ಸಂಕಷ್ಟದ ಸುಳಿಯಲ್ಲಿ ವಲಸೆ ಕಾರ್ಮಿಕರು

Update: 2020-05-20 17:22 GMT

ಗ್ರಾಮೀಣ ಪ್ರದೇಶದಲ್ಲಿ ಇಷ್ಟು ಜನಸಾಂದ್ರತೆ ಆದಾಗ ಗ್ರಾಮಗಳ ನೈರ್ಮಲ್ಯದ ಗತಿ ಏನು? ಶೌಚಾಲಯ, ಸ್ಯಾನಿಟೈಸರ್ ಬಳಕೆ, ಕೊರೋನ ವೈರಸ್ ತಡೆಗಟ್ಟುವ ಬಗ್ಗೆ ಇನ್ನಷ್ಟು ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಈ ಅಂಟು ಜಾಢ್ಯದ ಎರಡನೇ ಅಲೆ ಇನ್ನಷ್ಟು ರಭಸವಾಗಿ, ಹುಲ್ಲು ಗಾವಲಿಗೆ ಕಾಡ್ಗಿಚ್ಚು ಬಿದ್ದಂತೆ, ಸಮೂಹದ ಮೇಲೆ ಅಪ್ಪಳಿಸದೆ ಬಿಡಲಾರದು.ಜತೆಗೆ ಇನ್ನೇನು ಮುಂಗಾರು ಮಳೆ ಆರಂಭವಾಗುವ ದಿನಗಳು ದೂರವಿಲ್ಲ. ಆಗ ಇವರು ಇರುವುದೆಲ್ಲಿ? ತಿನ್ನುವುದೇನನ್ನು? ಕೆಲಸವೇನು?


ಅರವತ್ತರ ದಶಕದಲ್ಲಿ ಬದುಕು ಕಟ್ಟಿಕೊಳ್ಳಲು ಹಳ್ಳಿಗಳಿಂದ ನಗರದತ್ತ ವಲಸೆ ಹೊರಟ ಜನರನ್ನು ತಡೆದು: ಹೋಗದಿರೀ ಸೋದರರೇ, ನಮ್ಮೀ ಊರನು ತೊರೆದು ಹೋಗದಿರೀ ಇಲ್ಲಿಗೆ ಮುಗಿಯದು ಋಣಾನುಬಂಧ ನಮ್ಮೀ ಸೋದರ ಸಂಬಂಧಾ ಎಂದು ಅಂಗಲಾಚಿ ತಡೆದುಕೊಳ್ಳುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು. ಇಂತಹ ಭಾವನಾತ್ಮಕ ಹಿನ್ನೆಲೆಯುಳ್ಳ ಚಂದವಳ್ಳಿಯತೋಟ, ನಮ್ಮೂರು, ಭೂದಾನ ಮುಂತಾದ ಚಿತ್ರಗಳು ಮೂಡಿ ಬಂದು ಜನಮನವನ್ನುಸೂರೆಗೊಂಡಿದ್ದವು.

