ದೇವಾಲಯಗಳ ಪೂಜೆ ಆನ್‍ಲೈನ್ ನಲ್ಲಿ ನೇರ ಪ್ರಸಾರಕ್ಕೆ ಚಿಂತನೆ: ಸಚಿವ ಕೋಟ

Update: 2020-05-21 15:13 GMT

ಬೆಂಗಳೂರು, ಮೇ 21: ಕೊರೋನ ಲಾಕ್‍ಡೌನ್ ಹಿನ್ನೆಲೆಯಲ್ಲಿ ಆಯ್ದ ಪ್ರಮುಖ ದೇವಾಲಯಗಳಲ್ಲಿ ಪೂಜೆ-ಪುನಸ್ಕಾರವನ್ನು ಆನ್‍ಲೈನ್ ಮೂಲಕ ನೇರ ಪ್ರಸಾರ ಮಾಡಲು ರಾಜ್ಯ ಸರಕಾರ ಚಿಂತನೆ ನಡೆಸಿದೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಇಂದಿಲ್ಲಿ ತಿಳಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಆಯ್ದ ದೇವಸ್ಥಾನಗಳ ವೆಬ್‍ಸೈಟ್ ಮತ್ತು ಫೇಸ್‍ಬುಕ್ ಮೂಲಕ ಪೂಜೆಯ ನೇರ ಪ್ರಸಾರದ ಚಿಂತನೆ ಇದ್ದು, 15 ಜಿಲ್ಲೆಗಳ ದೇಗುಲಗಳಲ್ಲಿ ಪೂಜಾ ಪದ್ಧತಿಯನ್ನು ನೇರ ಪ್ರಸಾರ ಮಾಡುವ ಉದ್ದೇಶವಿದೆ ಎಂದರು.

ಕೊರೋನ ಸೋಂಕು ತಡೆಗಟ್ಟಲು ಹೇರಿರುವ ಲಾಕ್‍ಡೌನ್ ಹಿನೆಲೆಯಲ್ಲಿ ದೇವಸ್ಥಾನಗಳನ್ನು ಬಂದ್ ಮಾಡಲಾಗಿದ್ದು, ಭಕ್ತಾಧಿಗಳಿಗೆ ಅನುಕೂಲವಾಗಲೆಂದು ಆನ್‍ಲೈನ್ ಪೂಜೆ ವ್ಯವಸ್ಥೆ ಜಾರಿಗೆ ತರಲು ನಿರ್ಧರಿಸಲಾಗಿದೆ ಎಂದ ಅವರು, ಆನ್‍ಲೈನ್ ಮೂಲಕವೇ ಭಕ್ತರು ಸೇವಾ ವೆಚ್ಚವನ್ನು ಭರಿಸಬಹುದು. ಅವರಿಗೆ ಪ್ರಸಾದವನ್ನು ಮನೆಗೆ ರವಾನಿಸಲಾಗುವುದು ಎಂದು ಹೇಳಿದರು.

ಮಂಗಳಾರತಿ, ಅರ್ಚನೆ, ಪುಷ್ಪಾಲಂಕಾರ ಪೂಜೆ, ಅಷ್ಟೊತ್ತರ ಸೇರಿದಂತೆ 15 ಸೇವೆಗಳನ್ನು ಆನ್‍ಲೈನ್ ಮೂಲಕ ಭಕ್ತರಿಗೆ ಒದಗಿಸಲು ಉದ್ದೇಶಿಸಲಾಗಿದೆ. ಭಕ್ತರು ತಮಗೆ ಬೇಕಾದ ಸೇವೆಗಳಿಗೆ ಹಣ ಪಾವತಿಸಬೇಕಾಗುತ್ತದೆ. ಹಣ ನೀಡಿದವರ ಹೆಸರಿನಲ್ಲಿ ಪೂಜೆ ನೆರವೇರಿಸಲಾಗುವುದು. ಅನಂತರ ಪ್ರಸಾದ ಅವರ ಮನೆಗೆ ರವಾನಿಸಲಾಗುವುದು ಎಂದರು.

ಬೆಂಗಳೂರಿನ ಬನಶಂಕರಿ, ಸವದತ್ತಿ ಎಲ್ಲಮ್ಮ, ಮೈಸೂರಿನ ಚಾಮುಂಡೇಶ್ವರಿ, ನಂಜನಗೂಡಿನ ಶ್ರೀಕಂಠೇಶ್ವರ, ಕಟೀಲು ದುರ್ಗಾಪರಮೇಶ್ವರಿ, ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಹಲವು ಪ್ರಮುಖ ದೇವಸ್ಥಾನಗಳಲ್ಲಿ ಪೂಜೆ ನೇರ ಪ್ರಸಾರ ಹಾಗೂ ಆನ್‍ಲೈನ್ ವ್ಯವಸ್ಥೆ ಮಾಡಲಾಗುತ್ತಿದ್ದು, ಈ ತಿಂಗಳ ಅಂತ್ಯಕ್ಕೆ ಈ ವ್ಯವಸ್ಥೆ ಜಾರಿಗೆ ಬರಲಿದೆ ಎಂದರು.

ರಾಜ್ಯದಲ್ಲಿ ಅರ್ಚಕರಿಗೆ ಸಾಕಷ್ಟು ಸಮಸ್ಯೆಯಾಗಿದೆ. ಹೀಗಾಗಿ ಮೂರು ತಿಂಗಳ ತಸ್ತೀಕ್ ಬಿಡುಗಡೆಗೆ ಮನವಿ ಮಾಡಿದ್ದು, ಮುಖ್ಯಮಂತ್ರಿ ಯಡಿಯೂರಪ್ಪನವರ ಸೂಚನೆ ಮೇರೆಗೆ 33.66 ಕೋಟಿ ರೂ.ಹಣ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಈಗಾಗಲೇ ಆರ್ಥಿಕ ಇಲಾಖೆ ಹಣ ಬಿಡುಗಡೆ ಮಾಡಿದ್ದು, 29,700 ದೇವಳಗಳ ಅರ್ಚಕರಿಗೆ ಮೂರು ತಸ್ತೀಕ್ ಬಿಡುಗಡೆ ಮಾಡಲಾಗುವುದು ಎಂದು ಅವರು ತಿಳಿಸಿದರು.

ದೇಗುಲಗಳ ಪ್ರಾರಂಭಕ್ಕೆ ಅರ್ಚಕರು ಮನವಿ ಮಾಡಿದ್ದು, ಅವರು ತಟ್ಟೆಕಾಸನ್ನೇ ನಂಬಿಕೊಂಡಿದ್ದಾರೆ. ಕೊರೋನ ಲಾಕ್‍ಡೌನ್‍ನಿಂದ ಅವರಿಗೆ ಸಮಸ್ಯೆಯಾಗಿದ್ದು. ಅವರಿಗೆ ಆಹಾರದ ಕಿಟ್ ವಿತರಣೆ ಮಾಡುತ್ತಿದ್ದೇವೆ. ದೇಗುಲಗಳು ಪ್ರಾರಂಭವಾದರೆ ಅವರ ಸಮಸ್ಯೆ ಬಗೆಹರಿಯಲಿದೆ. ಹೀಗಾಗಿ ಅವರು ದೇವಸ್ಥಾನಗಳ ಪ್ರಾರಂಭಕ್ಕೆ ಆಗ್ರಹಿಸಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಅದು ಸಾಧ್ಯವಿಲ್ಲ'

-ಕೋಟ ಶ್ರೀನಿವಾಸಪೂಜಾರಿ, ಮುಜರಾಯಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News