ಕೊರೋನ ವಿರುದ್ಧದ ಹೋರಾಟದಲ್ಲಿ ಆಶಾ ಕಾರ್ಯಕರ್ತೆಯರ ಸೇವೆ ಅನನ್ಯ: ಝಮೀರ್ ಅಹ್ಮದ್ ಖಾನ್

Update: 2020-05-20 16:48 GMT

ಬೆಂಗಳೂರು, ಮೇ 20: ಕೊರೋನ ವೈರಸ್ ಸಾಂಕ್ರಾಮಿಕ ವಿರುದ್ಧದ ಹೋರಾಟದಲ್ಲಿ ಜನಸಾಮಾನ್ಯರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಆಶಾ ಕಾರ್ಯಕರ್ತೆಯರು ಸಲ್ಲಿಸುತ್ತಿರುವ ಸೇವೆ ಅನನ್ಯವಾದದ್ದು ಎಂದು ಮಾಜಿ ಸಚಿವ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ತಿಳಿಸಿದರು.

ಬುಧವಾರ ಚಾಮರಾಜಪೇಟೆಯ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ 48 ಮಂದಿ ಆಶಾ ಕಾರ್ಯಕರ್ತೆಯರು ಹಾಗೂ ನರ್ಸ್‍ಗಳನ್ನು ಸನ್ಮಾನಿಸಿ, ರೇಷನ್ ಕಿಟ್ ಹಾಗೂ ತಲಾ 5 ಸಾವಿರ ರೂ.ಪ್ರೋತ್ಸಾಹ ಧನ ವಿತರಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ನನ್ನ ಮತ ಕ್ಷೇತ್ರ ಚಾಮರಾಜಪೇಟೆಯಲ್ಲಿ ಕೊರೋನ ವೈರಸ್‍ಯಿಂದಾಗಿ ಪಾದರಾಯನಪುರ, ಜೆ.ಜೆ.ನಗರ ಸೇರಿದಂತೆ ಮೂರು ವಾರ್ಡ್‍ಗಳನ್ನು ಸೀಲ್‍ಡೌನ್ ಮಾಡಲಾಗಿತ್ತು. ಕೊರೋನ ವೈರಸ್ ಭೀತಿಯಿಂದ ಪ್ರತಿಯೊಬ್ಬರೂ ಆತಂಕದಲ್ಲಿದ್ದಾಗ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ, ಜನರಲ್ಲಿ ಜಾಗೃತಿ ಮೂಡಿಸುವುದಲ್ಲದೆ, ಅವರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸವನ್ನು ಮಾಡಿದ್ದಾರೆ ಎಂದು ಅವರು ಹೇಳಿದರು.

ಕೆಲವು ಆಶಾ ಕಾರ್ಯಕರ್ತೆಯರು ಇತ್ತೀಚೆಗೆ ನನ್ನನ್ನು ಸಂಪರ್ಕಿಸಿ, ಸರಕಾರದಿಂದ ಬರಬೇಕಿರುವ ಸಂಬಳ ಬಂದಿಲ್ಲ ಎಂಬ ವಿಷಯವನ್ನು ತಿಳಿಸಿದರು. ಆದುದರಿಂದ, ಅವರನ್ನು ಇಂದು ನನ್ನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಆಶಾ ಕಾರ್ಯಕರ್ತೆಯರನ್ನು ಕರೆಸಿ ಅವರ ಸೇವೆಗೆ ಗೌರವ ಸಲ್ಲಿಸಲು ಸನ್ಮಾನ ಮಾಡಿ, ಅವರಿಗೆ ರೇಷನ್ ಕಿಟ್‍ಗಳನ್ನು ಹಾಗೂ ವೈಯಕ್ತಿಕವಾಗಿ ತಲಾ 5 ಸಾವಿರ ರೂ.ಗಳ ಪ್ರೋತ್ಸಾಹ ಧನವನ್ನು ವಿತರಿಸಲಾಗಿದೆ ಎಂದು ಝಮೀರ್ ಅಹ್ಮದ್ ಖಾನ್ ಹೇಳಿದರು.

ಕಂಟೈನ್ಮೆಂಟ್ ಝೋನ್‍ಗಳಲ್ಲಿ ಸಾಮಾನ್ಯ ಜನ ಹೋಗಲು ಭಯಪಡುತ್ತಾರೆ. ಅಂತಹ ಸಂದರ್ಭದಲ್ಲಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ಸೀಲ್‍ಡೌನ್ ಆಗಿರುವ ವಾರ್ಡ್‍ಗಳಲ್ಲಿ ಹೋಗಿ ಅವರು ಮಾಡಿರುವ ಸೇವೆಯನ್ನು ಬಣ್ಣಿಸಲು ಸಾಧ್ಯವಿಲ್ಲ. ಅವರು ಯಾವ ರೀತಿ ಸೇವಾಮನೋಭಾವದಿಂದ ಕೆಲಸ ಮಾಡುತ್ತಾರೆ ಅನ್ನೋದನ್ನು ಕಣ್ಣಾರೆ ಕಂಡಿದ್ದೇನೆ ಎಂದು ಅವರು ತಿಳಿಸಿದರು.

ಇದಲ್ಲದೆ, ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ಕೊರೋನ ವಾರಿಯರ್ಸ್‍ಗಳಾಗಿ ಶ್ರಮಿಸುತ್ತಿರುವ ಬಿಬಿಎಂಪಿ, ಬೆಸ್ಕಾಂ, ಬಿಡಬ್ಲ್ಯುಎಸ್‍ಎಸ್‍ಬಿ ಸೇರಿದಂತೆ ಇನ್ನಿತರ ಇಲಾಖೆಗಳ ಸಿಬ್ಬಂದಿಗಳಿಗೂ ರೇಷನ್ ಕಿಟ್‍ಗಳನ್ನು ವಿತರಿಸಲಾಗುತ್ತಿದೆ ಎಂದು ಝಮೀರ್ ಅಹ್ಮದ್ ಖಾನ್ ಹೇಳಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಬಿ.ಕೆ.ಅಲ್ತಾಫ್ ಖಾನ್, ಹಝ್ರತ್ ಹಮೀದ್ ಶಾ ಕಾಂಪ್ಲೆಕ್ಸ್ ಆಡಳಿತ ಸಮಿತಿ ಅಧ್ಯಕ್ಷ ಜಿ.ಎ.ಬಾವಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News