ಆದರೆ ಈಗ ಕಾಲ ಬದಲಾಗಿದೆ. ಅದೇ ಹಳ್ಳಿಗರು ನಗರದಿಂದ ಹಿಂದಿರುಗಿ ಬರುತ್ತಿರುವ ವಲಸೆ ಕಾರ್ಮಿಕರನ್ನು ತಡೆದು: ಬಾರದಿರೀ ಸೋದರರೇ, ಇತ್ತ ಸಾರದಿರಿ ಬಾಂಧವರೇ ನಮ್ಮೀ ಊರಿಗೆ ಕೊರೋನ ಮಾರಿಯತಾರದಿರೀ ಎಂದು ಊರ ದಾರಿಗಳಿಗೆಲ್ಲಾ ಅಡ್ಡ ಟ್ರಂಚುಗಳನ್ನು ತೋಡಿ, ಬೇಲಿಹಾಕಿ ಕಾವಲು ಕಾಯುತ್ತಿದ್ದಾರೆ. ಹಾಗೆಂದು ನಮ್ಮ ಗ್ರಾಮೀಣ ಜನರು ಮಾನವ ದ್ವೇಷಿಗಳೇನಲ್ಲ. ಕೊರೋನ ಮಾರಿ ಜಗನ್ಮೋಹಿನಿ. ಈ ರೋಗಾಣು ಯಾವಾಗ? ಹೇಗೆ? ಯಾರಿಂದ? ಹಬ್ಬುತ್ತದೆ ಎಂದು ಹೇಳಲು ಬರುವುದಿಲ್ಲ. ಲಾಕ್‌ಡೌನ್ ದಿಗ್ಭಂಧನ 2ನೇ ಘಟ್ಟ ಮುಗಿಯುವಷ್ಟರಲ್ಲಿ ಕೊಂಚ ಸಡಿಲಿಕೆ ತೋರಿದುದರಿಂದ ಅದು ಗ್ರಾಮ ಸಮುದಾಯಗಳಿಗೆ ಇನ್ನೂ ಹೆಚ್ಚಾಗಿ ಅಂಟುವ ಸಾಧ್ಯತೆ ಕಂಡು ಬರುತ್ತಿದೆ. ಇದಕ್ಕೆ ಹಲವಾರು ಸಾಕ್ಷ್ಯಾಧಾರಗಳು ದೊರೆತಿವೆ. ಆ ಕಾರಣದಿಂದ ಹೇಗೋ ನೆಮ್ಮದಿಯಿಂದ ಬದುಕುತ್ತಿರುವ ತಮ್ಮಲ್ಲಿಗೆ ಈ ರೋಗಾಣುವನ್ನು ಹೊರಗಿನವರು ಹೊತ್ತುತಂದಾರೆಂಬ ಭೀತಿಯಿಂದ ಅವರ ಪ್ರವೇಶಕ್ಕೆ ಹಳ್ಳಿಗರು ಅಡ್ಡಿ ಮಾಡುತ್ತಿರುವುದು ಸ್ವಾಭಾವಿಕ.

ಹಿಂದೆ ಕೆಟ್ಟು ಪಟ್ಟಣ ಸೇರು ಎಂಬ ಮಾತಿತ್ತು. ಸದ್ಯಇಲ್ಲಿ ಕೊರೋನ ಕಾಯಿಲೆಗೆ ಹೆದರಿ ಅಲ್ಲಿಂದ ಕಾಲು ಕೀಳುತ್ತಿದ್ದಾರೆ. ಸತ್ತರೆ ನಮ್ಮೂರಿನಲ್ಲೇ ಸಾಯೋಣ ಎಂದು ಅವರು ಹರಸಾಹಸ ಪಟ್ಟು, ಒಮ್ಮಾಮೆ ್ಮದಾರಿಯಲ್ಲಿ ಆಕಸ್ಮಿಕ ದುರಂತಕ್ಕೀಡಾಗಿಯೂ ತಮ್ಮ ಊರುಗಳಿಗೆ ಮರಳಲು ಹೊರಟಿದ್ದಾರೆ. ಕೆಲವರು ಈಗಾಗಲೇ ತಲುಪಿಯೂ ಇದ್ದಾರೆ. ಹೀಗೆ ಲಕ್ಷ ಲಕ್ಷಾಂತರ ಮಂದಿ ಮರಳಿರುವಾಗ ಅವರ ಕೈಗೆ ಕೆಲಸ, ಬಾಯಿಗೆ ಅನ್ನ, ಇರಲು ಜಾಗ ಎಲ್ಲಿದೆ? ಅವರ ಭವಿಷ್ಯ ಹಳ್ಳಿಗಳಲ್ಲಿ ಇನ್ನೂ ಕರಾಳವಾಗುವುದರಲ್ಲಿ ಯಾವ ಸಂಶಯವೂ ಇಲ್ಲ.

