ಲಾಕ್​ಡೌನ್ ಎಫೆಕ್ಟ್: ಶಾಲಾ ವಾಹನ ಚಾಲಕರ ಸಂಕಷ್ಟ ಕೇಳುವವರೇ ಇಲ್ಲ

Update: 2020-05-21 17:21 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ 21: ಕೋವಿಡ್-19ರ ಲಾಕ್ಡೌನ್ ಕೂಲಿಕಾರ್ಮಿಕರು, ಅಸಂಘಟಿತ ಕಾರ್ಮಿಕರಿಗೆ ಸಾಕಷ್ಟು ಸಮಸ್ಯೆಯನ್ನು ತಂದೊಡ್ಡಿದೆ. ಇದೇ ವಲಯದಲ್ಲಿ ಗುರುತಿಸಲ್ಪಡುವ ಶಾಲಾ ವಾಹನ ಚಾಲಕರ ಸಂಕಷ್ಟಗಳು ಹೆಚ್ಚುತ್ತಿದ್ದು, ಇದರ ಪರಿಹಾರಕ್ಕೆ ಯಾರು ಮುಂದಾಳತ್ವ ವಹಿಸದಿರುವುದು ಸಮಸ್ಯೆಗಳು ಹಾಗೆಯೇ ಮುಂದುವರಿಯಲು ಮುಖ್ಯವಾದ ಕಾರಣಗಳಲ್ಲಿ ಒಂದಾಗಿದೆ.

ಬೆಂಗಳೂರಿನಲ್ಲಿ ಒಂದೊಂದು ಬೀದಿಗೆ ಒಂದೊಂದು ಖಾಸಗಿ ಶಾಲೆಗಳು ತಲೆಯೆತ್ತಿವೆ. ಈ ಶಾಲೆಗಳಲ್ಲಿ ಕನಿಷ್ಠ ಮೂರರಿಂದ ನಾಲ್ಕು ಶಾಲಾ ವಾಹನಗಳಿಂದ ಪ್ರಾರಂಭಗೊಂಡು, ಪ್ರತಿಷ್ಠಿತ ಶಾಲೆಗಳಲ್ಲಿ 100ರಿಂದ 200 ಶಾಲಾ ವಾಹನಗಳಿವೆ. ಬೆಂಗಳೂರು ನಗರ ಒಂದರಲ್ಲೇ ಸಾವಿರಾರು ಸಂಖ್ಯೆಯಲ್ಲಿ ಶಾಲಾ ವಾಹನ ಚಾಲಕರು ಹಾಗೂ ನಿರ್ವಾಹಕರು ಇದ್ದಾರೆ. ಆದರೆ ಇವರು ಕಳೆದ ಎರಡು-ಮೂರು ತಿಂಗಳಿಂದ ಸಂಬಳವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಲಾಕ್ಡೌನ್ ನಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಖಾಸಗಿ ಶಾಲೆಗಳು ತಮ್ಮ ಶಿಕ್ಷಕರಿಗೆ ಸಂಬಳವನ್ನು ಕೊಡಲು ಹಿಂದು ಮುಂದು ನೋಡುತ್ತಿವೆ. ಹೀಗಾಗಿಯೇ ವಿಧಾನಪರಿಷತ್ ಸದಸ್ಯರು ಅನುದಾನ ರಹಿತ ಶಾಲಾ ಶಿಕ್ಷಕರಿಗೆ ಆರ್ಥಿಕ ಸಹಾಯ ಮಾಡಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಳಿ ಮನವಿ ಮಾಡಿದ್ದಾರೆ. ಈ ಬಗ್ಗೆ ಇನ್ನು ರಾಜ್ಯ ಸರಕಾರ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಖಾಸಗಿ ಶಾಲಾ ವಾಹನ ಚಾಲಕರ ಪರಿಸ್ಥಿತಿ ಶೋಚನೀಯವಾಗಿದೆ.

