂಪಿಸಿರುವುದು ಭೂಕಂಪನ ಮಾಪಕಗಳಲ್ಲಿ ದಾಖಲಾಗಿಲ್ಲ. ನಮ್ಮ ಸಂಸ್ಥೆಯ ಸೆನ್ಸಾರ್ ಗಳಲ್ಲಿ ಭೂಮಿ ಕಂಪಿಸಿರುವ ಯಾವುದೇ ಮಾಹಿತಿ ದಾಖಲಾಗಿಲ್ಲ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸ್ ರೆಡ್ಡಿ ಮಾಹಿತಿ ನೀಡಿದರು.

ನಗರದ ಕೆಲವೆಡೆ ಕೇಳಿ ಬಂದಿರುವ ಶಬ್ದದಿಂದ ಜನತೆ ಭಯಪಡುವ ಅಗತ್ಯವಿಲ್ಲ. ಇದು ಭೂಕಂಪನ ಅಲ್ಲ. ಶಬ್ದದ ಮೂಲದ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ.

-ಭಾಸ್ಕರ್ ರಾವ್, ನಗರ ಪೊಲೀಸ್ ಆಯುಕ್ತ

ಕಲ್ಲು ಕ್ವಾರಿಗಳಲ್ಲಿ ಬಳಸುವ ಸ್ಫೋಟಕವಿರಬಹುದು. ಅಂತರ್ಜಲ ಭಾರೀ ಪ್ರಮಾಣದಲ್ಲಿ ಕುಸಿತವಾಗುವುದರಿಂದ ಭೂಮಿಯ ಒಳಪದರದಲ್ಲಿ ವ್ಯತ್ಯಾಸ ಉಂಟಾಗಿರಬಹುದು. ಇಲ್ಲವೇ ಪೆಟ್ರೋಲ್ ಉತ್ಪನ್ನಗಳಿಂದ ಈ ರೀತಿಯ ಶಬ್ದಗಳು ಕೇಳಿಬಂದಿರಬಹುದು ಎಂದು ಹವಾಮಾನ ತಜ್ಞ ವಿ.ಎಸ್.ಪ್ರಕಾಶ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News