ಮಲೇಷ್ಯಾದಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ 94 ಪ್ರಯಾಣಿಕರು

Update: 2020-05-20 16:12 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ 20: ಕೋವಿಡ್-19 ಲಾಕ್‍ಡೌನ್ ಪರಿಸ್ಥಿತಿಯಲ್ಲಿ ಮಲೇಷ್ಯಾದ ಕೌಲಾಲಂಪುರದಿಂದ ಮಂಗವಾರ ರಾತ್ರಿ 7 ಗಂಟೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಐದನೆ ವಿಮಾನದಲ್ಲಿ ಗರ್ಭಿಣಿಯರು, ಮಕ್ಕಳು ಸೇರಿದಂತೆ ಒಟ್ಟು 94 ಮಂದಿ ಅನಿವಾಸಿ ಭಾರತೀಯರು ಆಗಮಿಸಿದ್ದಾರೆ.

ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಒಟ್ಟು 94 ಮಂದಿ ಪ್ರಯಾಣಿಕರಲ್ಲಿ 4 ಗರ್ಭಿಣಿಯರು, ಹತ್ತು ವರ್ಷದೊಳಗಿನ ಐವರು ಮಕ್ಕಳು ಸೇರಿದಂತೆ 60 ಪುರುಷರು ಮತ್ತು 34 ಮಹಿಳೆಯರು ಇದ್ದರು. ಬಳಿಕ ಏರ್ ಇಂಡಿಯಾ ವಿಮಾನವು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಗುಜರಾತ್‍ನ ಅಹಮದಾಬಾದ್ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಿತು.

ಕೇಂದ್ರ ಹಾಗೂ ರಾಜ್ಯ ಸರಕಾರದ ನಿರ್ದೇಶನದಂತೆ ತಜ್ಞ ವೈದ್ಯರು ಹಾಗೂ ಸಿಬ್ಬಂದಿಗಳಿಂದ ಪ್ರಯಾಣಿಸಿ ಬಂದ 94 ಪ್ರಯಾಣಿಕರ ಆರೋಗ್ಯ ತಪಾಸಣೆ ಮಾಡಿಸಲಾಗಿದ್ದು, ಯಾವುದೇ ಪ್ರಯಾಣಿಕರಲ್ಲಿ ಕೊರೋನ ವೈರಾಣು ಸೋಂಕಿನ ಲಕ್ಷಣಗಳು ಕಂಡುಬಂದಿಲ್ಲ.

ಆರೋಗ್ಯ ತಪಾಸಣೆಯ ಬಳಿಕ, 94 ಪ್ರಯಾಣಿಕರನ್ನು 14 ದಿನಗಳ ಕ್ವಾರಂಟೈನ್‍ಗಾಗಿ ಹೊಟೇಲ್‍ಗಳಿಗೆ ಬಿಎಂಟಿಸಿ ಬಸ್‍ಗಳ ಮೂಲಕ ಕಳುಹಿಸಿಕೊಡಲಾಗಿದ್ದು, ಕ್ವಾರಂಟೈನ್ ವೆಚ್ಚವನ್ನು ಪ್ರಯಾಣಿಕರೇ ಭರಿಸಲಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News