ಆಟೋ, ಟ್ಯಾಕ್ಸಿ ಚಾಲಕರಿಗೆ ರಾಜ್ಯ ಸರಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ. ಅದೇ ಮಾದರಿಯಲ್ಲಿ ಶಾಲಾ ವಾಹನಗಳ ಚಾಲಕರಿಗೆ ಆರ್ಥಿಕ ಸಹಾಯ ಮಾಡಲಿ. ನಾವು ಇಡೀ ವರ್ಷ ಮಕ್ಕಳನ್ನು ಸುರಕ್ಷಿತವಾಗಿ ಮನೆಯಿಂದ ಶಾಲೆಗೆ, ಶಾಲೆಯಿಂದ ಮನೆಗೆ ಬಿಡುತ್ತೇವೆ. ಆದರೆ, ಕೊರೋನದಂತಹ ಸಂದರ್ಭದಲ್ಲಿ ನಮ್ಮ ಹಾಗೂ ಮಕ್ಕಳ ರಕ್ಷಣೆ ಮಾಡುವವರು ಇಲ್ಲವಾಗಿದ್ದಾರೆಂದು ಶಾಲಾ ವಾಹನ ಚಾಲಕ ಯೋಗೇಶ್ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಖಾಸಗಿ ಶಾಲಾ ಶಿಕ್ಷಕರ ಸಮಸ್ಯೆಯ ಪರಿಹಾರಕ್ಕೆ, ಆಟೋ, ಟ್ಯಾಕ್ಸಿ ಚಾಲಕರಿಗಾಗಿ ಹೋರಾಟ ಮಾಡಿ ಅದರ ಸಮಸ್ಯೆಗಳ ನಿವಾರಿಸುವುದಕ್ಕೆ ಸಂಘ, ಸಂಸ್ಥೆಗಳಿವೆ. ಆದರೆ, ಶಾಲಾ ವಾಹನ ಚಾಲಕರ ಸಮಸ್ಯೆಗಳನ್ನು ಕೇಳುವವರು ಇಲ್ಲವಾಗಿದ್ದಾರೆ. ಹೀಗಾಗಿ ರಾಜ್ಯ ಸರಕಾರವೇ ನಮ್ಮ ಬಗ್ಗೆ ವಿಶೇಷ ಕಾಳಜಿ ವಹಿಸಿ, ಆರ್ಥಿಕ ಸಹಾಯ ಮಾಡಬೇಕೆಂದು ಅವರು ಮನವಿ ಮಾಡಿದ್ದಾರೆ.

ನಾನು ಖಾಸಗಿ ಶಾಲೆಯೊಂದರ ವಾಹನ ಚಾಲಕನಾಗಿದ್ದೇನೆ. ನನಗೆ ತಿಂಗಳಿಗೆ 14 ಸಾವಿರ ರೂ. ಸಿಗುತ್ತಿತ್ತು. ಆದರೆ, ಮಾರ್ಚ್ ತಿಂಗಳು 7ಸಾವಿರ ರೂ.ನಷ್ಟೆ ಕೊಟ್ಟಿದ್ದಾರೆ. ಎಪ್ರಿಲ್ ತಿಂಗಳ ಸಂಬಳ ಕೊಟ್ಟಿಲ್ಲ. ಇನ್ನು ಶಾಲೆ ಪ್ರಾರಂಭವಾಗುವವರೆಗೆ ನಮಗೆ ಸಂಬಳವಿಲ್ಲವೆಂದು ಶಾಲಾ ಮುಖ್ಯಸ್ಥರು ತಿಳಿಸಿದ್ದಾರೆ. ಬೇರೆ ಯಾವ ಕೆಲಸವು ಸಿಗುತ್ತಿಲ್ಲ. ಸರಕಾರದ ಪಡಿತರ ಧಾನ್ಯ ಸಿಕ್ಕಿದೆ. ಅದರಲ್ಲಿ ಜೀವನ ಮಾಡುತ್ತಿದ್ದೇವೆ. ಸರಕಾರದ ವತಿಯಿಂದ ಕನಿಷ್ಠ 5 ಸಾವಿರ ರೂ. ಆರ್ಥಿಕ ಸಹಾಯ ಮಾಡಿದರೆ ಮನೆ ನಿರ್ವಹಿಸಲು ಸಾಧ್ಯವಾಗುತ್ತದೆ.
-ವೆಂಕಟೇಶ್, ಅತ್ತಿಬೆಲೆ, ಖಾಸಗಿ ವಾಹನ ಚಾಲಕ   

ಬೆಂಗಳೂರು ನಗರದಲ್ಲಿ ಸುಮಾರು 35ಸಾವಿರಕ್ಕೂ ಹೆಚ್ಚು ಶಾಲಾ ವಾಹನ ಚಾಲಕರಿದ್ದಾರೆ. ಇವರು ಶಾಲಾ ವೇತನವನ್ನೇ ನಂಬಿಕೊಂಡು ಜೀವನ ಮಾಡುವವರು. ಕೋವಿಡ್-19ರ ಸಂಕಷ್ಟದ ಪರಿಸ್ಥಿತಿಯಲ್ಲಿ ಖಾಸಗಿ ಶಾಲಾ ಆಡಳಿತ ಮಂಡಳಿಗಳು ತಮ್ಮ ಸಂಸ್ಥೆಯ ವಾಹನ ಚಾಲಕರನ್ನು ಕೈ ಬಿಡಬಾರದು. ಹಾಗೂ ಸರಕಾರವು ಇವರ ಸಹಾಯಕ್ಕೆ ಬರಬೇಕು.
-ಗಂಡಸಿ ಸದಾನಂದ ಸ್ವಾಮಿ, ಅಧ್ಯಕ್ಷರು, ರಾಷ್ಟ್ರೀಯ ವಾಹನ ಚಾಲಕರ ಒಕ್ಕೂಟ

Writer - ಮಂಜುನಾಥ ದಾಸನಪುರ

contributor

Editor - ಮಂಜುನಾಥ ದಾಸನಪುರ

contributor

Similar News