ನಗರದ ಕಾರ್ಖಾನೆಗಳಲ್ಲಿ, ಗಾರ್ಮೆಂಟ್ಸ್‌ಗಳಲ್ಲಿ ಅಥವಾ ಗುತ್ತಿಗೆ ಆಧಾರಿತ ತಾತ್ಕಾಲಿಕ ಸೇವೆ, ಬೀದಿ ಬದಿಯ ಅಂಗಡಿ ಮುಂಗಟ್ಟುಗಳಲ್ಲಿ ತಮ್ಮ ಶಕ್ತ್ಯಾನುಸಾರ, ವಿದ್ಯೆ ಬುದ್ಧಿಗಳಿಂದ ದುಡಿದು ತುತ್ತಿನ ಚೀಲ ತುಂಬಿಕೊಳ್ಳುತ್ತಿದ್ದ ಬಹುಪಾಲು ವಲಸೆ ಕಾರ್ಮಿಕರಿಗೆ ಹಳ್ಳಿಗಳಲ್ಲಿ ಕೆಲಸವಾದರೂ ಏನಿದೆ? ಯಥಾ ಪ್ರಕಾರ ಜಮೀನ್ದಾರರ ಹೊಲಗದ್ದೆ ತೋಟಗಳಲ್ಲಿ ಕಡಿಮೆ ಕೂಲಿಗೆ ಮೈಮುರಿದು ದುಡಿಯಬೇಕು. ಒಂದು ಕಾಲಕ್ಕೆ ಜಮೀನ್ದಾರರನ್ನು ಕೇರ್ ಮಾಡದೆ ಮುಖ ತಿರುಗಿಸಿಕೊಂಡು, ಸಂವಿಧಾನದ ಸವಲತ್ತುಗಳ ಅರಿವಿನೊಂದಿಗೆ ನಗರ ಸೇರಿ ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದ ಈ ಅತ್ಯಂತ ಕೆಳಗಿನ ಮನುಷ್ಯರ ಗತಿ ಮುಂದೇನಾದೀತು? ಕೊರೋನ ಮಾರಿಗೆ ಹೆದರಿ ಈ ಬಡವರೇನೊ ಊರ ಬಾಗಿಲಿಗೆ ಬಂದು ಬಿದ್ದಿದ್ದಾರೆ. ಆದರೆ ಅವರೂ ಮನುಷ್ಯರು ಎಂದು ಭಾವಿಸಿ ಅವರ ಕೈಗೆ ಕೆಲಸ ಕೊಡುವರಾರು? ಸರಕಾರ ಹಮ್ಮಿಕೊಳ್ಳುವ ಯೋಜನೆಗಳು ಹಳ್ಳಿಗೆ ಹರಿದು ಬರುವಷ್ಟರಲ್ಲಿ ಇವರ ಜೀವನ ಹೇಗೆ ಸಾಗಬೇಕು?

