ಕಳವು ಆರೋಪಿಗೆ ಕೊರೋನ ದೃಢ: ಬೆಂಗಳೂರಿನ 15 ಪೊಲೀಸ್ ಸಿಬ್ಬಂದಿಗೆ ಕ್ವಾರಂಟೈನ್

Update: 2020-05-20 16:57 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ 20: ಕಳವು ಆರೋಪದಡಿ ಬಂಧಿತನಾಗಿರುವ ವ್ಯಕ್ತಿಗೆ ಕೊರೋನ ಸೋಂಕು ದೃಢಪಟ್ಟಿರುವ ಹಿನ್ನೆಲೆ ಇಲ್ಲಿನ ಹೆಬ್ಬಗೋಡಿ ಪೊಲೀಸ್ ಠಾಣೆಯ 15 ಮಂದಿ ಪೊಲೀಸ್ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಿ ನಿಗಾ ವಹಿಸಲಾಗಿದೆ ಎಂದು ವರದಿಯಾಗಿದೆ.

ಬಂಧಿತ ಆರೋಪಿಯು ಪಾದರಾಯನಪುರ ನಿವಾಸಿ ಎಂದು ತಿಳಿದುಬಂದಿದ್ದು, ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವಲ್ಲಿ ಕಾರ್ಯ ನಿರ್ವಹಿಸಿದ ಹೆಬ್ಬಗೋಡಿ ಠಾಣೆಯ ಇನ್‍ಸ್ಪೆಕ್ಟರ್ ಸೇರಿ 15 ಪೊಲೀಸರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಕೊರೋನ ಸೋಂಕು ದೃಢಪಡುತ್ತಿದ್ದಂತೆ ಆರೋಪಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೇ 17ರಂದು ಕಬ್ಬಿಣ ಕಳ್ಳತನ ಮಾಡುವಾಗ ಸಿಕ್ಕಿಬಿದ್ದ ಆತನನ್ನು ಹಿಡಿದು ಸ್ಥಳೀಯರು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದರು. ಬಳಿಕ ಹೆಬ್ಬಗೋಡಿ ಪೊಲೀಸರು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿ ಆತನನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿತ್ತು. ನಂತರ ವಶಕ್ಕೆ ಪಡೆದು ವಿಚಾರಣೆ ಬಳಿಕ ಆತ ಪಾದರಾಯನಪುರದ ನಿವಾಸಿ ಎನ್ನುವುದು ತಿಳಿದು ಶಂಕೆ ಹಿನ್ನೆಲೆ ಕೊರೋನ ಪರೀಕ್ಷೆಗೆ ಒಳಪಡಿಸಲಾಗಿತ್ತು. ಪರೀಕ್ಷೆ ವರದಿಯಲ್ಲಿ ಆತನಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದರಿಂದ ಆರೋಗ್ಯಾಧಿಕಾರಿಗಳು ಹೆಬ್ಬಗೋಡಿ ಠಾಣೆಯ 15 ಪೊಲೀಸರನ್ನು ಕ್ವಾರಂಟೈನ್‍ನಲ್ಲಿ ಇರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪೊಲೀಸ್ ಠಾಣೆ ಆವರಣದಲ್ಲಿ ಸ್ಯಾನಿಟೈಸರ್ ಸಿಂಪಡಿಸಲಾಗುತ್ತಿದೆ. ಇತ್ತ ಆತನನ್ನು ಥಳಿಸಿದ ಜನರನ್ನು ಕೂಡ ಗುರುತಿಸಿ ಕ್ವಾರಂಟೈನ್ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News