ರೈತ ಮಹಿಳೆಯಲ್ಲಿ ಕ್ಷಮೆ ಕೇಳುತ್ತೇನೆ, ರಾಜೀನಾಮೆಗೂ ಸಿದ್ಧ: ಸಚಿವ ಮಾಧುಸ್ವಾಮಿ

Update: 2020-05-21 15:34 GMT

ಬೆಂಗಳೂರು, ಮೇ 21: ನಾನು ಹಿರಿತನದ ಆಧಾರದ ಮೇಲೆ ಹಾಗೆ ಹೇಳಿದ್ದೇನೆ. ಅವರಿಗೆ(ರೈತ ಮಹಿಳೆ) ಬೇಸರ ಆಗಿದ್ದರೆ ನಾನೂ ಕ್ಷಮೆ ಕೇಳುತ್ತೇನೆ. ಸಿಎಂ ಕೇಳಿದರೂ ನಾನು ಅವರಿಗೆ ನಡೆದ ಘಟನೆಯನ್ನೇ ವಿವರಿಸುತ್ತೇನೆ. ರಾಜೀನಾಮೆ ಕೊಡಿ ಎಂದರೂ ಕೊಡುತ್ತೇನೆ. ಸ್ವಾಭಿಮಾನಕ್ಕಿಂತ ದೊಡ್ಡದು ಯಾವುದೂ ಇಲ್ಲ ಎಂದು ಬುಧವಾರ ಕೋಲಾರದಲ್ಲಿ ನಡೆದಿರುವ ಅಹಿತಕರ ಘಟನೆ ಬಗ್ಗೆ ಸಚಿವ ಮಾಧುಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.

ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋಲಾರಕ್ಕೆ ನೀರು ಹರಿಸುವ ವಿಚಾರ ವಿಧಾನಸಭೆಯಲ್ಲೂ ಈಗಾಗಲೇ ಚರ್ಚೆಯಾಗಿದೆ. ಕೆರೆಗೆ ನೀರು ಹರಿಸುವ ವಿಚಾರದಲ್ಲಿ ಸ್ವಲ್ಪ ಗೊಂದಲವಿತ್ತು. ಎಸ್ ಅಗ್ರಹಾರ ಕೆರೆ ಈಗಾಗಲೇ ತುಂಬಿದ್ದು, ಜನ್ನಘಟ್ಟ ಕೆರೆಗೆ ನೀರು ಹರಿಯಬೇಕಿದೆ. ಜನ್ನಘಟ್ಟದಿಂದ ಬೇರೆ ಕೆರೆಗೆ ನೀರು ತುಂಬಿಸಲು ಯೋಜನೆ ರೂಪಿಸಲಾಗಿದೆ. ಆ ಕಾರಣ, ಎಸ್ ಅಗ್ರಹಾರ ಕೆರೆ ವೀಕ್ಷಣೆ ಮಾಡಲು ಹೋದಾಗ ಘಟನೆ ನಡೆಯಿತು ಎಂದು ತಿಳಿಸಿದರು.  

ಆ ವೇಳೆಯಲ್ಲಿ ಹಾಜರಿದ್ದ ಮಹಿಳೆಯರ ಅಹವಾಲು ಸ್ವೀಕಾರ ಮಾಡಲಾಗಿತ್ತು. ಮಹಿಳೆಯರ ಅಹವಾಲು ಪಡೆಯುವಾಗ ಸಣ್ಣ ನೀರಾವರಿ ಕಾರ್ಯದರ್ಶಿ ವಿವರಣೆ ನೀಡುತ್ತಿದ್ದರು. ಆದರೆ, ಈ ಸಂದರ್ಭದಲ್ಲಿ ಮಹಿಳೆಯೊಂದಿಗೆ ಸ್ವಲ್ಪ ಏರುಗತಿಯಲ್ಲಿ ಮಾತುಕತೆ ನಡೆಯಿತು. ಆ ವೇಳೆಯಲ್ಲಿ ಮಹಿಳೆಯೂ ನನ್ನ ವಿರುದ್ಧ ವಾಗ್ದಾಳಿ ನಡೆಸಿದರು. ಈ ಹಂತದಲ್ಲಿ ರಾಸ್ಕಲ್, ಬಾಯಿ ಮುಚ್ಚಿ ಅಂತ ಹೇಳಿದ್ದು ಸತ್ಯ. ನನ್ನ ವಿರುದ್ಧ ಕೂಗಾಡಿದ್ದರಿಂದ ನಾನು ಬಾಯಿ ಮುಚ್ಚಿ ಅಂತ ಹೇಳಿದ್ದು ಸರಿಯಾಗಿದೆ. ನಾನು ಈಗ ಆ ವಿಚಾರದಲ್ಲಿ ಕ್ಷಮೆ ಕೇಳಿದ್ದೇನೆ ಎಂದು ತಿಳಿಸಿದರು.

ಬಂದ ಜನರೆಲ್ಲ ಇದೇ ರೀತಿ ಮಾತನಾಡಿದರೆ ಹೇಗೆ ಸ್ಥಳ ಪರಿಶೀಲನೆ ಮಾಡುವುದು, ಯೋಜನೆಗಳ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಲಾಗುವುದು. ಈ ಬಗ್ಗೆ ನಾನು ಸಿಎಂ ಬಳಿ ವಿವರಣೆ ನೀಡುತ್ತೇನೆ. ಹಾಗೊಂದು ಬಾರಿ ರಾಜೀನಾಮೆ ಕೊಡಿ ಎಂದು ಹೇಳಿದರೆ, ರಾಜೀನಾಮೆ ಕೊಡುತ್ತೇನೆ. ನನ್ನಿಂದ ಸರಕಾರಕ್ಕೆ, ಪಕ್ಷಕ್ಕೆ ತೊಂದರೆಯಾದರೆ ರಾಜೀನಾಮೆ ನೀಡುತ್ತೇನೆ. ಸ್ವಾಭಿಮಾನಕ್ಕೆ ಧಕ್ಕೆ ಆದರೆ ಯಾವುದೇ ಕಾರಣಕ್ಕೂ ಸುಮ್ಮನಿರಲು ಸಾಧ್ಯವಿಲ್ಲ ಎಂದು ಪ್ರತಿಕ್ರಿಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News