ಈಗ ಹಳ್ಳಿಗೆ ಮರಳಿರುವ ವಲಸೆ ಕಾರ್ಮಿಕರಲ್ಲಿ ಮೂರು ವರ್ಗ ಇದೆ. ಒಂದು, ಸ್ವಂತ ಜಮೀನು ಇಲ್ಲದೆ ಜಮೀನ್ದಾರರ ಹೊಲದಲ್ಲಿ ದುಡಿಯಬೇಕಾಗಿರುವ ವರ್ಗ. ಎರಡನೆಯದು, ಅಲ್ಪ ಸ್ವಲ್ಪಜಮೀನು ಇದ್ದು ಅದರಿಂದ ಬರುವ ಉತ್ಪನ್ನ ಸಾಕಾಗದೆ ಇದ್ದವರು. ಮೂರನೇ ವರ್ಗ ಮನೆ ಜಮೀನು ಏನು ಇಲ್ಲದೆ ನಿರ್ಗತಿಕರಾಗಿದ್ದವರು. ಇಂತಲ್ಲಿ ಸರಕಾರ ಇವರಿಗೆಲ್ಲ ದುಡಿಯಲು ಕೆಲಸ, ವಾಸಕ್ಕೆ ಮನೆ ವ್ಯವಸ್ಥೆ ಮಾಡಬೇಕಾಗಿತ್ತು. ಆದ್ದರಿಂದ ಬಹುಸಂಖ್ಯಾತ ದುಡಿಯುವ ವರ್ಗ ನಗರಕ್ಕೆವಲಸೆ ಬಂದಿದ್ದರಷ್ಟೆ.ಆದರೀಗ ಕೊರೋನ ಹಾವಳಿಯಿಂದ ಇಲ್ಲೂ ಇರಲಾರದೆ ಹಳ್ಳಿಗೆ ಹಿಂದಿರುಗಿದ್ದಾರೆ. ಈಗ ಇವರಲ್ಲಿ ಮೊದಲ ವರ್ಗದವರು ಜಮೀನ್ದಾರರಲ್ಲಿ ಮೊದಲಿನಂತೆ ಕೂಲಿ ಕೆಲಸಕ್ಕೆ ಹೋಗಬಹುದಾಗಿದೆ. ಎರಡನೇ ವರ್ಗದವರು ತಮ್ಮ ಪಾಳು ಬಿದ್ದಿರುವ ಅಷ್ಟೊ ಇಷ್ಟೊ ಜಮೀನಿನಲ್ಲಿ ಕೃಷಿ ಕೆಲಸ ಮಾಡಿಕೊಳ್ಳಬಹುದು.

ಇನ್ನು ಮೂರನೆಯ ವರ್ಗಕ್ಕೆ ದಿನಗೂಲಿ ಕೆಲಸವೇ ದಿಕ್ಕು. ಇವರಿಗೆ ವಾಸಕ್ಕೆ ಮನೆ ಮಠವೂ ಇಲ್ಲ. ಆದರೆ ಇವರೇ ಬಹು ಸಂಖ್ಯಾತರು. ಇಷ್ಟೊಂದು ಜನಕ್ಕೆ ಹಳ್ಳಿಗಳಲ್ಲಿ ಕೂಲಿಯಾದರೂ ಸಿಕ್ಕುವುದುಂಟೆ? ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ವತಿಯಿಂದ ಸರಕಾರ ಕೆಲವು ದಿವಸ ಉದ್ಯೋಗ ಕೊಟ್ಟರೂ ಕೊಡಬಹುದು; ಅದು ಗ್ಯಾರಂಟಿ ಇಲ್ಲ. ಹೀಗಾಗಿ ವಲಸೆ ಕಾರ್ಮಿಕರ ಸ್ಥಿತಿ ಇಲ್ಲಿಯೂ ಚಿಂತಾಜನಕವೇ. ಅರ್ಥ ಶಾಸ್ತ್ರಜ್ಞರ ಲೆಕ್ಕಾಚಾರವೆಲ್ಲ ತಲೆ ಕೆಳಗು. ಸರಕಾರ ನಿರುದ್ಯೋಗ ಭತ್ತೆಯನ್ನಾದರೂ ಎಷ್ಟು ದಿನ ಕೊಟ್ಟೀತು? ಕುಡಿಕೆಯಲ್ಲಿ ಕೂಡಿಟ್ಟ ಹಣ ಕುಂತು ಉಂಡರೆ ಎಷ್ಟು ದಿನ ಬಂದೀತು? ಅಲ್ಲದೆ ಗ್ರಾಮೀಣ ಪ್ರದೇಶದಲ್ಲಿ ಇಷ್ಟು ಜನಸಾಂದ್ರತೆ ಆದಾಗ ಗ್ರಾಮಗಳ ನೈರ್ಮಲ್ಯದ ಗತಿ ಏನು? ಶೌಚಾಲಯ, ಸ್ಯಾನಿಟೈಸರ್ ಬಳಕೆ, ಕೊರೋನ ವೈರಸ್ ತಡೆಗಟ್ಟುವ ಬಗ್ಗೆ ಇನ್ನಷ್ಟು ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ.

ಈ ಅಂಟು ಜಾಢ್ಯದ ಎರಡನೇ ಅಲೆ ಇನ್ನಷ್ಟು ರಭಸವಾಗಿ, ಹುಲ್ಲು ಗಾವಲಿಗೆ ಕಾಡ್ಗಿಚ್ಚು ಬಿದ್ದಂತೆ, ಸಮೂಹದ ಮೇಲೆ ಅಪ್ಪಳಿಸದೆ ಬಿಡಲಾರದು.ಜತೆಗೆ ಇನ್ನೇನು ಮುಂಗಾರು ಮಳೆ ಆರಂಭವಾಗುವ ದಿನಗಳು ದೂರವಿಲ್ಲ. ಆಗ ಇವರು ಇರುವುದೆಲ್ಲಿ? ತಿನ್ನುವುದೇನನ್ನು? ಕೆಲಸವೇನು? ಇಂತಹ ಸಮಸ್ಯೆಗಳು ಉದ್ಭವಿಸುತ್ತವೆ. ಕಾರ್ಖಾನೆಗಳು ಪುನರಾರಂಭಗೊಳ್ಳುವ ಸೂಚನೆಗಳೇನೋ ಇವೆ. ಆಗ ವಲಸೆ ಕಾರ್ಮಿಕರು ಪುನಃ ನಗರಗಳತ್ತ ಮರು ಪಯಣ ಮಾಡಬಹುದು. ಆದರೆ ಎರಡನೇ ಘಟ್ಟದ ಲಾಕ್‌ಡೌನ್ ಮುಗಿದ ನಂತರವೂ ಅಂದರೆ ಇನ್ನೂ ಒಂದೆರಡು ತಿಂಗಳವರೆಗೆ ಕೊರೋನ ಎರಡನೇ ಅಲೆ ಅಪ್ಪಳಿಸುವ ಲಕ್ಷಣಗಳು ಇಲ್ಲದಿಲ್ಲ.ಇಂತಹದ್ದರಲ್ಲಿ ಈ ಕಾರ್ಮಿಕರು ಹಿಂದಿರುಗುವುದಾದರೂ ಹೇಗೆ? ಅಂತೂ ಬಹುಸಂಖ್ಯಾತ ವಲಸೆ ಕಾರ್ಮಿಕರು ಪುನಃ ಸಂಕಷ್ಟದ ಸುಳಿಗೆ ಈಡಾಗುವ ಸಂಭವ ಇದೆ.

ಈ ದುರಂತ ನಾಟಕ ಇಂದು ನೆನ್ನೆಯದಲ್ಲ. ನಾಳೆ ನಾಡಿದ್ದರಲ್ಲಿ ಅಂತ್ಯಗೊಳ್ಳುವುದೂ ಅಲ್ಲ, ಈಶೋಪನಿಷತ್ತಿನ ಒಂದು ರೂಪಕಕತೆ ನೆನಪಾಗುತ್ತದೆ. ಕಾಡಿನಲ್ಲಿ ದಾರಿ ಹೋಕನೊಬ್ಬ ಹೋಗುತ್ತಿದ್ದ. ಅವನನ್ನು ಹಿಡಿಯಲು ಹುಲಿ ಆರ್ಭಟಿಸಿ ಬರುತ್ತದೆ. ಹೆದರಿದ ಅವನು ಸನಿಹದಲ್ಲಿದ್ದ ಹಾಳು ಬಾವಿಗೆ ಹಾರಿಕೊಳ್ಳುತ್ತಾನೆ. ಇನ್ನೇನು ಕೆಳಗೆ ಬಿದ್ದೆನೆನ್ನುವಾಗ ಮರದ ಕೊಂಬೆಯೊಂದನ್ನು ಹಿಡಿದು ತೂಗು ಬೀಳುತ್ತಾನೆ. ಕೆಳಗೆ ನೋಡಿದರೆ ಭೋರ್ಗರೆಯುತ್ತಿರುವ ಕಾಳಿಂಗ ಸರ್ಪಗಳು. ಮೇಲೆ ನೋಡಿದರೆ ದಡದಲ್ಲಿ ಹೆಬ್ಬುಲಿ ಗರ್ಜಿಸುತ್ತ ಬಾಯ್ ತೆರೆದು ನಿಂತಿದೆ. ಅತ್ತದರಿಇತ್ತ ಪುಲಿ ಇನ್ನೆತ್ತ ಸಾಯಲಿಎಂದು ಮರದ ಕೊಂಬೆಯನ್ನೇ ಭದ್ರ ಹಿಡಿಯುತ್ತಾನೆ. ಅವನು ಹಿಡಿದ ರಭಸಕ್ಕೆ ಕೊಂಬೆಗೆ ಕಟ್ಟಿದ್ದ ಹೆಜ್ಜೇನು ಹುಳಗಳು ಎದ್ದು ಮೊರೆದು ಮುತ್ತುತ್ತವೆ. ಹೆದರಿ ನಡುಗಿದವನು ಬಾಯ್ತೆರೆಯೆ ಮೇಲಿಂದ ಜೇನು ಹನಿ ತೊಟ್ಟಿಕ್ಕುತ್ತಿದೆ. ಆಗಲೂ ಅವನು ಆ ಜೇನುಚಪ್ಪರಿಸುತ್ತಾನೆ. ಇದು ಜೀವ ಇದು ಜೀವನ ಎಂದು ಉಪನಿಷತ್ ಋಷಿ ಸಂಕಥನ ಮಾಡಿ ಹೇಳುತ್ತಾನೆ.

ಪ್ರಸ್ತುತ ಜಗತ್ತಿನಾದ್ಯಂತ ವಲಸೆ ಕಾರ್ಮಿಕರ ಸ್ಥಿತಿ ಇಂತಾಗಿದೆ. ಅಷ್ಟೇ ಅಲ್ಲ, ಬಡವರ ದುಡಿಮೆ ಮೇಲೆ ಅವಲಂಬಿತವಾದ ಶ್ರೀಮಂತ ನಾಗರಿಕತೆಯ ಗತಿಯನ್ನೂ ಸಹ ಕೊರೋನ ವೈರಾಣು ಮಾರಿ ಬದಲಿಸುತಿ್ತದ್ದಾಳೆ. ಇದಕ್ಕೆ ಪರಿಹಾರ ಒಂದೇ ಗಾಂಧೀಜಿ ನಿರ್ವಚಿಸಿದ ಗ್ರಾಮ ಸ್ವರಾಜ್ಯ. ಸ್ವಾವಲಂಬನೆ, ಸ್ವಚ್ಛತೆ, ಸರಳತೆ, ಸೋದರತ್ವ, ಸಹಬಾಳ್ವೆ ಬಿಟ್ಟು ಬೇರೆ ಅನ್ಯ ಮಾರ್ಗವಿಲ್ಲ. ಈ ಮಾತು ಹಳ್ಳಿ ಮತ್ತು ನಗರ ಎರಡಕ್ಕೂ ಅನ್ವಯ ಆಗಬೇಕು.

Writer - ಪ್ರೊ. ಶಿವರಾಮಯ್ಯ

contributor

Editor - ಪ್ರೊ. ಶಿವರಾಮಯ್ಯ

contributor

Similar News